ಅಂಕೋಲ ಗುಡ್ಡಕುಸಿತ | ಕೇರಳ ಚಾಲಕ ಸೇರಿದಂತೆ ಇನ್ನೂ ಪತ್ತೆಯಾಗದ ಮೂವರಿಗಾಗಿ ಮುಂದುವರಿದ ಶೋಧ
ಶಿರೂರಿನಲ್ಲಿ ಗುಡ್ಡ ಕುಸಿದು ಆರು ದಿನವಾದರೂ ಹೆದ್ದಾರಿಯಮೇಲೆ ಬಿದ್ದ ಮಣ್ಣು ತೆರವುಕಾರ್ಯ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಿದ್ದು, ಗಂಗಾವಳಿ ನದಿಯನ್ನು ಆವರಿಸಿಕೊಂಡ ಗುಡ್ಡದ ಅಕ್ಕ ಪಕ್ಕದಲ್ಲಿನ ಗುಡ್ಡಗಳಿಂದ ನಿರಂತರವಾಗಿ ಜಲಧಾರೆ ಒಸರುತ್ತಿದೆ. ಗುಡ್ಡದ ಮೇಲಿಂದ ಮಣ್ಣಿನ ರಾಶಿ ಬೀಳುತ್ತಲೇ ಇರುವುದರಿಂದ ಹೆದ್ದಾರಿಯ ಮೇಲಿನ ಮಣ್ಣು ತೆರವು ಕಾರ್ಯ ವಿಳಂಬವಾಗುತ್ತಿದೆ;
ರಾಷ್ಟ್ರೀಯ ಹೆದ್ದಾರಿ 66 ರ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿರುವ ಶಿರೂರಿನಲ್ಲಿ ಆರು ದಿನಗಳ ಹಿಂದೆ ((July 16, ಮಂಗಳವಾರ) ಗುಡ್ಡಕುಸಿದ ಘಟನೆಯಲ್ಲಿ 10 ಮಂದಿ ನಾಪತ್ತೆಯಾಗಿದ್ದು ಏಳು ಜನರ ಶವಗಳು ಪತ್ತೆಯಾಗಿವೆ. ಆದರೆ, ಕೇರಳ ಮೂಲದ ಬೆಂಜ್ ಲಾರಿ ಚಾಲಕ ಅರ್ಜುನ್ ಸಹಿತ ನಾಪತ್ತೆಯಾದ ಮೂವರ ಪತ್ತೆ ಕಾರ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ( ಎನ್ ಡಿ ಆರ್ ಎಫ್)ಯ 29 ಸದಸ್ಯರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ( ಎಸ್ ಡಿ ಆರ್ ಎಫ್) 34 ಸದಸ್ಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಚಾಲಕ ಅರ್ಜುನ್ ಇರುವ ಬೆಂಜ್ ಲಾರಿ ಮಣ್ಣಿನಲ್ಲಿ ಹುದುಗಿರುವುದನ್ನು ಲೋಹಶೋಧಕ ಮತ್ತು ಜಿಪಿಎಸ್ ಮೂಲಕ ಪತ್ತೆಹಚ್ಚಲಾಗಿದ್ದು. ಅರ್ಜುನ್ ಬದುಕಿರುವ ಬಗ್ಗೆ ಆಶಾಭಾವನೆ ವ್ಯಕ್ತವಾಗಿದೆ.
