ಮಗುವಿಗೆ ಹಾಲುಣಿಸಲು ಪರದಾಡಿದ ತಾಯಿ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆರೈಕೆ ಕೇಂದ್ರ ಸ್ಥಾಪಿಸುವಂತೆ BMRCLಗೆ ಪತ್ರ
ಮೆಟ್ರೋ ನಿಲ್ದಾಣಗಳಲ್ಲೂ ಆರೈಕೆ ಕೇಂದ್ರ ಸ್ಥಾಪಿಸುವಂತೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ಗೆ ಪತ್ರ ಬರೆದಿದ್ದಾರೆ.;
ನಮ್ಮ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ತಾಯಿಯೊಬ್ಬರು ಮಗುವಿಗೆ ಹಾಲುಣಿಸಲು ಸ್ಥಳವಿಲ್ಲದೆ ಪರದಾಡುತ್ತಿರುವ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಆರೈಕೆ ಕೇಂದ್ರ ಸ್ಥಾಪಿಸುವಂತೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ಗೆ ಪತ್ರ ಬರೆದಿದ್ದಾರೆ.
ಸೆಪ್ಟೆಂಬರ್ 16 ರಂದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ತಾಯಿಯೊಬ್ಬರು ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಹಾಲುಣಿಸಲು ಸೂಕ್ತವಾದ ಸ್ಥಳವನ್ನು ಹುಡುಕಾಡಲು ಪರದಾಡಿದರು. ಯಾವುದೇ ಸ್ಥಳ ಸಿಗದಿದ್ದಾಗ ಕೊನೆಗೆ ತಾಯಿ ನಿಲ್ದಾಣದ ಪ್ಲಾಟ್ಫಾರಂನಲ್ಲಿಅಕ್ಕಪಕ್ಕದ ಗೋಡೆ ಮರೆಯಲ್ಲಿ ನಿಂತು, ನೆಲದ ಮೇಲೆ ಕೂತು ಪರದಾಡಿದ್ದ ಮಹಿಳೆ ಮರೆಯಲ್ಲಿ ಹಾಲುಣಿಸಿದರು. ಮಗುವಿಗೆ ಹಾಲುಣಿಸುತ್ತಿರುವ ವೇಳೆ ಪತಿ ಮತ್ತು ಮಾವ ಕಾವಲಿಗೆ ನಿಂತಿದ್ದರು. ತಾಯಿ ಮಗುವಿಗೆ ಹಾಲುಣಿಸಲು ಪರದಾಡಿದ ವಿಡಿಯೋ ವೈರಲ್ ಆಗಿದೆ.
ಇದೀಗ ಈ ಬಗ್ಗೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮೆಟ್ರೋ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್‌ಗಳಲ್ಲಿ ಇದೇ ರೀತಿಯ ಸೌಲಭ್ಯಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಇಂಥಹ ಸೌಕರ್ಯಗಳು ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯಕ್ಕೆ ಮನವಿ ಮಾಡಿದ್ದಾರೆ.
ನಿರ್ಭಯಾ ಯೋಜನೆಯಡಿ ಕೇಂದ್ರ ಸರ್ಕಾರ ದೇವಸ್ಥಾನ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಆರೈಕೆ ಕೇಂದ್ರ ಸ್ಥಾಪನೆ ಮಾಡಿದೆ. ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರಿಗೆ ಆರಾಮದಾಯಕ ವಾತಾವರಣವನ್ನು ಒದಗಿಸಲು ನಮ್ಮ ಮೆಟ್ರೋ ನಿಲ್ದಾಣದಲ್ಲೂ ಆರೈಕೆ ಕೇಂದ್ರ ಸ್ಥಾಪಿಸುವಂತೆ ಆಗ್ರಹ ಕೇಳಿ ಬಂದಿದೆ.