The Federal Karnataka Reality Check | ಭಾರೀ ಟ್ರಾಫಿಕ್‌ನಿಂದಾಗಿ ತೆವಳುತ್ತಾ ಸಾಗುತ್ತಿದೆ ಬೆಂಗಳೂರು

Federal Karnataka Reality check: ಸರ್ಜಾಪುರ ರಸ್ತೆಯಿಂದ 5ಕಿ.ಮೀ ದೂರದ ಕಾಡುಬೀಸನಹಳ್ಳಿಗೆ ಆಟೋ ಮೂಲಕ ಪ್ರಯಾಣ ಮಾಡಲಾಯಿತು. ಬೆಳಗ್ಗಿನ ಪೀಕ್‌ ಆವರ್‌ನಲ್ಲಿ ಈ ನಾಲ್ಕು ಕಿ.ಮೀ ದೂರ ತಲುಪಲು ಬರೋಬ್ಬರಿ 40 ನಿಮಿಷ ಬೇಕಾಯಿತು.;

Update: 2025-01-26 07:53 GMT
ಬೆಂಗಳೂರು ಟ್ರಾಫಿಕ್‌ ಪ್ರಾತಿನಿಧಿಕ ಚಿತ್ರ.

ಟ್ರಾಫಿಕ್ ಜಾಮ್‌ನಿಂದಾಗಿ ಸದಾ ಸುದ್ದಿಯಾಗುವ ಸಿಲಿಕಾನ್‌ ಸಿಟಿ ಬೆಂಗಳೂರು ಇದೀಗ ದೇಶದ ಗಡಿ ದಾಟಿ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಅದಕ್ಕೆ ಕಾರಣ ಬೆಂಗಳೂರಿನ ಸಂಚಾರ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು. ನೆದರ್ಲೆಂಡ್ಸ್‌ನ ಲೋಕೆಷನ್ ಟೆಕ್ನಾಲಜಿ ಸಂಸ್ಥೆ ʻಟಾಮ್ ಟಾಮ್ʼ ಬಿಡುಗಡೆ ಮಾಡಿರೋ ವರದಿಯ ಪ್ರಕಾರ ಬೆಂಗಳೂರು ವಿಶ್ವದ ಅತಿಹೆಚ್ಚು ಸ್ಲೋ ಮೂವಿಂಗ್ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದೆ. ಎಷ್ಟೆಂದರೆ ಪ್ರತಿ 10 ಕಿಲೊ ಮೀಟರ್ ಪ್ರಯಾಣ ಮಾಡಲು ಸರಾಸರಿ 34 ನಿಮಿಷ 10 ಸೆಕೆಂಡುಗಳು ಬೇಕಾಗುತ್ತವೆ. 2023ಕ್ಕೆ ಹೋಲಿಸಿದರೆ 50 ಸೆಕೆಂಡುಗಳಷ್ಟು ಹೆಚ್ಚಳವಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಿದೆ.

ಈ ವರದಿಯನ್ನು ಆಧರಿಸಿ ʼದ ಫೆಡರಲ್‌ ಕರ್ನಾಟಕʼ ತಂಡ ರಿಯಾಲಿಟಿ ಚೆಕ್‌ಗೆ ಇಳಿಯಿತು. ಅತೀ ಹೆಚ್ಚು ಟ್ರಾಫಿಕ್‌ ಇರುವ ಪ್ರದೇಶ ಸರ್ಜಾಪುರ ರಸ್ತೆಯಿಂದ 5ಕಿ.ಮೀ ದೂರದ ಕಾಡುಬೀಸನಹಳ್ಳಿಗೆ ಆಟೋ ಮೂಲಕ ಪ್ರಯಾಣ ಮಾಡಲಾಯಿತು. ಬೆಳಗ್ಗಿನ ಪೀಕ್‌ ಆವರ್‌ನಲ್ಲಿ ಈ ನಾಲ್ಕು ಕಿ.ಮೀ ದೂರ ತಲುಪಲು ಬರೋಬ್ಬರಿ 40 ನಿಮಿಷ ಬೇಕಾಯಿತು.

ಅದೇ ರೀತಿ ಅತೀ ಹೆಚ್ಚು ಟ್ರಾಫಿಕ್‌ ಇರುವ ಸ್ಥಳ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಹೆಬ್ಬಾಳಕ್ಕೂ ಪ್ರಯಾಣ ಮಾಡಲಾಯಿತು. ನಾಗವಾರದಿಂದ ಹೆಬ್ಬಾಳಕ್ಕೆ ಟ್ರಾಫಿಕ್‌ನಲ್ಲಿ ಬರೋಬ್ಬರಿ 1 ಗಂಟೆಗಳ ಕಾಲ ಕಳೆಯಬೇಕಾಯಿತು. ಈ ಟ್ರಾಫಿಕ್‌ ಎಷ್ಟಿತ್ತೆಂದರೆ ಒಂದು ಸಣ್ಣ ನಿದ್ದೆ ಮಾಡಿದೆವು.

Full View

ಇದೇ ರೀತಿ ನಗರದ ನಾನಾ ಪ್ರದೇಶಗಳಿಗೆ ಸಂಚರಿಸಿ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಎಷ್ಟಿದೆ ಹಾಗೂ ಅದಕ್ಕೆ ಮೂಲ ಕಾರಣವೇನು ಎಂಬುದನ್ನು ಗಮನಿಸಿದೆವು.

ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಕಾರಣಗಳೇನು?

ಬೆಂಗಳೂರಿನಲ್ಲಿ ಸಾವಿರಾರು ಐಟಿ ಬಿಟಿ ಕಂಪೆನಿಗಳು ನೆಲೆಕಂಡಿವೆ. ದೇಶ , ವಿದೇಶಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ವಾಹನಗಳ ಸಂಚಾರಕ್ಕೆ ಅಡೆತಡೆ ಆಗುವುದರಿಂದ ಟ್ರಾಫಿಕ್ ನಿಧಾನಗತಿಯಲ್ಲಿ ಸಾಗುತ್ತದೆ.ಬಿಎಂಟಿಸಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಇಳಿಸಲು ರಸ್ತೆ ಮಧ್ಯೆಯೆ ಬಸ್‌ಗಳನ್ನು ನಿಲ್ಲಿಸುವುದು ಕೂಡ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕ್ ಮಾಡುವುದು ಕಂಡುಬರುತ್ತದೆ. ಇದರಿಂದಾಗಿ ಸಂಚಾರಕ್ಕೆ ಸಿಗುವ ರಸ್ತೆ ಕಿರಿದಾಗಿ, ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ.

ಯಾವ ಪ್ರದೇಶಗಳಲ್ಲಿ ಟ್ರಾಫಿಕ್‌

ಮಾರತಹಳ್ಳಿ, ವೈಟ್‌ಫೀಲ್ಡ್‌, ಸಿಲ್ಕ್‌ ಬೋರ್ಡ್‌ , ಕೋರಮಂಗಲ ಕೆ. ಆರ್‌ ಪುರಂ, ಹೆಬ್ಬಾಳ ಮುಂತಾದ ಪ್ರದೇಶದಲ್ಲಿ ವಾಹನಗಳು ಸಾಲುಗಟ್ಟಿ ಗಂಟೆಗಳ ಕಾಲ ನಿಲ್ಲುವಂತಾಗಿದೆ. ಸಾವಿರಕ್ಕೂ ಅಧಿಕ ಕಂಪನಿಗಳು ಮಾರತ್‌ಹಳ್ಳಿ-ಬೆಳಂದೂರು ರಸ್ತೆ, ವೈಟ್‌ಫೀಲ್ಡ್‌ನಲ್ಲಿವೆ. ಹೀಗಾಗಿ ಒಂದೇ ಸಮಯಕ್ಕೆ ಈ ಕಂಪನಿಯ ಉದ್ಯೋಗಿಗಳು ಬರುತ್ತಿರುವುದು ಕೂಡ ವಾಹನದಟ್ಟನೆಗೆ ಕಾರಣವಾಗಿದೆ. ಮಾರತ್ ಹಳ್ಳಿ ಕಡೆಗೂ ಬೆಳ್ಳಂದೂರು ಕಡೆಗೂ 4-5 ಕಿಲೋಮೀಟರ್ ದೂರ ವಾಹನಗಳು ನಿಂತು ಬಿಡುತ್ತವೆ.