ಶಿರೂರಿನಲ್ಲಿ ಗುಡ್ಡ ಕುಸಿದು ಆರು ದಿನವಾದರೂ ಹೆದ್ದಾರಿಯಮೇಲೆ ಬಿದ್ದ ಮಣ್ಣು ತೆರವುಕಾರ್ಯ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಿದ್ದು, ಗಂಗಾವಳಿ ನದಿಯನ್ನು ಆವರಿಸಿಕೊಂಡ ಗುಡ್ಡದ ಅಕ್ಕ ಪಕ್ಕದಲ್ಲಿನ ಗುಡ್ಡಗಳಿಂದ ನಿರಂತರವಾಗಿ ಜಲಧಾರೆ ಒಸರುತ್ತಿದೆ. ಗುಡ್ಡದ ಮೇಲಿಂದ ಮಣ್ಣಿನ ರಾಶಿ ಬೀಳುತ್ತಲೇ ಇರುವುದರಿಂದ ಹೆದ್ದಾರಿಯ ಮೇಲಿನ ಮಣ್ಣು ತೆರವು ಕಾರ್ಯ ವಿಳಂಬವಾಗುತ್ತಿದೆ. ಆದರೂ ರಸ್ತೆಯ ಒಂದು ಪಥದ ಮಣ್ಣು ತೆರವುಗೊಳಿಸಲಾಗಿದ್ದು ಇನ್ನೂ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ.
ಹೊಟೇಲ್ ನಡೆಸುತ್ತಿದ್ದ ಶಿರೂರಿನ ಲಕ್ಷ್ಮಣ ಬೊಮ್ಮಯ್ಯ ನಾಯ್ಕ (50), ಅವರ ಪತ್ನಿ ಶಾಂತಿ ನಾಯ್ಕ (45), ಮಗ ರೋಷನ್ (11), ಮಗಳು ಅವಂತಿಕಾ (5), ಭಾವ ಜಗನ್ನಾಥ ನಾಯ್ಕ (60), ಉಪೇಂದ್ರ ನಾಯ್ಕ (45) ನಾಪತ್ತೆಯಾಗಿದ್ದರು. ಅದರಲ್ಲಿ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ಬಾಲಕ ರೋಷನ್, ಆವಂತಿಕಾ ಹಾಗೂ ಒಂದು ಅಪರಿಚಿತ ಶವ ಗಂಗಾವಳಿ ನದಿ ದಂಡೆಯ ಊರುಗಳಲ್ಲಿ ಸಿಕ್ಕಿದೆ.
ಚಾಲಕ ಅರ್ಜುನ್ ಲಾರಿ ಪತ್ತೆ
ಗುಡ್ಡ ಕುಸಿತದ ಬಳಿಕ ಮಣ್ಣಿನಡಿಯಲ್ಲಿ ಸಿಲುಕಿಹಾಕಿಕೊಂಡ ಕೇರಳ ಮೂಲದ ಅರ್ಜುನ್ ಹಾಗೂ ಅವರ ಬೆಂಜ್ ಲಾರಿ ಜಿಪಿಎಸ್ ಮೂಲಕ ಪತ್ತೆಯಾಗಿದ್ದು ಅವರು ಜೀವಂತವಾಗಿರಬಹುದು ಎಂದು ಅವರ ಗುರುತುಪತ್ತೆಗಾಗಿ ಬಂದಿರುವ ಕೇರಳ ಮೂಲದ ಲಾರಿ ಮಾಲಿಕ ಮುನಾಫ್ ಆಶಾ ಭಾವನೆ ವ್ಯಕ್ತಪಡಿಸಿದ್ದರೆ. ಲೋಹ ಶೋಧಕದ ಮೂಲಕ ಅರ್ಜುನ್ ಇರುವ ಬೆಂಜ್ ಲಾರಿ ಮಣ್ಣಿನಡಿಯಲ್ಲಿ ಹುದುಗಿದ ಸ್ಥಳ ಪತ್ತೆ ಮಾಡಲಾಗಿದ್ದು, ಲಾರಿ ಒಳಗೆ ಸಿಲುಕಿಹಾಕಿಕೊಂಡಿರುವ ಚಾಲಕ ಅರ್ಜುನ್ ಬದುಕಿರುವ ಸಾಧ್ಯತೆಯಿದೆ ಎಂದು ಲಾರಿ ಮಾಲಿಕ ಮುನಾಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಈ ರಸ್ತೆಯಲ್ಲಿ ಸಾಗುವಾಗ ಇದೇ ಲಕ್ಷ್ಮಣ ನಾಯ್ಕ್ ಹೊಟೇಲ್ ಮುಂಭಾಗ ಲಾರಿನಿಲ್ಲಿಸಿ ಚಹಾಕುಡಿಯುವುದು ವಾಡಿಕೆ. ಅಂದೂ ಕೂಡ ಲಾರಿ ನಿಲ್ಲಿಸಿ ಚಹಾ ಕುಡಿಯುವಾಗ ದುರಂತ ಸಂಭವಿಸಿದೆ ಎಂದರು. ಲಕ್ಷ್ಮಣ ನಾಯ್ಕ್ ಮಲಯಾಳಂ ಚನ್ನಾಗಿ ಮತನಾಡುತ್ತಿರುವುದರಿಂದ ಕೇರಳಬಾಗದಿಂದ ಈ ಮಾರ್ಗದಲ್ಲಿ ಬರುವ ಮಲೆಯಾಳಂ ಭಾಷಿಕ ಚಾಲಕರು ಲಕ್ಷ್ಮಣ ನಾಯ್ಕ್ ಅಂಗಡಿಯ ಮುಂದೆ ವಾಹನ ನಿಲ್ಲಿಸಿ ಚಹಾಕುಡಿಯುವುದು ವಾಡಿಕೆಯಾಗಿತ್ತು. ಮಣ್ಣು ತೆರುವು ಕಾರ್ಯ ಶೀಘ್ರವಾಗಿ ಕೈಗೊಂಡರೆ ಅರ್ಜುನ ಬದಕುವ ಸಾಧ್ಯತೆ ಹಚ್ಚಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರೆ.
ಚಹಾ ಅಂಗಡಿ ನಡೆಸುತ್ತಿದ್ದ ಕುಟುಂಬ!
ಶಿರೂರಿನಲ್ಲಿ ಹೆದ್ದಾರಿ ಅಂಚಿನಲ್ಲಿ ಮುವತ್ತು ವರ್ಷಗಳಿಂದ ಚಹಾದ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ್ ಆ ಕಾಯಕದಿಂದಲೆ ಜೀವನ ಕಟ್ಟಿಕೊಂಡು ತನ್ನ ಪುಟ್ಟ ಸಂಸಾರ ನಿರ್ವಹಣೆ ಮಾಡುತ್ತಿದ್ದ. ಹೆದ್ದಾರಿಯಲ್ಲಿ ಬರುವ ವಾಹನ ಸವಾರರ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡಿದ್ದ ಅವರ ಕುಟುಂಬಕ್ಕೆ ಗುಡ್ಡಕುಸಿತದ ರೂಪದಲ್ಲಿ ಬಂದ ದುರ್ವಿಧಿ ಇಡಿ ಕುಟುಂಬವನ್ನೆ ಬಲಿ ಪಡೆದಂತಾಗಿದೆ.
ಭಯಾನಕವಾದ 250 ಅಡಿ ಎತ್ತರದ ಗುಡ್ಡದ ಒಂದು ಎಕರೆಯಷ್ಟು ಜಾಗ ಮೂಲ ಗುಡ್ಡದಿಂದ ಬೇರ್ಪಟ್ಟು, ನೆಲಕ್ಕಪ್ಪಳಿಸಿದ್ದರಿಂದ ದುರಂತ ಸಂಭವಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಅಂಕೋಲಾ- ಕುಮಟಾ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಅಂಕೋಲಾ-ಕುಮಟಾ ಮಾರ್ಗದಲ್ಲಿ ಅಂಕೋಲಾದಿಂದ 10 ಕಿಮೀ ದೂರದ ಶಿರೂರಿನ ಗಂಗಾವಳಿ ನದಿ ದಂಡೆ ಮೇಲೆ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿದೆ. ಹೆದ್ದಾರಿಯನ್ನು ಚತುಷ್ಪಥವಾಗಿ ವಿಸ್ತರಿಸಲು ಕೆಲ ವರ್ಷಗಳ ಹಿಂದೆ 250 ಅಡಿಗಿಂತ ಎತ್ತರದ ಗುಡ್ಡವನ್ನು ಲಂಬವಾಗಿ ಕಡಿಯಲಾಗಿತ್ತು.
