ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಬರ್ಬರ ಕೊಲೆ
ಹಿಂದೂ ಯುವಕ ಗವಿಸಿದ್ದಪ್ಪ ಕಳೆದ ಎರಡು ವರ್ಷಗಳಿಂದ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಮನೆ ಬಿಟ್ಟು ಓಡಿ ಹೋಗಿದ್ದರು. ಈ ಕುರಿತಂತೆ ನಾಲ್ಕೈದು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು.;
ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದಕ್ಕೆ ಹಿಂದೂ ಧರ್ಮದ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗ ನಡೆದಿದೆ.
ಗವಿಸಿದ್ದಪ್ಪ ನಾಯಕ್ ಕೊಲೆಯಾದ ವ್ಯಕ್ತಿ. ಸಾದಿಕ್ ಕೋಲ್ಕಾರ್ ಕೊಲೆ ಮಾಡಿದ ಆರೋಪಿ. ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ನೀಡಿದ ದೂರಿನ ಮೇರೆಗೆ ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗವಿಸಿದ್ದಪ್ಪನನ್ನು ಕೊಲೆ ಮಾಡಿದ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್ಎಸ್ 2023 ಕಲಂ 3(2)ವಿ, ಎಸ್ಸಿ-ಎಸ್ಟಿ ಕಾಯ್ದೆ 1989 ಅಡಿ ದೂರು ದಾಖಲಾಗಿದೆ.
ಹಿಂದೂ ಯುವಕ ಗವಿಸಿದ್ದಪ್ಪ ಕಳೆದ ಎರಡು ವರ್ಷಗಳಿಂದ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು ಮನೆ ಬಿಟ್ಟು ಓಡಿ ಸಹ ಹೋಗಿದ್ದರು. ಈ ಕುರಿತಂತೆ ನಾಲ್ಕೈದು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು. ಆದರೂ ಗವಿಸಿದ್ದಪ್ಪ ಹಾಗೂ ಮುಸ್ಲಿಂ ಯುವತಿಯ ನಡುವೆ ಪ್ರೀತಿ ಮುಂದುವರೆದಿತ್ತು. ಹೀಗಾಗಿ ಗವಿಸಿದ್ದಪ್ಪನನ್ನು ಸಾದಿಕ್ ಮಚ್ಚಿನಿಂದ ಕೊಲೆ ಮಾಡಿದ್ದಾನೆ.
ಬಹದ್ದೂರ ಬಂಡಿ ರಸ್ತೆಯಿಂದ ಬರುತ್ತಿದ್ದ ಗವಿ ಸಿದ್ದಪ್ಪನನ್ನು ಅಡ್ಡಗಟ್ಟಿ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ನಾಯಕ್ ಸಂಬಂಧಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಮುಸ್ಲಿಂ ಅಪ್ರಾಪ್ತ ಯುವತಿಯನ್ನು ಸಾದಿಕ್ ಪ್ರೀತಿಸುತ್ತಿದ್ದನಂತೆ. ಸಾದಿಕ್ನೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡ ಯುವತಿ ಗವಿಸಿದ್ದಪ್ಪನನ್ನು ಪ್ರೀತಿಸಲು ಶುರು ಮಾಡಿದ್ದಳು. ಈ ವಿಷಯ ತಿಳಿದ ಸಾದಿಕ್ ಅನೇಕ ಬಾರಿ ಗವಿಸಿದ್ದಪ್ಪನೊಂದಿಗೆ ಜಗಳ ಸಹ ಮಾಡಿದ್ದನಂತೆ. ಈ ವಿಷಯ ಅತಿರೇಕಕ್ಕೆ ಹೋಗಿ ಭಾನುವಾರ ರಾತ್ರಿ 8 ಗಂಟೆಗೆ ಮಸೀದಿ ಬಳಿ ಬೈಕ್ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.