ಆಗಸ್ಟ್ 1 ರಿಂದ ಆಟೋ ದರ ಏರಿಕೆ; ಪ್ರಯಾಣಿಕರ ಜೇಬಿಗೆ ಕತ್ತರಿ
ಸಾರಿಗೆ ಇಲಾಖೆಯ ಇತ್ತೀಚಿನ ಆದೇಶದ ಪ್ರಕಾರ ಆಟೋರಿಕ್ಷಾದ ಕನಿಷ್ಠ ಪ್ರಯಾಣ ದರವನ್ನು ಈ ಹಿಂದಿನ 30 ರೂ.ಗಳಿಂದ 36 ರೂ.ಗಳಿಗೆ ಏರಿಕೆ ಮಾಡಲಾಗಿದೆ.;
ನಾಳೆಯಿಂದ ಆಟೋಗಳ ದರ ಏರಿಕೆಯಾಗಲಿದೆ.
ರಾಜ್ಯದಲ್ಲಿ ಆಗಸ್ಟ್ 1 ರಿಂದ ಆಟೋ ಪ್ರಯಾಣ ದರ ಏರಿಕೆಯಾಗಲಿದೆ. ಈ ದರ ಏರಿಕೆಯು ಆಗಸ್ಟ್ 1, 2025 ರಿಂದ ಜಾರಿಗೆ ಬರಲಿದ್ದು, ಇದರಿಂದ ಆಟೋರಿಕ್ಷಾ ಸೇವೆ ಅವಲಂಬಿಸಿರುವ ಲಕ್ಷಾಂತರ ಜನರ ಮೇಲೆ ಆರ್ಥಿಕ ಪರಿಣಾಮ ಬೀರಲಿದೆ.
ಸಾರಿಗೆ ಇಲಾಖೆಯ ಇತ್ತೀಚಿನ ಆದೇಶದ ಪ್ರಕಾರ, ಆಟೋರಿಕ್ಷಾದ ಕನಿಷ್ಠ ಪ್ರಯಾಣ ದರವನ್ನು ಈ ಹಿಂದಿನ 30 ರೂಪಾಯಿಗಳಿಂದ 36 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ, ನಂತರದ ಪ್ರತಿ ಕಿಲೋಮೀಟರ್‌ಗೆ 3 ರೂ.ಹೆಚ್ಚುವರಿ ದರವನ್ನು ವಿಧಿಸಲಾಗುವುದು.
ಆಟೋ ದರ ಏರಿಕೆಗೆ ಸಾರಿಗೆ ಇಲಾಖೆಯು ಹಲವು ಕಾರಣಗಳನ್ನು ಮುಂದಿಟ್ಟಿದೆ. ಇಂಧನ ಬೆಲೆಗಳ ಏರಿಕೆ, ವಾಹನಗಳ ನಿರ್ವಹಣೆ ವೆಚ್ಚ, ಜೀವನ ವೆಚ್ಚದ ಹೆಚ್ಚಳ, ಮತ್ತು ಆಟೋ ಚಾಲಕರ ಆದಾಯದಲ್ಲಿ ಸುಧಾರಣೆಯ ಅಗತ್ಯವನ್ನು ಇಲಾಖೆಯು ದರ ಏರಿಕೆಗೆ ಪ್ರಮುಖ ಕಾರಣಗಳಾಗಿ ಉಲ್ಲೇಖಿಸಿದೆ. ಆಟೋ ಚಾಲಕರ ಸಂಘಗಳು ಕಳೆದ ಕೆಲವು ವರ್ಷಗಳಿಂದ ದರ ಏರಿಕೆಗೆ ಒತ್ತಾಯಿಸುತ್ತಿದ್ದವು. ಈ ಬೇಡಿಕೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಈಗ ದರ ಪರಿಷ್ಕರಣೆಗೆ ಮುಂದಾಗಿದೆ.
ಹೊಸ ದರ ಪಟ್ಟಿಯ ವಿವರ
ಪರಿಷ್ಕೃತ ದರ ಪಟ್ಟಿಯ ಪ್ರಕಾರ, ಆಟೋರಿಕ್ಷಾದ ಕನಿಷ್ಠ ಪ್ರಯಾಣ ದರವು ಈಗ 36 ರೂಪಾಯಿಗಳಾಗಿದೆ, ಇದು ಎರಡು ಕಿಲೋಮೀಟರ್‌ಗೆ ಸೀಮಿತವಾಗಿದೆ. ಈ ದರವು ಈ ಹಿಂದೆ 30 ರೂಪಾಯಿಗಳಾಗಿದ್ದು, 6 ರೂಪಾಯಿಗಳ ಏರಿಕೆಯಾಗಲಿದೆ. ಎರಡು ಕಿಲೋಮೀಟರ್‌ನ ನಂತರ, ಪ್ರತಿ ಕಿಲೋಮೀಟರ್‌ಗೆ 3 ರೂಪಾಯಿಗಳ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, 2 ಕಿಲೋಮೀಟರ್ ಪ್ರಯಾಣಕ್ಕೆ, ಪ್ರಯಾಣಿಕರು 36 ರೂಪಾಯಿ ಪಾವತಿಸಬೇಕು. ಆ ಬಳಿಕ ಪ್ರತೀ ಕಿ.ಲೋ ಮೀಟರ್‌ಗೆ 18 ರೂ ಹೆಚ್ಚಳವಾಗುತ್ತದೆ.
ಆಟೋ ಚಾಲಕರ ಸಂಘಗಳು ಈ ದರ ಏರಿಕೆಯನ್ನು ಸ್ವಾಗತಿಸಿವೆ. "ಕಳೆದ ಕೆಲವು ವರ್ಷಗಳಿಂದ ಇಂಧನ ಬೆಲೆ, ಗಾಡಿ ದುರಸ್ತಿ, ಮತ್ತು ಜೀವನ ವೆಚ್ಚ ಹೆಚ್ಚಾಗಿದೆ. ಆದರೆ, ಆಟೋ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಈ ದರ ಏರಿಕೆಯಿಂದ ಚಾಲಕರಿಗೆ ಸ್ವಲ್ಪ ಪರಿಹಾರ ಸಿಗಲಿದೆ," ಎಂದು ಬೆಂಗಳೂರು ಆಟೋ ಚಾಲಕರ ಸಂಘದ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ, ಚಾಲಕರು ದರ ಏರಿಕೆಯ ಲಾಭವನ್ನು ಸಂಪೂರ್ಣವಾಗಿ ಪಡೆಯಲು, ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಬೇಕಾಗಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.