ಘಟನೆ ವಿವರ
ಕಡಿದ ಗುಡ್ಡದಿಂದ ಮಳೆಗಾಲದಲ್ಲಿ ನೀರಿನ ಒರತೆ ಹರಿಯುತ್ತಿತ್ತು. ಕಳೆದ ಮಳೆಗಾಲದಲ್ಲಿ ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದಿತ್ತು. ಹೆದ್ದಾರಿಯ ಒಂದೆಡೆ ಗುಡ್ಡ ಇದ್ದರೆ ಇನ್ನೊಂದು ಪಕ್ಕದಲ್ಲಿ 15-20 ಅಡಿ ಕೆಳಗೆ ಗಂಗಾವಳಿ ನದಿ ಇದೆ. ಹೆದ್ದಾರಿ ಪಕ್ಕದಲ್ಲಿ ನದಿಯ ಕಡೆಗಿನ ಜಾಗದಲ್ಲಿ ಲಕ್ಷ್ಮಣ ನಾಯ್ಕ ಕುಟುಂಬ ಟೀ ಸ್ಟಾಲ್ ಇಟ್ಟುಕೊಂಡು ವಾಸವಿತ್ತು. ಹೆದ್ದಾರಿಯಲ್ಲಿ ಹೋಗಿ ಬರುವ ವಾಹನ ಸವಾರರು ಚಹಾ-ತಿಂಡಿ ಸೇವನೆಗಾಗಿ ಅಲ್ಲಿ ನಿಲ್ಲುತ್ತಿದ್ದರು. ಮಂಗಳವಾರ ಬೆಳಗ್ಗೆ 2 ಟ್ಯಾಂಕರ್‌ಗಳು, ಒಂದು ಕಾರು ನಿಂತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳ್ಳಂಬೆಳಗ್ಗೆ ಸುಮಾರು 1 ಎಕರೆಗೂ ಹೆಚ್ಚು ವಿಸ್ತಾರದ ಗುಡ್ಡದ ಭಾಗ ಏಕಾಏಕಿ ಜರಿದಿದೆ. ಗುಡ್ಡದ ಅವಶೇಷಗಳು 60 ಮೀಟರ್ ಅಗಲದ ಹೆದ್ದಾರಿಯನ್ನು ಮುಚ್ಚಿಹಾಕಿ, ಅದರಾಚೆ 30 ಮೀಟರ್ ದೂರದಲ್ಲಿರುವ ಟೀ ಸ್ಟಾಲ್ ಮೇಲೆ ಬಿದ್ದು ಗಂಗಾವಳಿ ನದಿಯತ್ತ ಜಾರಿಬಿದ್ದಿದೆ. ಬಂಡೆಗಲ್ಲು ಸಹಿತ ಮಣ್ಣು ಅಪ್ಪಳಿಸಿದ ರಭಸಕ್ಕೆ ನದಿಯಲ್ಲಿ "ಸುನಾಮಿ"ಯಂಥ ಅಲೆ ಎದ್ದು ಇನ್ನೊಂದು ದಡಕ್ಕೆ ಹೋಗಿ ಅಪ್ಪಳಿಸಿ ಅಲ್ಲೂ ಅನಾಹುತಕ್ಕೆ ಕಾರಣವಾಗಿದೆ! ಈ ರೀತಿ ಗುಡ್ಡದ ಭಾಗ ಮಗುಚಿ ನದಿಗೆ ಬಿದ್ದು ಭಾರೀ ಗಾತ್ರದ ನೀರಿನ ಅಲೆ ಎದ್ದಿರುವುದನ್ನು ಇದುವರೆಗೆ ಕಂಡಿರಲಿಲ್ಲ ಎಂದು ಸ್ಥಳೀಯ ಸಮಾಜ ಸೇವಕಿ ಮಂಜುಳಾ ನಾಯ್ಕ್ ಹೇಳುತ್ತಾರೆ.
ಬೃಹತ್ ಬಂಡೆಗಳಿಂದ ಕೂಡಿ ಜರಿದ ಗುಡ್ಡವು ಬಲವಾಗಿ ತಳ್ಳಲ್ಪಟ್ಟಿದ್ದರಿಂದ ಅಡುಗೆ ಅನಿಲ ತುಂಬಿದ ಒಂದು ಟ್ಯಾಂಕರ್ ಲಾರಿ ಹಾಗೂ ಒಂದು ಖಾಲಿ ಟ್ಯಾಂಕರ್ ಲಾರಿ ಗಂಗಾವಳಿ ನದಿಗೆ ಬಿದ್ದು ಕಿಲೋಮೀಟರ್ಗಟ್ಟಲೇ ದೂರಕ್ಕೆ ಕೊಚ್ಚಿಕೊಂಡು ಹೋಗಿವೆ. ಹೆದ್ದಾರಿ ಪಕ್ಕದ ಚಹಾ ಅಂಗಡಿ ಎದುರು ನಿಲ್ಲಿಸಿದ್ದ ಒಂದು ಕಾರು ಮತ್ತು ಅದರಲ್ಲಿದ್ದವರು, ಚಹಾ ಅಂಗಡಿ ಮಾಲೀಕನ ಕುಟುಂಬದ ಎಲ್ಲ ಐವರು ಸೇರಿ 10ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದರು. ಈ ಪೈಕಿ ಏಳು ಮಂದಿಯ ಶವ ಸಮೀಪದ ಊರುಗಳಲ್ಲಿ ಗಂಗಾವಳಿ ನದಿ ದಂಡೆಯಲ್ಲಿ ಸಿಕ್ಕಿದ್ದು, ಉಳಿದವರು ಮಣ್ಣಿನಡಿ ಹುದುಗಿಹೋಗಿದ್ದಾರೆಯೋ ಅಥವಾ ನೀರಿನಲ್ಲಿ ಮುಳುಗಿದ್ದಾರೆಯೋ ಎಂಬುದು ತಿಳಿದಿಲ್ಲ. ಘಟನೆಯಲ್ಲಿ 11 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಾಚರಣೆ ಚುರುಕು:
ಆಗಾಗ ಸುರಿಯುವ ಮಳೆಯ ಮಧ್ಯೆ ಮಣ್ಣು ಮತ್ತು ಬಂಡೆಯನ್ನು ಎಚ್ಚರಿಕೆಯಿಂದ ತೆರವು ಮಾಡುತ್ತ, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿದೆ. ಎನ್ಡಿಆರ್ಎಎಫ್ ಮತ್ತು ಇತರ ತಂಡಗಳು ಜೆಸಿಬಿ ಯಂತ್ರ ಬಳಸಿ ಕಾರ್ಯಾಚರಣೆ ನಡೆಸುತ್ತಿವೆ. ಒಂದು ಕಡೆ ಗುಡ್ಡ, ಇನ್ನೊಂದು ಕಡೆ ನದಿ ಇರುವ ಶಿರೂರಿನಲ್ಲಿ ತೆರವುಗೊಳಿಸಿದ ಅವಶೇಷಗಳನ್ನು ಸುರಿಯಲು ಸಮೀಪದಲ್ಲೇ ಜಾಗ ಇಲ್ಲದಿರುವುದು ಸಹ ತರೆವು ಕಾರ್ಯಾಚರಣೆಗೆ ತೊಡಕಾಗಿದೆ.
ಜಿಎಸ್‌ಐ ತಂಡ ಭೇಟಿ
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ( GSI ) ತಂಡ ತಜ್ಞರು ಗುಡ್ಡ ಕುಸಿತ ಸ್ಥಳದಲ್ಲಿ ಕಲ್ಲು, ಮಣ್ಣು ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳೊಂದಿಗೆ ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಇದೇ ತಂಡ ಸರ್ವೆ ನಡೆಸಿ ಭೂಕುಸಿತ ಅಪಾಯವಿರುವ ಸ್ಥಳಗಳನ್ನು ಗುರುತಿಸಿತ್ತು. ಜಿಲ್ಲೆಯ ಸುಮಾರು 436 ಕಡೆ ಭೂಕುಸಿತ ಉಂಟಾಗುವ ಎಚ್ಚರಿಕೆಯನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿತ್ತು. ಭೂಕುಸಿತ ಸಂಭವಿಸಿದ ಅಂಕೋಲಾ ಮಾರ್ಗವನ್ನು ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರತಿಪಾದಿಸಿದೆ. ರಸ್ತೆ ಸುಸ್ಥಿತಿಯಲ್ಲಿದ್ದು, ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಆದರೆ ನೈಸರ್ಗಿಕ ಕಾರಣಗಳಿಂದ ಮಾತ್ರ ಭೂಕುಸಿತ ಸಂಭವಿಸುವುದಿಲ್ಲ ಎಂದು ಭೂವಿಜ್ಞಾನಿಗಳು ಹೇಳಿದ್ದಾರೆ.
