ತಗ್ಗಿಬಗ್ಗಿ ನಡೆಯೋಕೆ ಬೆಂಗಳೂರು ನಿಮ್ಮ ಜಹಗೀರೇ? ಡಿಕೆಶಿ ಹೇಳಿಕೆಗೆ ಅಶೋಕ್‌ ಕಿಡಿ

ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಂಡಿದ್ದೀರಾ?, ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು ಪಾಳೆಗಾರಿಕೆ ಅಲ್ಲ ಎಂದು ಡಿಕೆ ಶಿವಕುಮಾರ್‌ ಅವರಿಗೆ ಆರ್‌. ಅಶೋಕ್‌ ತಿರುಗೇಟು ನೀಡಿದ್ದಾರೆ.

Update: 2024-11-07 10:04 GMT

ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಅನುದಾನ ನೀಡದ ವಿಚಾರ ಈಗ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.

ಅನುದಾನ ನೀಡದಿರುವ ವಿಚಾರವನ್ನು ಬುಧವಾರ ಸಂಸದ ತೇಜಸ್ವಿ ಸೂರ್ಯ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಎದುರು ಪ್ರಸ್ತಾಪಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಶಿವಕುಮಾರ್‌ ಅವರು, ಶಾಸಕ ಕೆ.ಸಿ. ರಾಮಮೂರ್ತಿ ಮಾತು ಜಾಸ್ತಿಯಾಗಿದೆ. ನನ್ನ ಬಳಿ ತಗ್ಗಿಬಗ್ಗಿ ಇರಬೇಕು ಎಂದು ಕಿಡಿಕಾರಿದ್ದರು.

ಇದೀಗ ಡಿ.ಕೆ. ಶಿವಕುಮಾರ್‌ ಅವರ ತಗ್ಗಿ ಬಗ್ಗಿ ನಡೆಯಬೇಕೆಂಬ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳಲು ಬೆಂಗಳೂರೇನು ನಿಮ್ಮ ಜಹಗೀರೇ? ಎಂದು ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

‘ಅನುದಾನ ಬೇಕಾದರೆ ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಲೇಟೆಸ್ಟ್ ಅಣಿಮುತ್ತುಗಳು. ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಂಡಿದ್ದೀರಾ?, ಅಧಿಕಾರ ಎನ್ನುವುದು ಮತದಾರರು ಕೊಟ್ಟಿರುವ ಭಿಕ್ಷೆ, ಸಂವಿಧಾನ ಕೊಟ್ಟಿರುವ ಜವಾಬ್ದಾರಿಯೇ ಹೊರತು; ಪಾಳೆಗಾರಿಕೆ ಅಲ್ಲ ಎಂದು ನೆನಪಿಟ್ಟುಕೊಳ್ಳಿ. ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತದಾರರು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಮಾತ್ರ. ಯಾವ ದೊಣ್ಣೆ ನಾಯಕನಿಗೂ ಅಲ್ಲ’ ಎಂದು ಅಶೋಕ್ ಕಿಡಿಕಾರಿದ್ದಾರೆ.

ನಿಮ್ಮ(ಡಿ.ಕೆ.ಶಿವಕುಮಾರ್) ಒಣ ಪ್ರತಿಷ್ಠೆ, ಧಿಮಾಕು, ದರ್ಬಾರು ಎಲ್ಲ ಬಿಟ್ಟು ಜನರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ. ಯಾವುದೇ ಕ್ಷೇತ್ರದ ಬಗ್ಗೆ ತಾರತಮ್ಯ ಮಾಡದೆ ಸಚಿವರಾಗಿ ನಿಮ್ಮ ಕರ್ತವ್ಯ ನಿರ್ವಹಿಸಿ’ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಅಶೋಕ್ ಸಲಹೆ ನೀಡಿದ್ದಾರೆ.

ಈ ಮಧ್ಯೆ ಆರ್. ಅಶೋಕ್ ಟ್ವೀಟ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾನು ಆ ರೀತಿ ಹೇಳಿದ್ದು ಸಿ.ಕೆ. ರಾಮಮೂರ್ತಿ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರ ಬಳಿ. ನಾನು ಶಾಸಕನಾದ ಮೇಲೆ ಬೆಂಗಳೂರು ಅಧೋಗತಿಗೆ ಹೋಗಿದೆ ಎಂದು ರಾಮಮೂರ್ತಿ ಟೀಕಿಸಿದ್ದರು. ಅದಕ್ಕೆ ಹಾಗೆ ಹೇಳಿದ್ದೆ. ಜೊತೆಗೆ ಕ್ಷೇತ್ರಕ್ಕೆ ಏನು ಅಗತ್ಯವಿದೆಯೋ ಅದರ ಲೆಕ್ಕ ಕೊಡಿ ಅಂತಲೂ ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Similar News