ʼಲೀಪ್‌ʼ ಯೋಜನೆಯಡಿ ಕಲ್ಯಾಣ ಕರ್ನಾಟಕದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

ಗ್ರಾಮೀಣ ಕರ್ನಾಟಕದಲ್ಲಿ ಬಳಕೆಯಾಗದ ಅಪಾರ ಸಾಮರ್ಥ್ಯವನ್ನು ಕಲಬುರಗಿ ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ಶೇ. 70 ಕ್ಕೂ ಹೆಚ್ಚು ಉದ್ಯೋಗಿಗಳು ಕೃಷಿ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Update: 2025-11-24 15:05 GMT

ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ

Click the Play button to listen to article

ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್‌) ಅಡಿ ಕಲಬುರಗಿಯಲ್ಲಿ ಹೊಸ ಉದ್ಯಮಶೀಲತಾ ಕೇಂದ್ರ ಪ್ರಾರಂಭಿಸುವುದಾಗಿ ರಾಜ್ಯ ಸರ್ಕಾರವು ಪ್ರಕಟಿಸಿದೆ. ಇದು 1,000 ಕೋಟಿ ರೂ. ವೆಚ್ಚದ ಐದು ವರ್ಷಗಳ ಉಪಕ್ರಮವಾಗಿದೆ.

ಪ್ರಾದೇಶಿಕ ಉದ್ಯಮಶೀಲತೆಗೆ ಚೇತರಿಕೆ ನೀಡಲು, ನಾವೀನ್ಯತೆ ವಿಕೇಂದ್ರೀಕರಿಸಲು ಮತ್ತು ರಾಜ್ಯದ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ಆರ್ಥಿಕ ಬೆಳವಣಿಗೆ ತ್ವರಿತಗೊಳಿಸಲು ಇದು ನೆರವಾಗಲಿದೆ. ಕೃಷಿಕಲ್ಪ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಉದ್ಯಮಶೀಲತಾ ಕೇಂದ್ರವು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾವೀನ್ಯತೆ ವ್ಯವಸ್ಥೆ ಬಲಪಡಿಸುವ ಗುರಿ ಹೊಂದಿದೆ. ಕೃಷಿ, ಸಂಬಂಧಿತ ವಲಯಗಳು, ಗ್ರಾಮೀಣ ನಾವೀನ್ಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.

ಈ ಉಪಕ್ರಮದ ಭಾಗವಾಗಿ, ಕಲಬುರಗಿ ಜಿಲ್ಲಾಡಳಿತವು 15,000 ಚದರ ಅಡಿ ವಿಸ್ತೀರ್ಣದ ಬಳಕೆಗೆ ಸಿದ್ಧವಾದ ಸ್ಥಳಾವಕಾಶ ಹಂಚಿಕೆ ಮಾಡಿದೆ. ಇದು ಈ ಪ್ರದೇಶಕ್ಕೆ ಮೀಸಲಾದ ನವೋದ್ಯಮ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳ ಸಂಸ್ಥಾಪಕರು, ಕೃಷಿ ಉದ್ಯಮಿಗಳು, ನಾವೀನ್ಯಕಾರರು ಮತ್ತು ಪೂರಕ ಉದ್ದಿಮೆಗಳ ಪಾಲುದಾರರಿಗೆ ಅಗತ್ಯ ನೆರವು ಒದಗಿಸಲಿದೆ.

