ಬುಲ್ಡೋಡಾ ಉಕ್ಕು ಕಾರ್ಖಾನೆ ವರದಿ ನಂತರ ತೀರ್ಮಾನ: ಸಿಎಂ ಸಿದ್ದರಾಮಯ್ಯ
ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.;
ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಪ್ಪಳದ ಬಲ್ಡೋಟ ಉಕ್ಕು ಕಾರ್ಖಾನೆಯ ಕುರಿತು ವಿಸ್ತೃತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ವರದಿ ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಜಯನಗರದ ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಲ್ಡೋಟ ಉಕ್ಕು ಕಾರ್ಖಾನೆಯ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿದ್ದರೂ ಕೆಲಸ ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಯೋಜನೆಗಳಿಗೆ ಯಾವುದೇ ಹಣದ ಕೊರತೆಯಿಲ್ಲ. ಕಳೆದ ವರ್ಷದ ಬಜೆಟ್‌ನಂತೆಯೇ ಈ ಬಾರಿಯೂ ಅನುದಾನ ಮೀಸಲಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ರಚನೆ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೆಂಗಳೂರು ಬೃಹತ್ ನಗರವಾಗಿ ಬೆಳೆದಿದ್ದು, ಆಡಳಿತದ ಅನುಕೂಲಕ್ಕಾಗಿ ವಿಭಾಗಗಳನ್ನು ರಚಿಸುವ ಚಿಂತನೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಇತ್ತು. ಒಂದೂವರೆ ಕೋಟಿ ಜನರಿರುವ ನಗರದ ಆಡಳಿತವನ್ನು ಒಂದು ಪಾಲಿಕೆ ನಿರ್ವಹಿಸುವುದು ಕಷ್ಟಸಾಧ್ಯ. ಹೀಗಾಗಿ, ಆಡಳಿತಾತ್ಮಕ ದೃಷ್ಟಿಯಿಂದ ಮೂರು ಅಥವಾ ಹೆಚ್ಚಿನ ಮಹಾನಗರ ಪಾಲಿಕೆಗಳನ್ನು ರಚಿಸುವ ಚಿಂತನೆ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಗಂಗಾವತಿಯಲ್ಲಿ ಗೆಲುವು
ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅನರ್ಹತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನ್ಯಾಯಾಲಯವು ಅವರಿಗೆ ಏಳು ವರ್ಷಗಳ ಶಿಕ್ಷೆ ವಿಧಿಸಿರುವುದರಿಂದ ಅವರು ಸಂವಿಧಾನದ ಪ್ರಕಾರ ಅನರ್ಹರಾಗುತ್ತಾರೆ. ಉಪಚುನಾವಣೆ ಘೋಷಣೆಯಾದರೆ ಪಕ್ಷದ ನಿರ್ಧಾರದಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಗಂಗಾವತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತಾ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ವಿರುದ್ಧ ತಮ್ಮ ಹೋರಾಟ ಸ್ಮರಿಸಿದ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಮತ್ತು ಈ ದಂಧೆ ಸಂಪೂರ್ಣವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತ ವಿರೋಧಿ
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಜನಾರ್ದನ ರೆಡ್ಡಿ ಸಹಾಯ ಮಾಡಿದ್ದರು ಎಂಬ ಹೇಳಿಕೆಯನ್ನು ನಿರಾಕರಿಸಿದ ಸಿದ್ದರಾಮಯ್ಯ, ಅದು ಸುಳ್ಳು. ತಾವು ಸದಾ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸುತ್ತಾ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದರು.