18 ವರ್ಷದ ಯುವತಿಯ ಅತ್ಯಾಚಾರ, ಕೊಲೆ; ಮೂವರ ಬಂಧನ
18 ವರ್ಷದ ದಲಿತ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಗ್ರಾಮಯೊಂದರಲ್ಲಿ ಬೀದರ್ ಜಿಲ್ಲೆಯ ಗುಣತೀರ್ಥವಾಡಿ ಜಿಲ್ಲೆಯಲ್ಲಿ ನಡೆದಿದೆ.;
18 ವರ್ಷದ ದಲಿತ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮಯೊಂದರಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ಪೊಲೀಸರು ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಗ್ರಾಮದ ಯುವತಿಯೊಬ್ಬಳು, ಆ.29ರಂದು ರಾತ್ರಿ ಮನೆಯಿಂದ ಹೊರಗೆ ಹೋದ ಬಳಿಕ ನಾಪತ್ತೆಯಾಗಿದ್ದಳು. ಯುವತಿಯು ಮನೆಗೆ ಬಾರದ್ದರಿಂದ ಪೋಷಕರು ಹುಡುಕಾಟ ನಡೆಸಿದರು. ಎರಡು ದಿನಗಳ ನಂತರ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಆ.31ರಂದು ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಈ ವೇಳೆ ಶೋಧ ನಡೆಸಿದ ಪೋಷಕರು ಮತ್ತು ಪೊಲೀಸರು, ಗ್ರಾಮದ ಹೊರವಲಯದ ಪೊದೆಯೊಂದರಲ್ಲಿ ಸೆ.1ರಂದು ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಬಹುತೇಕ ವಿವಸ್ತ್ರವಾಗಿತ್ತು. ದುಷ್ಕರ್ಮಿಗಳು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು. ಅತ್ಯಾಚಾರದ ಬಳಿಕ ಯುವತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ನಂತರ ಆಕೆಯ ದೇಹವನ್ನು ಪೊದೆಗಳಲ್ಲಿ ಎಸೆದಿದ್ದಾರೆ.
ಈ ಸಂಬಂಧ ಬುಧವಾರ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ ನಡೆಸಿ, ಕತ್ತು ಹಿಸುಕಿ, ಆಕೆಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಮುಖ ಆರೋಪಿ ಯುವತಿಯ ಗ್ರಾಮದವನಾಗಿದ್ದು, ಕೃತ್ಯಕ್ಕೆ ಸಾಥ್ ನೀಡಿದ ಇನ್ನಿಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಮಾಹಿತಿ ನೀಡಿದ್ದಾರೆ. ಮೃತ ಯುವತಿಯು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಸ್ಸಿ,ಎಸ್ಟಿ ಕಾಯ್ದೆ ಅನ್ವಯ ಹಾಗೂ ಅತ್ಯಾಚಾರ ಪ್ರಕರಣವೆಂದು ಪರಿಗಣಿಸಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.