Ambulence controversy̲ Part̲ 2 | '108' ಆಂಬುಲೆನ್ಸ್ ಸೇವೆಗಾಗಿ ಕೋಟ್ಯಂತರ ರೂ. ಸುರಿದರೂ ಸುಧಾರಿಸದ ಸೇವೆ

2008 ರಲ್ಲಿ ಹತ್ತು ವರ್ಷಗಳಿಗೆ ಮಾತ್ರ ನಿರ್ವಹಣೆ ಗುತ್ತಿಗೆ ಪಡೆದಿದ್ದ ಜಿವಿಕೆ ತುರ್ತು ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ ಇಲ್ಲಿಯವರೆಗೂ 108 ಆಂಬುಲೆನ್ಸ್ ನಿರ್ವಹಣೆಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಕೇವಲ ಕಮಾಂಡ್ ಸೆಂಟರ್ ಮೂಲಕವೇ ಅಂಬುಲೆನ್ಸ್ ಸೇವೆ ನಿರ್ವಹಣೆ ಮಾಡುತ್ತಿತ್ತು. ಕರ್ನಾಟಕ ಸರ್ಕಾರ ಇದಕ್ಕಾಗಿ ವಾರ್ಷಿಕ ಕೋಟ್ಯಂತರ ರೂ. ಗಳನ್ನು ಜಿವಿಕೆ ಸಂಸ್ಥೆಗೆ ಪಾವತಿಸುತ್ತಿತ್ತು.;

Update: 2025-05-19 03:42 GMT

ಆಂಧ್ರಪ್ರದೇಶದ ಜಿವಿಕೆ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಷ್ಟ್ರೀಯ ತುರ್ತು ಸೇವೆ ‘108’ ಆಂಬುಲೆನ್ಸ್  ನಿರ್ವಹಣೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

2008 ರಲ್ಲಿ ಹತ್ತು ವರ್ಷಗಳಿಗೆ ಮಾತ್ರ ನಿರ್ವಹಣೆ ಗುತ್ತಿಗೆ ಪಡೆದಿದ್ದ ಜಿವಿಕೆ ತುರ್ತು ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆ ಇಲ್ಲಿಯವರೆಗೂ 108 ಆಂಬುಲೆನ್ಸ್ ನಿರ್ವಹಣೆಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಕೇವಲ ಕಮಾಂಡ್ ಸೆಂಟರ್ ಮೂಲಕವೇ ಅಂಬುಲೆನ್ಸ್  ಸೇವೆ ನಿರ್ವಹಣೆ ಮಾಡುತ್ತಿತ್ತು. ಕರ್ನಾಟಕ ಸರ್ಕಾರ ಇದಕ್ಕಾಗಿ ವಾರ್ಷಿಕ ಕೋಟ್ಯಂತರ ರೂ. ಗಳನ್ನು ಜಿವಿಕೆ ಸಂಸ್ಥೆಗೆ ಪಾವತಿಸುತ್ತಿತ್ತು.  ಹೀಗಿದ್ದರೂ ಆಂಬುಲೆನ್ಸ್ ಸೇವೆಯಲ್ಲಿ ಸಾಕಷ್ಟು ವ್ಯತ್ಯಯಗಳು ಕಂಡು ಬರುತ್ತಿದ್ದವು.  ಹಾಗಾಗಿ ಈ ಸೇವೆಯನ್ನು ಸರ್ಕಾರವೇ ನಿರ್ವಹಣೆ ಮಾಡಲು ನಿರ್ಧರಿಸಿ, ಆಂಬುಲೆನ್ಸ್ ಸೇವೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. 

ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ

ರಾಜ್ಯದಲ್ಲಿ 750 ಆಂಬುಲೆನ್ಸ್ ಗಳುಕಾರ್ಯಾಚರಿಸುತ್ತಿದ್ದು,  ಸುಮಾರು 3,500 ಉದ್ಯೋಗಿಗಳು 108 ಆಂಬ್ಯುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲಾ ಸಿಬ್ಬಂದಿಗಳಿಗೆ ಸರ್ಕಾರವೇ ವೇತನ, ಆಂಬುಲೆನ್ಸ್ ನಿರ್ವಹಣಾ ವೆಚ್ಚವಾಗಿ ವಾರ್ಷಿಕ 162 ಕೋಟಿ ರೂ. ಪಾವತಿಸುತ್ತಿದೆ. ಕೇವಲ ಕಮಾಂಡ್ ಸೆಂಟರ್ ನಿರ್ವಹಿಸುತ್ತಿದ್ದ ಜಿವಿಕೆ ಸಂಸ್ಥೆ ಸರ್ಕಾರದಿಂದ ಪಡೆದ ಮೊತ್ತವನ್ನು ಸಿಬ್ಬಂದಿಗೆ ಸರಿಯಾಗಿ ಪಾವತಿಸುತ್ತಿರಲಿಲ್ಲ. ಅಲ್ಲದೇ ಪದೇ ಪದೇ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಆಗುತ್ತಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರವೇ ಆಂಬುಲೆನ್ಸ್ ನಿರ್ವಹಣೆಗೆ ತೀರ್ಮಾನಿಸಿದೆ. 

ಸಿಬ್ಬಂದಿಗೆ ವೇತನ ಪಾವತಿಸದ ಜಿವಿಕೆ

ಸಿಬ್ಬಂದಿ ನೇಮಕ, ವೇತನ, ಆಂಬುಲೆನ್ಸ್  ನಿರ್ವಹಣೆ, ಡೀಸೆಲ್ ವೆಚ್ಚವನ್ನು ಸರ್ಕಾರವೇ ಭರಿಸಿದರೂ 2024ರಲ್ಲಿ  ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸಿಬ್ಬಂದಿಗೆ 5 ತಿಂಗಳ ವೇತನ ಪಾವತಿ ಮಾಡಿರಲಿಲ್ಲ.

ವೇತನ ಪಾವತಿಗೆ ಅಗ್ರಹಿಸಿ ಆಂಬುಲೆನ್ಸ್ ನೌಕರರ ಸಂಘ ಮುಷ್ಕರ ನಡೆಸಿತ್ತು. ಸರ್ಕಾರದ ಮಧ್ಯ ಪ್ರವೇಶದ ಬಳಿಕ ಕೇವಲ ಎರಡು ತಿಂಗಳ ವೇತನ ನೀಡಿತ್ತು. ಇದಾದ ಬಳಿಕವೂ ಜಿವಿಕೆ ಹಾಗೂ ಸಿಬ್ಬಂದಿ ಮಧ್ಯೆ ಸಂಘರ್ಷ ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಸೇವೆ ನಿರ್ವಹಣೆಯನ್ನು ತಾನೇ ವಹಿಸಿಕೊಳ್ಳಲು ಸರ್ಕಾರ ನಿರ್ಧರಿಸಿತು.

ಬೆಂಗಳೂರಿನಲ್ಲಿ ಸುಮಾರು 90 ಆಂಬ್ಯುಲೆನ್ಸ್‌ಗಳನ್ನು ನಿರ್ವಹಿಸುತ್ತಿದ್ದು, 400 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ.

ಆಂಬುಲೆನ್ಸ್ ಸಿಬ್ಬಂದಿಗೆ ಸರ್ಕಾರ 29,000 ರೂ.ಗಳಿಂದ 31,000 ರೂ.ಗಳವರೆಗಿನ ನಿಯಮಿತ ವೇತನ ನೀಡುತ್ತಿದೆ. ಆದರೂ ಜಿವಿಕೆ ಸಂಸ್ಥೆ ವೇತನ ಪಾವತಿ, ಇತರೆ ಸೌಲಭ್ಯ ವಿತರಣೆಯಲ್ಲಿ ವಿಳಂಬ ಮಾಡುತ್ತಿತ್ತು ಎಂದು ಆಂಬುಲೆನ್ಸ್ ನೌಕರರ ಸಂಘ ಆರೋಪಿಸಿತ್ತು. 

ಸರ್ಕಾರದಿಂದ ಕಮಾಂಡ್ ಸೆಂಟರ್ ಸ್ಥಾಪನೆ

ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಕಮಾಂಡ್ ಸೆಂಟರ್ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಚಾಮರಾಜನಗರದಲ್ಲಿ ಕಮಾಂಡ್ ಸೆಂಟರ್ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ.

