ಮಂಗಳೂರು ಉಳ್ಳಾಲ ಬಳಿ ಹಳಿ ಮೇಲೆ ಕಲ್ಲು; ದುಷ್ಕರ್ಮಿಗಳಿಂದ ರೈಲು ಅವಘಡಕ್ಕೆ ಸಂಚು

ಕಲ್ಲುಗಳನ್ನು ಜೋಡಿಸಿದ್ದ ಹಳಿಯ ಮೇಲೆ ರೈಲು ಸಂಚರಿಸಿದಾಗ ದೊಡ್ಡ ಶಬ್ದ ಉಂಟಾಗಿದ್ದು, ಸ್ಥಳೀಯರು ತೀವ್ರ ಆತಂಕಗೊಂಡರು. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸದೇ ರೈಲು ತನ್ನ ಪ್ರಯಾಣ ಮುಂದುವರಿಸಿತು.;

Update: 2024-10-20 06:40 GMT

ರೈಲು ಹಳಿಯ ಮೇಲೆ ಜಲ್ಲಿಕಲ್ಲುಗಳನ್ನು ಇಟ್ಟು ಹಳಿ ತಪ್ಪಿಸುವ ಪ್ರಯತ್ನ ಶನಿವಾರ ರಾತ್ರಿ ಮಂಗಳೂರಿನ ಉಳ್ಳಾಲ ಬಳಿಯ ತೊಕ್ಕೊಟ್ಟು ಮೇಲ್ಸೇತುವೆ ಸಮೀಪದ ಗಣೇಶ ನಗರ, ಕಾಪಿಕಾಡ್ ನಡುವೆ ನಡೆದಿದೆ.

ಕಲ್ಲುಗಳನ್ನು ಜೋಡಿಸಿದ್ದ ಹಳಿಯ ಮೇಲೆ ರೈಲು ಸಂಚರಿಸಿದಾಗ ದೊಡ್ಡ ಶಬ್ದ ಉಂಟಾಗಿದ್ದು, ಸ್ಥಳೀಯರು ತೀವ್ರ ಆತಂಕಗೊಂಡರು. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸದೇ ರೈಲು ತನ್ನ ಪ್ರಯಾಣ ಮುಂದುವರಿಸಿತು.

ಕೇರಳದಿಂದ ಮಂಗಳೂರು ಕಡೆಗೆ ರೈಲು ಸಂಚರಿಸುತ್ತಿದ್ದ ವೇಳೆ ಭಾರೀ ಸದ್ದು ಕೇಳಿಸಿದೆ. ಸಮೀಪದ ಮನೆಗಳಲ್ಲಿ ಕಂಪನ ಅನುಭವವಾಗಿದ್ದು, ಜನರು ಭಯಭೀತರಾಗಿದ್ದರು. ಕೂಡಲೇ ಟಾರ್ಚ್‌ ಹಿಡಿದು ರೈಲ್ವೆ ಹಳಿಗಳ ಬಂದು ನೋಡಿದಾಗ ಕಿಡಿಗೇಡಿಗಳು ಹಳಿಗಳ ಮೇಲೆ ಕಲ್ಲುಗಳನ್ನು ಜೋಡಿಸಿಟ್ಟಿದ್ದ ಸಂಗತಿ ಬೆಳಕಿಗೆ ಬಂದಿದೆ.

ಸ್ಥಳೀಯ ನಿವಾಸಿ ರಾಜೇಶ್‌ ಎಂಬುವವರು ಘಟನೆ ಕುರಿತಂತೆ ರೈಲ್ವೆ ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು. ರೈಲ್ವೆ ಸಲಹಾ ಸಮಿತಿ ಸದಸ್ಯರು ನೀಡಿದ ದೂರಿನ ಮೇರೆಗೆ ರೈಲ್ವೆ ಪೊಲೀಸರು ಹಾಗೂ ಉಲ್ಲಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ರಾತ್ರಿ ಹಳಿಗಳ ಮೇಲೆ ಇಬ್ಬರು ಸಂಚರಿಸುತ್ತಿದ್ದುದನ್ನು ನೋಡಿದ್ದೇವೆ. ಅವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ. 

ರೈಲು ಹಳಿಗಳ ಮೇಲೆ ಜಲ್ಲಿ ಕಲ್ಲು ಹಾಗೂ ಇತರೆ ವಸ್ತುಗಳನ್ನು ಇಟ್ಟು ಹಳಿ ತಪ್ಪಿಸುವ ಕಿಡಿಗೇಡಿಗಳ ಪ್ರಯತ್ನ ಆಗಿಂದಾಗ್ಗೆ ನಡೆಯುತ್ತಿರುವುದು ರೈಲ್ವೆ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

ಕಳೆದ ಸೆ. 20 ರಂದು ಉತ್ತರಾಖಂಡದ ಬಿಲಾಸ್ಪುರ-ರುದ್ರಪುರ ನಡುವಿನ ರೈಲು ಮಾಗದಲ್ಲಿ ನೈನಿ ಜನಶತಾಬ್ದಿ ರೈಲಿಗೆ ಕಿಡಿಗೇಡಿಗಳು ಹಳಿಯ ಮೇಲೆ ಅಡ್ಡಲಾಗಿ 6 ಮೀಟರ್‌ ಉದ್ದ ಕಬ್ಬಿಣದ ಕಂಬ ಇಟ್ಟಿದ್ದರು. ಲೋಕೋ ಪೈಲಟ್‌ ಸಮಯಪ್ರಜ್ಞೆಯಿಂದ ಅವಗಢ ತಪ್ಪಿತ್ತು. 2023 ನವೆಂಬರ್‌ ತಿಂಗಳಲ್ಲಿ ನಂಜನಗೂಡಿನಲ್ಲಿ ರೈಲ್ವೆ ಹಳಿಗೆ ಅಡ್ಡಲಾಗಿ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡುಗಳನ್ನು ಇಡಲಾಗಿತ್ತು. ಈ ಸಂಬಂಧ ಒಡಿಶಾ ಮೂಲದ ಮೂವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದರು.

Tags:    

Similar News