ರಾಜ್ಯದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್‌

ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಈ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗಗಳನ್ನು ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ.;

Update: 2025-07-04 08:42 GMT

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. 

ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಟ್ಟು 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಘೋಷಣೆಯಂತೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರಿಗೆ ಹೆಚ್ಚಿನ ಪಾಲು, ಸಚಿವರ ತವರು ಜಿಲ್ಲೆಗೂ ವಿಸ್ತರಣೆ

ಹೊಸದಾಗಿ ಇಂಗ್ಲಿಷ್ ಮಾಧ್ಯಮ ವಿಭಾಗಗಳು ಆರಂಭವಾಗುವ 4,134 ಶಾಲೆಗಳಲ್ಲಿ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲೇ 1,103 ಶಾಲೆಗಳಿವೆ. ಉಳಿದ 33 ಶೈಕ್ಷಣಿಕ ಜಿಲ್ಲೆಗಳಲ್ಲಿ 2,897 ಸರ್ಕಾರಿ ಶಾಲೆಗಳು ಈ ಹೊಸ ವಿಭಾಗಗಳನ್ನು ಪಡೆಯಲಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗದ ತೀರ್ಥಹಳ್ಳಿ, ಬಿಲಾಲುಕೊಪ್ಪ, ಹೊಸೂರು-ಗುಡ್ಡಕೇರಿ ಮತ್ತು ಹೆದ್ದೂರಿನಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಲ್ಲೂ ಹೊಸ ದ್ವಿಭಾಷಾ ವಿಭಾಗಗಳು ಪ್ರಾರಂಭವಾಗಲಿವೆ.

ಹಂತ ಹಂತವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಹೆಚ್ಚಳ

ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ಕಾರ್ಯಕ್ರಮವನ್ನು ಸರ್ಕಾರ ಹಂತ ಹಂತವಾಗಿ ವಿಸ್ತರಿಸುತ್ತಿದೆ. 2019-20ನೇ ಸಾಲಿನಲ್ಲಿ 1,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ಆರಂಭಿಸಲಾಗಿತ್ತು. ನಂತರ, 2024-25ನೇ ಸಾಲಿನಲ್ಲಿ ಇದನ್ನು 2,000 ಶಾಲೆಗಳಿಗೆ ಹೆಚ್ಚಿಸಲಾಯಿತು. ಇದೀಗ ಈ ಸಂಖ್ಯೆ 4,134ಕ್ಕೆ ಏರಿಕೆಯಾಗಿರುವುದು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಲಭ್ಯ ಸಂಪನ್ಮೂಲಗಳ ಬಳಕೆ

ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕ್ರಮದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದ್ದು, ಗುಣಮಟ್ಟದ ಶಿಕ್ಷಣ ಒದಗಿಸುವ ಸರ್ಕಾರದ ಬದ್ಧತೆ ಇದರಿಂದ ಸ್ಪಷ್ಟವಾಗಿದೆ.

---

Tags:    

Similar News