ಬೆಂಗಳೂರಿನಲ್ಲಿ ಮುಖ್ಯ ಕಮಾಂಡ್ ಸೆಂಟರ್ ಆರಂಭಿಸಿ, ಎಲ್ಲಾ ಜಿಲ್ಲೆಗಳಲ್ಲೂ ಉಪ ಸೆಂಟರ್ ಆರಂಭಿಸಲು ಕಾರ್ಯ ಪ್ರವೃತ್ತವಾಗಿದೆ. ಮೂರು ತಿಂಗಳಲ್ಲಿ ಇಲಾಖೆಯು ಆಂಬ್ಯುಲೆನ್ಸ್‌ಗಳನ್ನು ತನ್ನದೇ ಕಮಾಂಡ್ ಸೆಂಟರ್ ಮೂಲಕ ನಿರ್ವಹಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಆರೋಗ್ಯ ಕವಚ ಸೇವೆಯಡಿ ಕಮಾಂಡ್ ಸೆಂಟರ್ ಆರಂಭಿಸಿ ಎಲ್ಲಾ ಆಂಬ್ಯುಲೆನ್ಸ್‌ಗಳನ್ನು ಕಾರ್ಯಾಚರಣೆ ನಿರ್ವಹಿಸುತ್ತಿದೆ. ಶೀಘ್ರದಲ್ಲೇ ರಾಜ್ಯಾದ್ಯಂತ ಎಲ್ಲಾ ಆರೋಗ್ಯ ಕವಚ ಮತ್ತು ಇತರ ಸರ್ಕಾರಿ ಆಂಬ್ಯುಲೆನ್ಸ್‌ಗಳ ತುರ್ತು ಸೇವೆಯನ್ನು ನಡೆಸಲು ಒಂದೇ ಕಮಾಂಡ್ ಸೆಂಟರ್ ವ್ಯಾಪ್ತಿಗೆ ತರಲಿದೆ ಎಂದು ತಿಳಿಸಿದ್ದಾರೆ.

2008 ರಲ್ಲಿ GVK-EMRI ಜೊತೆ ಪಿಪಿಪಿ ಮಾದರಿಯಲ್ಲಿ 10 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಸರ್ಕಾರದೊಂದಿಗಿನ ಕಂಪನಿಯ ಒಪ್ಪಂದ ಕೊನೆಗೊಂಡಿದ್ದರೂ, ಸೇವಾ ಪೂರೈಕೆದಾರ ಸಂಸ್ಥೆಯಿಂದ ಲೋಪಗಳು ಹೆಚ್ಚಾಗಿದ್ದವು ಎಂದು ಹೇಳಿದ್ದಾರೆ.

ಎನ್ಎಚ್ಎಂ ಮಾರ್ಗಸೂಚಿ ಹೇಳುವುದೇನು?

ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್) ಆಂಬ್ಯುಲೆನ್ಸ್ ಮತ್ತು ಪ್ರತಿ 5 ಲಕ್ಷ ಜನಸಂಖ್ಯೆಗೆ ಒಂದು ಅಡ್ವಾನ್ಸ್ಡ್ ಲೈಫ್ ಸರ್ಪೋಟ್ ( ಎಎಲ್ಎಸ್) ಆಂಬ್ಯುಲೆನ್ಸ್ ಇರಬೇಕು. ಒಂದು ಆಂಬ್ಯುಲೆನ್ಸ್ 24 ಗಂಟೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಕರಣಗಳನ್ನು ನಿರ್ವಹಣೆ ಮಾಡಿದರೆ ಮತ್ತು 120 ಕಿ.ಮೀ. ಗಿಂತ ಹೆಚ್ಚು ದೂರ ಕ್ರಮಿಸಿದರೆ, ಅಂತಹ ಕಡೆ ಮತ್ತೊಂದು ಆಂಬ್ಯುಲೆನ್ಸ್ ಒದಗಿಸಬೇಕಾಗುತ್ತದೆ. ಈ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಜಿವಿಕೆ ಎಡವಿತ್ತು. ಹಾಗಾಗಿ ಸರ್ಕಾರವೇ ಆಂಬುಲೆನ್ಸ್ ಸೇವೆಯನ್ನು ಉನ್ನತಿಕರಿಸಲು ನಿರ್ಧರಿಸಿ ನಿರ್ವಹಣೆ ವಹಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಒಟ್ಟಾರೆ, ಕಳೆದ 14 ವರ್ಷಗಳಿಂದ 108 ಆಂಬುಲೆನ್ಸ್ ಸೇವೆಗಾಗಿ ಖಾಸಗಿ ಏಜೆನ್ಸಿಗೆ ಕೋಟ್ಯಂತರ ರೂ. ಸುರಿದ ಬಳಿಕ ಇಚ್ಛೆಟ್ಟುಕೊಂಡಿರುವ ಸರ್ಕಾರ ಈಗಲಾದರೂ ಸಮರ್ಪಕ ಸೇವೆ ನೀಡಲಿದೆಯೇ ಎಂಬುದೇ ಮುಂದಿರುವ ಪ್ರಶ್ನೆಯಾಗಿದೆ.

Tags:    

Similar News