ಕೊಡಗು, ಹಾಸನದಲ್ಲಿ ಕಾಡಾನೆ ನಿಯಂತ್ರಿಸಲು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ
ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರನ್ನು ಸಂಪರ್ಕಿಸಿ ಆನೆಗಳ ಚಲನ-ವಲನಗಳ ಮಾಹಿತಿಯನ್ನು ನೀಡಿ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕದ ಮೂಲಕ ತಿಳಿಸಲಾಗುತ್ತಿದೆ.;
ಕೊಡಗು ಮತ್ತು ಹಾಸನದಲ್ಲಿ ಕಾಡಾನೆಗಳ ಕಾಟ ನಿಯಂತ್ರಿಸಲು ಕೊಡಗು ಮತ್ತು ಹಾಸನ ಬಳಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ಮಾಡುವ ಪ್ರಯತ್ನ ನಡೆಯುತ್ತಿದೆ.
ಈ ಆನೆ ವಿಹಾರ ಧಾಮದಲ್ಲಿ ಆನೆಗಳಿಗೆ ಇಷ್ಟವಾದ ಹುಲ್ಲು, ಬಿದಿರು, ಹಲಸು ಇತ್ಯಾದಿ ಬೆಳೆಸಲಾಗುತ್ತದೆ. ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗುತ್ತದೆ.
ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಎಂದರೆ ಕಾಡಾನೆಗಳಿಗೆ ಸ್ಥಾಪಿಸಲಾದ ವಿಶೇಷ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ, ರೈತರಿಗೆ ಹಾನಿಯಾಗಿ ಅರಣ್ಯ ಇಲಾಖೆಯಿಂದ ಸೆರೆಯಾದ ಅಥವಾ ಗಾಯಾಳು ಆನೆಗಳನ್ನು ಅರಣ್ಯ ಪರಿಸರಕ್ಕೆ ಮತ್ತೆ ಬಿಡುಗಡೆ ಮಾಡಲು ಅವಕಾಶವಾಗುತ್ತದೆ. ಸಾಫ್ಟ್ ರಿಲೀಸ್ ಪ್ರಕ್ರಿಯೆ ಎಂದರೆ ಸೆರೆಯಾದ ಕಾಡಾನೆಗಳನ್ನು ನೇರವಾಗಿ ಕಾಡಿಗೆ ಬಿಡುವ ಬದಲು ಮತ್ತೆ ಅಋಣ್ಯ ಪರಿಸರಕ್ಕೆ ಹೊಂದುವಂತೆ ಮಾಡಲು ಇಲ್ಲಿ ಸಹಾಯವಾಗುತ್ತದೆ. ಇಲ್ಲಿ ಆನೆಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಅವುಗಳ ನಡವಳಿಕೆಯ ಮೇಲ್ವಿಚಾರಣೆಯನ್ನೂ ಅರಣ್ಯ ಇಲಾಖೆ ನಡೆಸುತ್ತದೆ.
ಕ್ಷಿಪ್ರ ಸ್ಪಂದನ ತಂಡ
ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರನ್ನು ಸಂಪರ್ಕಿಸಿ ಆನೆಗಳ ಚಲನ-ವಲನಗಳ ಮಾಹಿತಿಯನ್ನು ನೀಡಿ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕದ ಮೂಲಕ ತಿಳಿಸಲಾಗುತ್ತಿದೆ. ಆನೆ ಕಾರ್ಯ ಪಡೆ(ETF), ಕ್ಷಿಪ್ರ ಸ್ಪಂದನ ತಂಡ(RRT) ಮತ್ತು ಹಿಮ್ಮೆಟ್ಟಿಸುವ ಶಿಬಿರ ತಂಡದ (ADC) ಸಿಬ್ಬಂದಿಗಳೊಂದಿಗೆ ರಾತ್ರಿ ಗಸ್ತು ಕಾರ್ಯ ಕೈಗೊಂಡು ಸ್ಥಳೀಯ ಸಾರ್ವಜನಿಕರನ್ನು ಎಚ್ಚರಿಸುವ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ರವಾನಿಸಲಾಗುತ್ತಿರುತ್ತದೆ. ಆಕಾಶವಾಣಿ ಮುಖಾಂತರ ಹಾಗೂ ವಾಟ್ಸಾಪ್ ಗ್ರೂಪ್ ಗಳ ಮುಖಾಂತರ ಕಾಡಾನೆಗಳ ಚಲನ-ಚಲನ ಸಂದೇಶಗಳನ್ನು ರವಾನಿಸಲಾಗುತ್ತಿರುತ್ತದೆ, ಇಲಾಖಾ ವಾಹನಗಳಲ್ಲಿ ಪ್ರತಿನಿತ್ಯ ಕಾಡಾನೆಗಳಿರುವ ಸ್ಥಳಗಳಲ್ಲಿ ಗಸ್ತು ಮಾಡಿ ಧ್ವನಿವರ್ಧಕಗಳ ಮುಖಾಂತರ ಸಾರ್ವಜನಿಕರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಲೂ ಇಲಾಖೆ ಕ್ರಮ ಕೈಗೊಂಡಿದೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಈ ವಿಷಯ ಪ್ರಕಟಿಸಿದ್ದಾರೆ.
ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ಕುಟುಂಬದ ಹತ್ತಿರದ ಬಂಧುಗಳಿಗೆ ಈ ಹಿಂದೆ ರೂ.7.50 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಈಗ ರೂ.15.00 ಲಕ್ಷ ರೂ. ದಯಾತ್ಮಕ ಪರಿಹಾರ ನೀಡಲಾಗುತ್ತಿದೆ. ಜೊತೆಗೆ ಮಾಹೆಯಾನ ರೂ.4000.00 ರಂತೆ 05 ವರ್ಷಗಳ ಅವಧಿಗೆ ಮಾಸಾಶನ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.
ಹಾಸನ ಜಿಲ್ಲಾ ವ್ಯಾಪ್ತಿಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಗ್ರಾಮಗಳಲ್ಲಿ ಕಳೆದ 03 ತಿಂಗಳಿನಿಂದ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ, ಈ ಕಾಡಾನೆಗಳನ್ನು ಅರಣ್ಯ ಪ್ರದೇಶಗಳ ಕಡೆಗೆ ಹಿಮ್ಮೆಟಿಸಲು ಇಲಾಖಾ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿರುತ್ತದೆ. ಬೇಲೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿಯಿಂದ ಹಾನಿಗೊಳಗಾದ ಮಾನವ ಪ್ರಾಣಹಾನಿ ಮತ್ತು ಮಾನವ ಗಾಯ ಪ್ರಕರಣಗಳಿಗೆ ದಯಾತ್ಮಕ ಪರಿಹಾರ ಧನ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.