LORRY STRIKE IN KARNATAKA| ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ; ಸರಕು ಸಾಗಾಣಿಕೆ ಅಸ್ತವ್ಯಸ್ತ

ಟ್ರಕ್‌ಗಳ ಮುಷ್ಕರದಿಂದಾಗಿ, ದೈನಂದಿನ ಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಮುಷ್ಕರ ಮುಂದುವರಿದರೆ, ಕೆಲವು ಪ್ರದೇಶಗಳಲ್ಲಿ ಜನರು ತರಕಾರಿಗಳು, ಹಣ್ಣುಗಳು ಮತ್ತು ಇಂಧನದ ಕೊರತೆಯನ್ನು ಎದುರಿಸಬೇಕಾಗುತ್ತದೆ.;

Update: 2025-04-15 13:58 GMT

ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. 

ರಾಜ್ಯದಲ್ಲಿ ಟ್ರಕ್ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಸಾಮಾನ್ಯ ಜನಜೀವನ ಈಗಾಗಲೇ ಅಸ್ತವ್ಯಸ್ತವಾಗಿದೆ. ರಾಜ್ಯ ಲಾರಿ ಮಾಲೀಕರ ಸಂಘದ ಮುಷ್ಕರ ಏಪ್ರಿಲ್ 14 ರ ಮಧ್ಯರಾತ್ರಿಯಿಂದ ಆರಂಭವಾಗಿದೆ. ಇದರಿಂದಾಗಿ ಸಾಮಗ್ರಿಗಳು, ಇಂಧನ ಮತ್ತು ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಮುಷ್ಕರ ಹೀಗೆ ಮುಂದುವರಿದರೆ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುವ ಸಾಧ್ಯತೆ ಇದೆ. 

ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು, ರಸ್ತೆ ಸುಂಕ ಕಡಿತಗೊಳಿಸಬೇಕು ಮತ್ತು ಆರ್‌ಟಿಒ ಅಧಿಕಾರಿಗಳ ಕಿರುಕುಳವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಲಾರಿ ಮಾಲೀಕರ ಸಂಘ ಮುಷ್ಕರ ನಡೆಸಿದೆ. ಇದರ ಪರಿಣಾಮವಾಗಿ ಜಲ್ಲಿಕಲ್ಲು, ಮರಳು, ಇಂಧನ, ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಆಹಾರ ಧಾನ್ಯಗಳಂತಹ ಸರಕುಗಳ ಸಾಗಣೆಗೆ ಅಡ್ಡಿಯಾಗುತ್ತಿದೆ. ಆದರೂ ಹಾಲು, ಔಷಧಿಗಳು, ಗೃಹಬಳಕೆಗೆ ಅಡುಗೆ ಅನಿಲ, ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಸೇವೆಗಳಂತಹ ಅಗತ್ಯ ಸೇವೆಗಳನ್ನು ಒದಗಿಸುವ ಸೇವೆಗಳಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ. 

 ಟ್ರಕ್‌ಗಳ ಮುಷ್ಕರದಿಂದಾಗಿ, ದೈನಂದಿನ ಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಮುಷ್ಕರ ಮುಂದುವರಿದರೆ, ಕೆಲವು ಪ್ರದೇಶಗಳಲ್ಲಿ ಜನರು ತರಕಾರಿಗಳು, ಹಣ್ಣುಗಳು ಮತ್ತು ಇಂಧನದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ಡಿಪೋಗಳಲ್ಲಿ ಎಲ್‌ಪಿಜಿ ವಿತರಣೆ ಮತ್ತು ಪಡಿತರ ಪೂರೈಕೆಯಲ್ಲಿ ವಿಳಂಬವಾಗುವ ಸಾಧ್ಯತೆಯೂ ಇದೆ. 

ಎಲ್ಲೆಲ್ಲಿ ಮುಷ್ಕರ 

ಯಶವಂತಪುರದ ಟ್ರಕ್ ಟರ್ಮಿನಲ್​ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂದಿದೆ. ದಿನಸಿ, ತರಕಾರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾಗಾಟ ಮಾಡುವ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಹೆದ್ದಾರಿ ಹಾಗೂ ನಿಲ್ದಾಣಗಳಲ್ಲಿ ಲಾರಿ ನಿಲ್ಲಿಸಿ ಚಾಲಕರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದರು. 

ಡೀಸಲ್ ಬೆಲೆ ಏರಿಕೆ, ಟೋಲ್ ದರ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಲಾರಿ ಮಾಲೀಕರ, ಚಾಲಕರು ಮುಷ್ಕರ ಕೈಗೊಂಡಿದ್ದು ಮುಷ್ಕರಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾರಿಗಳು ರಸ್ತೆಗಿಳಿಯದೆ ಹಾಗೆ ನಿಂತಿದ್ದು, ಸುಮಾರು 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಬಂದ್ ಆಗಿದೆ. ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧಿಸಲಾಗಿದೆ.

 ಹುಬ್ಬಳ್ಳಿಯ ನಗರದ ಹೊರವಲಯದ ಕಾರವಾರ-ಹುಬ್ಬಳ್ಳಿ ರಸ್ತೆಯ ಅಂಚಟಗೇರಿ ಗ್ರಾಮದ ಬಳಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ದಿನನಿತ್ಯದ ಹಣ್ಣು-ಹಾಲು, ತರಕಾರಿ, ಗ್ಯಾಸ್, ಔಷಧ ಸಂಬಂಧಿತ ವಸ್ತುಗಳ ಸಾಗಣೆ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಉಳಿದಂತೆ ವಾಣಿಜ್ಯ ಹಾಗೂ ಇತರೆ ಸರಕು ಸಾಗಣೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕುಸಿತ ಕಂಡಿದೆ.

ತುಮಕೂರಿನಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮುಜಾಮಿಲ್ ಪಾಷಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೆದ್ದಾರಿಗಳಲ್ಲಿ ಸಾಗುತ್ತಿದ್ದ ಲಾರಿಗಳನ್ನು ಸಂಘದ ಸದಸ್ಯರು ಅಡ್ಡಗಟ್ಟಿದರು. ಅಲ್ಲದೇ, ಬಂದ್​ಗೆ ಬೆಂಬಲ ನೀಡುವಂತೆ ಲಾರಿ ಮಾಲೀಕರಲ್ಲಿ ಹಾಗೂ ಚಾಲಕರಲ್ಲಿ ಮನವಿ ಮಾಡಿದರು. 

ರಸ್ತೆಗಿಳಿಯದ ತಮಿಳುನಾಡು ಲಾರಿಗಳು

ಮುಷ್ಕರದ ಬಿಸಿ ಬೇರೆ ರಾಜ್ಯಕ್ಕೂ ತಟ್ಟಿದ್ದು, ತಮಿಳುನಾಡಿನಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಟ್ರಕ್ಕರ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿರುವ ಹಿನ್ನೆಲೆಯಲ್ಲಿ, ಆ ರಾಜ್ಯದ ಟ್ರಕ್‌ಗಳು ಕರ್ನಾಟಕಕ್ಕೆ ಪ್ರವೇಶಿಸುವುದನ್ನು ತಡೆಯಬೇಕು ಎಂದು ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ. ಧನರಾಜ್ ತಿಳಿಸಿದ್ದರು. 

 ಮುಷ್ಕರದಿಂದಾಗಿ ಬೆಂಗಳೂರಿನಲ್ಲಿ ತಮಿಳುನಾಡು ಟ್ರಕ್‌ಗಳಿಗೆ 'ಪ್ರವೇಶವಿಲ್ಲ' ನಿರ್ಬಂಧಗಳನ್ನು ಸಡಿಲಿಸುವಂತೆಯೂ ಅವರು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ ಟ್ರಕ್ ಮಾಲೀಕರು ಮತ್ತು ಬುಕಿಂಗ್ ಏಜೆಂಟ್ ಸಂಘಗಳ ಮುಷ್ಕರ ಬಗೆಹರಿಯುವವರೆಗೆ ತಮಿಳುನಾಡು ಟ್ರಕ್‌ಗಳು ಕರ್ನಾಟಕಕ್ಕೆ ಪ್ರವೇಶಿಸುವುದನ್ನು ತಡೆಯುತ್ತವೆ ಎಂದು ಧನರಾಜ್ ತಿಳಿಸಿದ್ದರು. ಹೀಗಾಗಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಹೋಗುವ ಲಾರಿಗಳು ಮತ್ತು ಕರ್ನಾಟಕದ ಮೂಲಕ ಇತರ ರಾಜ್ಯಗಳಿಗೆ ಹೋಗುವ ಲಾರಿಗಳನ್ನು ಹೊಸೂರು ಗಡಿಯಲ್ಲಿ ನಿಲ್ಲಿಸಲಾಗಿದೆ. 

ಮತ್ತೊಂದೆಡೆ ತಮಿಳುನಾಡಿಗೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳು  ಹೋಗುತ್ತವೆ.  ಕರ್ನಾಟಕದಿಂದ ಮತ್ತು ಕರ್ನಾಟಕ ಮೂಲಕ ಹೋಗುತ್ತವೆ.  ಲಾರಿ ಮುಷ್ಕರದಿಂದಾಗಿ  ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಅಪಾಯವಿದೆ ಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಮುಷ್ಕರದ ಬಿಸಿ ನೆರೆಯ ರಾಜ್ಯಕ್ಕೂ ತಟ್ಟಿದೆ. 

ತುರ್ತು ಸಭೆ ಕರೆದ ಸಾರಿಗೆ ಸಚಿವ

ಮತ್ತೊಂದೆಡೆ, ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ತುರ್ತು ಸಭೆ ಕರೆದಿದ್ದು, ಲಾರಿ ಮಾಲೀಕರೊಂದಿಗೆ ಮಾತುಕತೆ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಮುಷ್ಕರವನ್ನು ತ್ವರಿತವಾಗಿ ಕೊನೆಗೊಳಿಸುವ ಪ್ರಯತ್ನದಲ್ಲಿ ಕೆಲವು ಬೇಡಿಕೆಗಳನ್ನು ಪರಿಗಣಿಸಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಲೆ ಏರಿಕೆ ಸಾಧ್ಯತೆ 

ಮುಷ್ಕರ ಯಾವಾಗ ಕೊನೆಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ದೀರ್ಘಕಾಲದವರೆಗೆ ಮುಂದುವರಿದರೆ, ಪೂರೈಕೆ ಸರಪಳಿಯಲ್ಲಿನ ಅಡ್ಡಿಯಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಬಹುದು. ಲಾರಿ ಮಾಲೀಕರ ಸಂಘವು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಏಪ್ರಿಲ್ 27 ಮತ್ತು 28 ರಂದು ಎರಡು ದಿನಗಳ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ. 

Tags:    

Similar News