ಅಂಕೋಲ ಗುಡ್ಡ ಕುಸಿತ ಪ್ರಕರಣ | ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ

ಮೃತಪಟ್ಟಿರುವ ಕುಟುಂಬಗಳಿಗೆ ಕೂಡಲೇ ರೂ.5 ಲಕ್ಷ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಸದನಕ್ಕೆ ತಿಳಿಸಿದ್ದಾರೆ.;

Update: 2024-07-16 13:54 GMT
ಸಚಿವ ಕೃಷ್ಣ ಬೈರೇಗೌಡ
Click the Play button to listen to article

ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಏಳು ಜನ ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ಕೂಡಲೇ ರೂ.5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ಅಂಕೋಲ ಅಪಘಾತದ ಬಗ್ಗೆ ಮಾಹಿತಿ ನೀಡಿದ ಅವರು,ʻʻನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದ್ದು, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣ ಮಟ್ಟದ ಕ್ಯಾಂಟೀನ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್‌ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ. ಗುಡ್ಡ ಕುಸಿದು ಟ್ಯಾಂಕರ್‌ ಲಾರಿ ಹಾಗೂ ಕ್ಯಾಂಟೀನ್‌ ನದಿಯಲ್ಲಿ ಕೊಚ್ಚಿ ಹೋಗಿವೆ. ಪರಿಣಾಮ ಕ್ಯಾಂಟೀನ್‌ ನಡೆಸುತ್ತಿದ್ದ ಒಂದೇ ಕುಟುಂಬದ ನಾಲ್ವರು- ಟ್ಯಾಂಕರ್‌ ಚಾಲಕರು ಸೇರಿ ಒಟ್ಟು 7 ಜನ ಮೃತಪಟ್ಟಿದ್ದಾರೆ. ಮೃತರಾದವರನ್ನು ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಾಂತಿಕಾ (6), ಜಗನ್ನಾಥ (55) ಎಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್‌ ತುಕಡಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರೂ ಸ್ಥಳಕ್ಕೆ ಧಾವಿಸಿದ್ದಾರೆ. ಭಾರತೀಯ ಪೆಟ್ರೋಲಿಯಂ ಲಿಮಿಟೆಡ್‌ನ ಅಧಿಕಾರಿಗಳೂ ಸ್ಥಳದಲ್ಲಿ ಇದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಸಿಲಿಂಡರ್‌ ಲಾರಿಯನ್ನು ಸುರಕ್ಷಿತವಾಗಿ ಹೊರತೆಗೆಯುವ ಕೆಲಸವೂ ಪ್ರಗತಿಯಲ್ಲಿದೆ ಎಂದರು.

ಅಲ್ಲದೆ, ಅಪಘಾತದಲ್ಲಿ ಮೃತಪಟ್ಟವರಿಗೆ ಕೂಡಲೇ ರೂ.5 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇನ್ನೂ ವಾಹನ ಚಾಲಕರು ನಮ್ಮ ರಾಜ್ಯದವರಲ್ಲ. ಆದರೂ, ಅವರು ಕೆಲಸದ ಮೇಲೆ ನಮ್ಮ ರಾಜ್ಯಕ್ಕೆ ಬಂದಿದ್ದು, ಈ ವೇಳೆ ದುರಾದೃಷ್ಟವಶಾತ್‌ ಅಪಘಾತ ಸಂಭವಿಸಿದೆ. ಹೀಗಾಗಿ ಅವರಿಗೂ ಪರಿಹಾರ ನೀಡುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತುಕತೆ

ಈ ಅಪಘಾತ ನಡೆಯಲು ಕಾರಣವೇನು? ಎಂಬ ಬಗ್ಗೆಯೂ ಸದನದಲ್ಲಿ ಪ್ರಸ್ತಾಪಿಸಿದ ಸಚಿವ ಕೃಷ್ಣ ಬೈರೇಗೌಡ, “ಕಳೆದ ವರ್ಷ ಅತಿವೃಷ್ಟಿಯ ಸಂದರ್ಭದಲ್ಲೇ ನಾನು ಈ ಭಾಗಕ್ಕೆ ತೆರಳಿದ್ದೆ. ರಾಷ್ಟ್ರೀಯ ಹೆದ್ದಾರಿಗಳು ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ. ಅಲ್ಲದೆ, ಕೈಗಾ ಪರಮಾಣು ವಿದ್ಯುತ್‌ ಸ್ಥಾವರದ ಕಾಲುವೆಗಳೂ ಕ್ರಮಬದ್ಧವಾಗಿಲ್ಲ. ಹೀಗಾಗಿ ಭೂ ಕುಸಿತ ಸಂಭವಿಸುವ ಬಗ್ಗೆ ಆಗಲೇ ಎಚ್ಚರಿಕೆ ನೀಡಿದ್ದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತಿಗೆ ಕಿವಿಕೊಡುವ ಗೋಜಿಗೇ ಹೋಗಿಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

"ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತನ್ನು ಕೇಳುವುದೇ ಇಲ್ಲ. ನಾವು ಏನೇ ಹೇಳಿದರೂ, ನಮ್ಮ ಕೇಂದ್ರ ಕಚೇರಿ ದೆಹಲಿಯಲ್ಲಿದೆ, ಅಲ್ಲಿಗೆ ಪತ್ರ ಬರೆಯುತ್ತೇವೆ ಎಂದಷ್ಟೇ ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಆದರೆ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಇಂದೇ ಕರೆಸಿ ಘಟನೆಯ ಬಗ್ಗೆ ಮಾತನಾಡಲಾಗುವುದು. ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಪತ್ರ ಬರೆಯಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು" ಎಂದು ಸದನಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.

Tags:    

Similar News