ಟಿಕೆಟ್ ಗಲಾಟೆ: ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಬಿಎಂಟಿಸಿ ಕಂಡಕ್ಟರ್
ಟಿಕೆಟ್ ನೀಡುವಂತೆ ತಂಜುಮ್ ಕೋರಿದ್ದರೂ, ನಿರ್ವಾಹಕ ಹೊನ್ನಪ್ಪ ಟಿಕೆಟ್ ನೀಡಲು ನಿರಾಕರಿಸಿದ್ದರು. ಅದೇ ವಿಚಾರವಾಗಿ ಜಗಳ ನಡೆದಿದೆ ಎಂದು ಆರೋಪಿಸಲಾಗಿದೆ.;
ಬೆಂಗಳೂರು: ಮಹಿಳಾ ಪ್ರಯಾಣಿಕರೋರ್ವರ ಮೇಲೆ ಬಿಎಂಟಿಸಿ ನಿರ್ವಾಹಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳವಾರ (ಮಾ.26) ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.
ಟಿಕೆಟ್ ವಿಚಾರವಾಗಿ ಮಹಿಳೆ ಕಂಡೆಕ್ಟರ್ ಜೊತೆಗೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿ ಕಂಡಕ್ಟರ್ ಕೆನ್ನೆಗೆ ಮಹಿಳೆ ಬಾರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ಆಕೆಯ ಮೇಲೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಘಟನೆಯ ದೃಶ್ಯವನ್ನು ಸಹಪ್ರಯಾಣಿಕರು ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ತಂಜುಮ್ ಎಂದು ಗುರುತಿಸಲಾಗಿದೆ. ಹಲ್ಲೆಗೈದ ಕಂಡಕ್ಟರ್ ನನ್ನು ಕೊತ್ತನೂರು ದಿಣ್ಣೆ ಡಿಪೊದ ನಿರ್ವಾಹಕ ಹೊನ್ನಪ್ಪ ಎಂದು ಗುರುತಿಸಲಾಗಿದೆ. ಸದ್ಯ, ಹೊನ್ನಪ್ಪನನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಳೇಕಹಳ್ಳಿಯಿಂದ ಶಿವಾಜಿನಗರಕ್ಕೆ (ಮಾರ್ಗ ಸಂಖ್ಯೆ 368) ಹೊರಟಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ. ವಿಡಿಯೊ ಪುರಾವೆ ಆಧರಿಸಿ ಹೊನ್ನಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಕೆಟ್ ನೀಡುವಂತೆ ತಂಜುಮ್ ಕೋರಿದ್ದರೂ, ನಿರ್ವಾಹಕ ಹೊನ್ನಪ್ಪ ಟಿಕೆಟ್ ನೀಡಲು ನಿರಾಕರಿಸಿದ್ದರು. ಅದೇ ವಿಚಾರವಾಗಿ ಜಗಳ ನಡೆದಿದೆ ಎಂದು ಆರೋಪಿಸಲಾಗಿದೆ.