ಆದಾಯ ತೆರಿಗೆ | ಡಿ ಕೆ ಶಿವಕುಮಾರ್‌ಗೆ ಮತ್ತೆ ಐಟಿ ನೋಟಿಸ್ !
ಈಚೆಗಷ್ಟೇ ಸುಪ್ರೀಂ ಕೋರ್ಟ್ ರಿಲೀಫ್ ನೀಡಿತ್ತು. ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಮತ್ತೆ ಶಾಕ್ ನೀಡಿದೆ.
ಇತ್ತೀಚೆಗಷ್ಟೇ ಡಿ ಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿತ್ತು. ಅವರ ವಿರುದ್ಧ 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಖಲಿಸಿದ್ದ ಪ್ರಕರಣವನ್ನು ಇದೇ ತಿಂಗಳು 5ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಡಿ.ಕೆ ಶಿವಕುಮಾರ್ ಅವರ ವಿರುದ್ಧ ತೆರಿಗೆ ವಂಚನೆ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಹವಾಲಾ ವ್ಯವಹಾರದ ಆರೋಪ ಕೇಳಿ ಬಂದಿತ್ತು.
ಜಾರಿ ನಿರ್ದೇಶನಾಲಯವು (ಇಡಿ) ಐಪಿಸಿ ಸೆಕ್ಷನ್ 120B ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಅದನ್ನು ರದ್ದು ಮಾಡಿತ್ತು. ಆದರೆ, ಇದೀಗ ಅವರಿಗೆ ಐಟಿಯಿಂದ ಮತ್ತೆ ನೋಟಿಸ್ ಜಾರಿಯಾಗಿದೆ.
ಈ ಹಿಂದೆ ಡಿ.ಕೆ ಶಿವಕುಮಾರ್ ಅವರ ವಿರುದ್ಧದ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಹ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಹಾಗಾಗಿ ಡಿ.ಕೆ ಶಿವಕುಮಾರ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿತ್ತು. "ಇದು ನನಗೆ ಗ್ರೇಟ್ ರಿಲೀಫ್" ಎಂದು ಡಿ.ಕೆ ಶಿವಕುಮಾರ್ ಆಗ ಸಂತೋಷ ವ್ಯಕ್ತಪಡಿಸಿದ್ದರು.
ಕೇಂದ್ರ ಸರ್ಕಾರವು ವಿವಿಧ ಪಕ್ಷಗಳಿಗೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಸಹ ಬಾಕಿ ಉಳಿಸಿಕೊಂಡಿದೆ. ಐಟಿ ಇಲಾಖೆ ಬಿಜೆಪಿಗೂ ನೋಟಿಸ್ ಜಾರಿ ಮಾಡಲಿ ಎಂದು ಆಗ್ರಹಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಿಗೂ ಐಟಿ ನೋಟಿಸ್ ಜಾರಿ ಮಾಡಿದೆ.