ಲೈಂಗಿಕ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಸೂರಜ್‌ ರೇವಣ್ಣ ಆಪ್ತನ ವಿರುದ್ಧ ಎಫ್‌ಐಆರ್‌ ದಾಖಲು

Update: 2024-06-25 11:08 GMT

ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆ ಜೈಲು ಸೇರಿರುವ ಜೆಡಿಎಸ್ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬಾತನ ವಿರುದ್ಧ ಹಣ ದುರುಪಯೋಗ ಆರೋಪದಡಿ ಎಫ್​ಐಆರ್​ ದಾಖಲಾಗಿದೆ.

ಡಾ. ಸೂರಜ್ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಜೆಡಿಎಸ್​ ಕಾರ್ಯಕರ್ತನೊಬ್ಬ ಬೆಂಗಳೂರು ಮಹಾ ನಿರ್ದೇಶಕರಿಗೆ ದೂರು ನೀಡಿದ್ದ. ಆದರೆ ಸೂರಜ್‌ ಪರವಾಗಿ ಆತನ ಆಪ್ತ ಶಿವಕುಮಾರ್‌ ಸಂತ್ರಸ್ತನ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾನೆ ಎಂದು ಸೂರಜ್ ಆಪ್ತ ಶಿವಕುಮಾರ್ ದೂರು ನೀಡಿದ್ದು, ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಐದು ಕೋಟಿ ರೂಪಾಯಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ ಆರೋಪ ಮಾಡಿ ದೂರು ಕೊಡಲಾಗಿತ್ತು. ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಇದೀಗ ಶಿವಕುಮಾರ್​ ವಿರುದ್ಧವೇ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯಲ್ಲಿ ​ದೂರು ದಾಖಲಾಗಿದೆ. ಆರೋಪಿ ಶಿವಕುಮಾರ್ ಶ್ರೀರಾಮ್ ಫೈನಾನ್ಸ್​ ರಾಮನಾಥಪುರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಆರು ಗ್ರಾಹಕರು ವಾಹನ ಸಾಲದ ವಂತಿಕೆ ಕಟ್ಟಲು ನೀಡಿದ್ದ 2,91,916 ರೂಪಾಯಿ ಹಣವನ್ನ ದುರ್ಬಳಕೆ ಮಾಡಿದ್ದ ಆರೋಪದಡಿ ಕೇಸ್​​ ದಾಖಲಾಗಿದ್ದು, ಈ ಕುರಿತು ಜೂ.21ರಂದೇ ಶಾಖೆಯ ಮ್ಯಾನೇಜರ್ ಕೇಶವಮೂರ್ತಿ ದೂರು ನೀಡಿದ್ದರು. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಶಿವಕುಮಾರ್ ಪರಾರಿಯಾಗಿದ್ದಾನೆ.

Tags:    

Similar News