ಮಣ್ಣು ಸರಿಸುವಾಗ ಮತ್ತೆ ಗುಡ್ಡ ಕುಸಿತ..!
ಮಣ್ಣು ತೆರವುಗೊಳಿಸುವಾಗಲೇ ಮತ್ತೆ ಗುಡ್ಡ ಕುಸಿದಿದೆ. ರಕ್ಷಣಾ ಸಿಬಂದಿ ಜೆಸಿಬಿಯಿಂದ ಮಣ್ಣು ತೆಗೆಯುತ್ತಿದ್ದಂತೆ ಮತ್ತೆ ಗುಡ್ಡ ಕುಸಿದಿದ್ದು, ಕೂಡಲೇ ಸಿಬ್ಬಂದಿ ಜೆಸಿಬಿ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಹೆದ್ದಾರಿ ಪಕ್ಕದ ಗುಡ್ಡಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಹೆದ್ದಾರಿ ಅಗಲೀಕರಣಕ್ಕೆ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದೇ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಶಿರೂರು ಗುಡ್ಡ ದುರಂತ ಘಟನೆಗೆ ಸಂಬಂಧಿಸಿದಂತೆ ಶಿರೂರು ಗ್ರಾಮಸ್ಥ ಪುರುಷೋತ್ತಮ ನಾಯ್ಕ ಅವರು ನೀಡಿದ ದೂರು ಆಧರಿಸಿ ಐ.ಆರ್.ಇ ಕಂಪನಿ ಮುಖ್ಯಸ್ಥರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವ ಮಾಂಕಾಳ ವೈದ್ಯ ಟೀಕೆ
ಪರಿಹಾರ ಕಾರ್ಯ ಮತ್ತು ಮಣ್ಣು ತೆರವು ಕಾರ್ಯದ ಪರಿಶೀಲನೆ ನಡೆಸಿದ ಮೀನುಗಾರಿಕೆ ಮತ್ತು ಬಂದರು ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರಂತ ಸಂಭವಿಸಿದೆ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಸಲಹೆಯನ್ನು ಪರಿಗಣಿಸದೆ ಹೆದ್ದಾರಿ ನಿರ್ಮಾಣ ಮಾಡಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಸಚಿವ ಮಾಂಕಾಳ ವೈದ್ಯ ಹೇಳಿದ್ದಾರೆ
ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಹೇಳಿಕೆ ನೀಡಿ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡವನ್ನು ಕಡಿದಾಗಿ ಕತ್ತರಿಸಿ ಹೆದ್ದಾರಿ ನಿರ್ಮಾಣ ಮಾಡಿರುವುದೆ ಮಳೆಗಾಲದಲ್ಲಿ ಗುಡ್ಡ ಕುಸಿದು ದುರಂತ ಸಂಭವಿಸಲು ಕಾರಣವಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸಿದರು ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು.
ವಾಹನ ಸಂಚಾರಕ್ಕೆ ಅಡಚಣೆ
ಶಿರೂರಿನಲ್ಲಿ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಹುಬ್ಬಳ್ಳಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಸಾಗಬೇಕಿರುವ ವಾಹನಗಳು ಗೋವಾದಿಂದ ಮಂಗಳೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಇನ್ನಿತರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.