ಟಾಮ್‌ ಟಾಮ್‌ ವರದಿ ಏನು ಹೇಳುತ್ತದೆ

ಭಾರತದ ಮೂರು ನಗರಗಳಾದ ಕಲ್ಕತ್ತಾ, ಪುಣೆ ಹಾಗೂ ಬೆಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಫಿಕ್‌ ಇದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರೀ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ನಿಧಾನಗತಿಯ ಟ್ರಾಫಿಕ್​ನಿಂದಾಗಿ ಜನರು 1 ವರ್ಷದಲ್ಲಿ 5 ದಿನಗಳಷ್ಟು ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯುತ್ತಿದ್ದಾರೆ ಎಂದು ಟಾಮ್‌ ಟಾಮ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು ಪೊಲೀಸರು ಹೇಳುವುದೇನು?

ಟಾಮ್‌ಟಾಮ್‌ ವರದಿಯಲ್ಲಿರುವ ಸ್ಲೋ ಮೂವಿಂಗ್ ಟ್ರಾಫಿಕ್ ವಿಷಯವನ್ನು ಬೆಂಗಳೂರು ಪೊಲೀಸರು ತಳ್ಳಿ ಹಾಕಿದ್ದಾರೆ. ಈ ವರದಿಗಳು ನಿಜವಲ್ಲ ಎಂದು ಹೇಳಿದ್ದಾರೆ. ಸಮೀಕ್ಷೆಗೆ ಬಳಸಲಾದ ದತ್ತಾಂಶಗಳು, ಪರಿಗಣಿಸಲಾದ ವಾಹನಗಳ ಪ್ರಕಾರಗಳು, ಆಯ್ಕೆ ಮಾಡಿದ ರಸ್ತೆಗಳು ಮತ್ತು ಸಮೀಕ್ಷೆ ನಡೆಸಿದ ವಾರದ ದಿನಗಳ ಬಗ್ಗೆ ವರದಿಯಲ್ಲಿ ಸ್ಪಷ್ಟತೆ ಇಲ್ಲ. ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ ಬೆಂಗಳೂರಿನಲ್ಲಿ ಸಂಚಾರ ಪರಿಸ್ಥಿತಿ ಸಕ್ರಿಯವಾಗಿದೆ. ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತಹ ಸಣ್ಣಸಂಗತಿಗಳಿಂದ ಸುಗಮ ಪ್ರಯಾಣಕ್ಕೆ ತೊಂದರೆಯಾಗಬಹುದು. ವಾಹನಗಳ ವೇಗವು ಹಗಲು ಮತ್ತು ರಾತ್ರಿಯ ನಡುವೆ ಬದಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಸರಾಸರಿ ಸಮಯ ಹೇಗೆ ನಿರ್ಧರಿಸಬಹುದು? ಎಂದು ಜಂಟಿ ಪೊಲೀಸ್‌ ಆಯುಕ್ತ ಅನುಚೇತ್‌ ವರದಿಯನ್ನು ಪ್ರಶ್ನಿಸಿದ್ದಾರೆ.

ವರದಿಗಳೆನೇ ಹೇಳಿದರೂ ಬೆಂಗಳೂರು ನಗರಕ್ಕೆ ಟ್ರಾಫಿಕ್‌ ಜಾಮ್‌ ಎಂಬ ಕಳಂಕ ಇದ್ದೇ ಇದೆ. ಬೆಂಗಳೂರಿನ ಕೆಲ ಭಾಗಗಳಿಗೆ ತೆರಳಲು ಸಾಕಷ್ಟು ಸಮಯವನ್ನು ಟ್ರಾಫಿಕ್‌ನಲ್ಲೇ ಕಳೆಯಬೇಕಾಗುತ್ತದೆ. ಮೆಟ್ರೊ ಸಂಪರ್ಕ ಪೂರ್ಣಗೊಂಡ ಬಳಿಕ ವಾಹನದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿದೆ. ಆದರೆ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಸರಿಯಾದ ಯೋಜನೆಯನ್ನು ಸರ್ಕಾರ ರೂಪಿಸಬೇಕಿದೆ. 

Tags:    

Similar News