ರಾಹುಲ್ ಗಾಂಧಿ ಪ್ರತಿಭಟನೆಗೆ ಫ್ರೀಡಂ ಪಾರ್ಕ್‌ನಲ್ಲಿ ಮರಗಳ ನಾಶ? ಆರೋಪ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅರಣ್ಯ ಘಟಕದ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪ್ರತಿಭಟನೆಗೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಮರಗಳನ್ನು ತೆರವುಗೊಳಿಸಲಾಗಿದೆ.;
"ಮತ ಕಳ್ಳತನ"ದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 5ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಿರುವ ಬೃಹತ್ ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ, ಕಾರ್ಯಕ್ರಮಕ್ಕಾಗಿ ಪಾರ್ಕ್‌ನಲ್ಲಿದ್ದ ಕೆಲವು ಮರಗಳನ್ನು ಕಡಿಯಲಾಗಿದೆ ಮತ್ತು ಕಾಂಪೌಂಡ್ ಒಡೆಯಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯು ಪರಿಸರವಾದಿಗಳು ಮತ್ತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆಗಸ್ಟ್ 5ರ ಪ್ರತಿಭಟನೆಗೆ ವೇದಿಕೆ ಸಿದ್ಧಪಡಿಸಲು ಮತ್ತು ಜನರಿಗೆ ಸ್ಥಳಾವಕಾಶ ಕಲ್ಪಿಸಲು ಫ್ರೀಡಂ ಪಾರ್ಕ್‌ನ ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅರಣ್ಯ ಘಟಕದ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪ್ರತಿಭಟನೆಗೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಮರಗಳನ್ನು ತೆರವುಗೊಳಿಸಲಾಗಿದೆ.
ಮರವನ್ನು ಕಡಿದು ಟೆಂಪೊದಲ್ಲಿ ಸಾಗಿಸುವ ಹಾಗೂ ಜೆಸಿಬಿ ಮೂಲಕ ಕೆಲಸ ನಡೆಸುವ ವಿಡಿಯೊವನ್ನು ಬಿಜೆಪಿ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಶೇರ್ ಮಾಡಿದೆ. ಅಲ್ಲದೆ, ಮರಗಳ ಮಾರಣಹೋಮಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದೆ.
ಸಾರ್ವಜನಿಕರ ಆಕ್ರೋಶ
ರಾಜಕೀಯ ಕಾರ್ಯಕ್ರಮಕ್ಕಾಗಿ ನಗರದ ಪ್ರಮುಖ ಉದ್ಯಾನವನದಲ್ಲಿ ಮರಗಳನ್ನು ನಾಶ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಇದೇ ಫ್ರೀಡಂ ಪಾರ್ಕ್‌ನಲ್ಲಿ ಮರ ಕಡಿಯುವ ಯೋಜನೆಗಳ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿವೆ. ಈಗ ಅದೇ ಸ್ಥಳದಲ್ಲಿ ರಾಜಕೀಯ ಕಾರಣಕ್ಕಾಗಿ ಮರಗಳನ್ನು ಕಡಿದಿರುವುದು ವಿಪರ್ಯಾಸ ಎಂದು ಹಲವರು ಟೀಕಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಪ್ರತಿಭಟನೆಯ ಉದ್ದೇಶ ಏನು?
ಲೋಕಸಭಾ ಚುನಾವಣೆಯಲ್ಲಿ "ಮತ ಕಳ್ಳತನ" ಮತ್ತು ಚುನಾವಣಾ ಅಕ್ರಮಗಳು ನಡೆದಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಈ ವಿಷಯದ ಬಗ್ಗೆ ದೇಶದ ಗಮನ ಸೆಳೆಯಲು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನೆಯ ನಂತರ, ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವೂ ಇದೆ. ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.