ಈ ಕೇಂದ್ರವು ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಹಣಕಾಸು ನೆರವಿನ ಲಭ್ಯತೆ ಚೌಕಟ್ಟು ಆಧರಿಸಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳ ವೇಗವರ್ಧನೆ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತೆಗೆ ಉತ್ತೇಜನ ತತ್ವಗಳಡಿ ಇದು ಕಾರ್ಯನಿರ್ವಹಿಸಲಿದೆ. ಮೂಲಸೌಲಭ್ಯ ಮತ್ತು ಮಾರುಕಟ್ಟೆ ಲಭ್ಯತೆ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ನವೋದ್ಯಮಗಳು ಸ್ಥಳೀಯವಾಗಿ ವಿಶ್ವ ದರ್ಜೆಯ ನಾವೀನ್ಯತೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ಅನುವು ಮಾಡಿಕೊಡಲು ಅತ್ಯಾಧುನಿಕ ಮೂಲ ಮಾದರಿ ಪ್ರಯೋಗಾಲಯ ಸಹ ಸ್ಥಾಪಿಸಲಾಗುವುದು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಕಲಬುರಗಿಯು ಗ್ರಾಮೀಣ ಕರ್ನಾಟಕದ ಬಳಕೆಯಾಗದ ಅಪಾರ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ಶೇ 70 ಕ್ಕೂ ಹೆಚ್ಚು ಉದ್ಯೋಗಿಗಳು ಕೃಷಿ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ʼಲೀಪ್‌ʼ ಉಪಕ್ರಮದಡಿ ಮತ್ತು ಹೊಸ ಉದ್ಯಮಶೀಲತಾ ಕೇಂದ್ರದ ಮೂಲಕ, ನಾವು ತಂತ್ರಜ್ಞಾನ, ನಾವೀನ್ಯತೆ ಮತ್ತು ಅವಕಾಶಗಳನ್ನು ನೇರವಾಗಿ ನಮ್ಮ ಸಮುದಾಯಗಳಿಗೆ ತಲುಪಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಅಂತರ ಕಡಿಮೆ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ರಾಜ್ಯದ ಐಟಿ- ಬಿಟಿ ವಲಯದ ವಹಿವಾಟು 1.5 ಲಕ್ಷ ಕೋಟಿ ರೂ.ದಾಟಿದೆ. ʼಲೀಪ್‌ʼ ಉಪಕ್ರಮದಡಿ 5 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯೊಂದಿಗೆ ಈ ಶ್ರೇಷ್ಠತಾ ಕೇಂದ್ರವು ಕಲಬುರಗಿಯ ಯುವಕರಿಗೆ ಕೃಷಿ-ತಂತ್ರಜ್ಞಾನ, ಡೀಪ್-ಟೆಕ್ ಮತ್ತು ಸಂಬಂಧಿತ ವಲಯದ ನಾವೀನ್ಯತೆಗಳ ಮೂಲಕ ಸುಸ್ಥಿರ ಜೀವನೋಪಾಯ ನಿರ್ಮಿಸಲು ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.

ಈ ಉದ್ಯಮಶೀಲತಾ ಕೇಂದ್ರವು 2026ರ ಜನವರಿಯ ಆರಂಭದಲ್ಲಿ ಔಪಚಾರಿಕವಾಗಿ ಪ್ರಾರಂಭವಾಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದಾದ್ಯಂತ ಸುಸ್ಥಿರ ಸ್ವರೂಪದ ಉದ್ಯಮಶೀಲತಾ ಚಟುವಟಿಕೆಗಳಿಗೆ ಚಾಲನೆ ನೀಡಲಿದೆ.

ಪರಿವರ್ತನಾಶೀಲ ಕ್ಷೇತ್ರಗಳು

• ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಮತ್ತು ವ್ಯವಸ್ಥೆಯ ಬಲವರ್ಧನೆ, ಪ್ರತ್ಯೇಕ ಕೆಲಸದ ಸ್ಥಳಗಳು, ರಚನಾತ್ಮಕ ವೇಗವರ್ಧಿಸುವ ಕಾರ್ಯಕ್ರಮಗಳು ಮತ್ತು ನವೋದ್ಯಮಗಳು ಹಾಗೂ ಗ್ರಾಮೀಣ ಉದ್ಯಮಿಗಳಿಗೆ ಅಗತ್ಯ ಬೆಂಬಲ.

•ತಜ್ಞರ ನೇತೃತ್ವದ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ ಮತ್ತು ಕೌಶಲ-ಅಭಿವೃದ್ಧಿ, ಹಣಕಾಸು ನೆರವು.

• ಗ್ರಾಮೀಣ ಕೃಷಿ ವಹಿವಾಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಐಒಟಿ, ರೋಬೊಟಿಕ್ಸ್, ಎಐ, ಆಹಾರ ಸಂಸ್ಕರಣೆ, ಯಾಂತ್ರೀಕರಣ, ವಿಆರ್ ಮತ್ತು ಐಟಿ-ಸೌಲಭ್ಯಗಳ ಸೇವೆಗಳಿಗೆ ಪ್ರಯೋಗಾಲಯಗಳು.

• ನವೋದ್ಯಮಗಳು ಸ್ಥಳೀಯವಾಗಿ ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಸಹಾಯ ಮಾಡುವ ಪೂರ್ಣ ಪ್ರಮಾಣದ ಮೂಲಮಾದರಿ ಪ್ರಯೋಗಾಲಯವು, ವೆಚ್ಚ ತಗ್ಗಿಸಲಿದೆ.

• ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು, ಗ್ರಾಮೀಣ - ನಗರ ವಲಸೆಯನ್ನು ಕಡಿಮೆ ಮಾಡುವುದು.

• ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರು ಮತ್ತು ಇತರರ ಪಾಲುದಾರಿಕೆಯಡಿ 15,000 ಚದರ ಅಡಿಗಳಷ್ಟು ಪ್ರತ್ಯೇಕ ನವೋದ್ಯಮ ಸ್ಥಳಾವಕಾಶ.

Tags:    

Similar News