ಇಂದಿನಿಂದ ಆಟೋ ಪ್ರಯಾಣ ದರ ದುಬಾರಿ, ಇಲ್ಲಿದೆ ಪರಿಷ್ಕೃತ ದರ ಪಟ್ಟಿ
ಸದ್ಯ ಬೆಂಗಳೂರಿನಲ್ಲಿ ಕನಿಷ್ಟ ಆಟೋ ಮೀಟರ್ ದರ 30 ರೂ ಇದೆ. ಆದರೆ ಇದೀಗ ಮೊದಲ 2 ಕಿ.ಮೀಟರ್ಗೆ 30 ರೂ. ಇದ್ದು, 36 ರೂ. ಗೆ ಹೆಚ್ಚಾಗಿದೆ.;
ಸಾಂದರ್ಭಿಕ ಚಿತ್ರ
ರಾಜಧಾನಿಯ ನಿವಾಸಿಗಳಿಗೆ ಇಂದಿನಿಂದ (ಆಗಸ್ಟ್ 1) ಆಟೋ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ. ಬೆಂಗಳೂರು ಜಿಲ್ಲಾಡಳಿತವು ಆಟೋ ಪ್ರಯಾಣ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಕನಿಷ್ಠ ದರವನ್ನು 30 ರಿಂದ 36 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಪರಿಷ್ಕೃತ ದರದ ಪ್ರಕಾರ, ಮೊದಲ 2 ಕಿಲೋಮೀಟರ್್ ಈ ಹಿಂದೆ ವಿಧಿಸಲಾಗುತ್ತಿದ್ದ ₹30ರ ಕನಿಷ್ಠ ದರವನ್ನು 36 ರೂ.ಗೆ ಹೆಚ್ಚಿಸಲಾಗಿದೆ. ನಂತರದ ಪ್ರತಿ ಕಿಲೋಮೀಟರ್ಗೆ 15ರ ಬದಲು 18 ರೂ. ಪಾವತಿಸಬೇಕಾಗುತ್ತದೆ. ರಾತ್ರಿ 10ರಿಂದ ಬೆಳಗ್ಗೆ 5ರ ವರೆಗಿನ ಪ್ರಯಾಣಕ್ಕೆ ಸಾಮಾನ್ಯ ದರದ ಒಂದೂವರೆ ಪಟ್ಟು (ಒನ್ ಆ್ಯಂಡ್ ಹಾಫ್) ಶುಲ್ಕ ವಿಧಿಸಲಾಗುತ್ತದೆ.
ಕಾಯುವಿಕೆ ಮತ್ತು ಲಗೇಜ್ ಶುಲ್ಕ ಹೀಗಿದೆ
ಪ್ರಯಾಣಿಕರಿಗಾಗಿ ಕಾಯುವ ಮೊದಲ ಐದು ನಿಮಿಷಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ನಂತರದ ಪ್ರತಿ 15 ನಿಮಿಷಗಳ ಕಾಯುವಿಕೆಗೆ 10 ರೂ. ಹೆಚ್ಚುವರಿ ಶುಲ್ಕ ನಿಗದಿಪಡಿಸಲಾಗಿದೆ. ಲಗೇಜ್ ವಿಚಾರದಲ್ಲಿ, 20 ಕೆ.ಜಿ.ವರೆಗಿನ ಲಗೇಜ್ಗೆ ಯಾವುದೇ ಶುಲ್ಕವಿಲ್ಲ. ಆದರೆ, 20 ಕೆ.ಜಿ.ಯಿಂದ 50 ಕೆ.ಜಿ.ವರೆಗಿನ ಲಗೇಜ್ಗೆ 10 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ದರ ಏರಿಕೆಯ ಜೊತೆಗೆ, ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪ್ರಯಾಣಿಕರು ಕರೆದ ಸ್ಥಳಕ್ಕೆ ಬರಲು ನಿರಾಕರಿಸುವ ಅಥವಾ ಹೆಚ್ಚು ಹಣ ಕೇಳುವ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಹಲವು ಆಟೋ ಸಂಘಟನೆಗಳು ಮತ್ತು ಚಾಲಕರ ಬೇಡಿಕೆಯ ಹಿನ್ನೆಲೆಯಲ್ಲಿ, ಆಟೋ ದರ ಪರಿಷ್ಕರಣಾ ಸಮಿತಿಯು ಮಾರ್ಚ್ ತಿಂಗಳಲ್ಲಿ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಅನುಮೋದನೆ ನೀಡಿದ್ದಾರೆ.