ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್ ಆಪ್ತೆ ಪವಿತ್ರಾ ಗೌಡ ಪೊಲೀಸ್ ವಶಕ್ಕೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಶಕ್ಕೆ ಪಡೆದಿರುವ ಪೊಲೀಸರು ಇದೀಗ ನಟನ ಆಪ್ತೆ ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.;
ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು, ಇದೀಗ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ.
ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು, ಪವಿತ್ರಾಗೌಡ ಅವರನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆಯ ಹಿಂದೆ ಪವಿತ್ರಾ ಗೌಡ ಅವರ ಕೈವಾಡ ಇದೆಯೇ? ಅವರು ಮಾಡಿದ ಒಳಸಂಚು ಏನು? ಎಂಬ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸರು ನಟಿಯನ್ನು ವಶಪಡಿಸಿಕೊಂಡಿಸಿದ್ದಾರೆ.
ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕೆಲವರು ಆತನನ್ನು ಅಪಹರಿಸಿದ ತಂಡ, ಕೊಲೆ ಮಾಡಿ ಕಾಮಾಕ್ಷಿಪಾಳ್ಯದಲ್ಲಿ ಮೃತದೇಹವನ್ನು ಬಿಸಾಕಿದ್ದರು. ಎರಡು ದಿನಗಳ ಹಿಂದೆ ಮೃತ ದೇಹ ಪತ್ತೆಯಾದ ಬಳಿಕ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಮಾಡಿ, ಕೊಲೆಗೆ ಕಾರಣರಾದ ಹನ್ನೆರಡು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಆರೋಪಿಗಳು, ದರ್ಶನ್ ಅವರ ಸೂಚನೆಯಂತೆ ತಾವು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.