ರಾಜ್ಯದಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ! ಎರಡೂವರೆ ವರ್ಷದಲ್ಲಿ1,888; ಶಿಕ್ಷೆ ಶೂನ್ಯ..!
ದಾಖಲಾಗಿರುವ 1,888 ಅತ್ಯಾಚಾರ ಪ್ರಕರಣದಲ್ಲಿ 2,143 ಆರೋಪಿಗಳ ಬಂಧನವಾಗಿದೆ. ಆದರೆ, ಆಶ್ಚರ್ಯಕರ ಸಂಗತಿ ಎಂದರೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ಮಾತ್ರ ಶೂನ್ಯ..!;
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ ಹೆಚ್ಚಾಗುತ್ತಲೇ ಇದೆಯಾದರೂ, ಶಿಕ್ಷೆಯ ಪ್ರಮಾಣ ಮಾತ್ರ ನಿರೀಕ್ಷಿತ ಮಟ್ಟದಲ್ಲಿಲ್ಲ. ಲೈಂಗಿಕ ದೌರ್ಜನ್ಯ, ಪತಿಯಿಂದ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ.
ಕಳೆದ ಎರಡೂವರೆ ವರ್ಷಗಳಲ್ಲಿ ದಾಖಲಾಗಿರುವ 1,888 ಅತ್ಯಾಚಾರ ಪ್ರಕರಣಗಳಲ್ಲಿ 2,143 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಆಶ್ಚರ್ಯಕರ ಸಂಗತಿ ಎಂದರೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯ..!
ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2025ರ ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 549 ಪ್ರಕರಣಗಳಲ್ಲಿ 407 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 739 ಪ್ರಕರಣಗಳಿಂದ 969 ಹಾಗೂ 2023ರಲ್ಲಿ 600 ಪ್ರಕರಣಗಳಿಂದ 767 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ದಾಖಲಾಗಿರುವ 1,888 ಪ್ರಕರಣಗಳಲ್ಲಿ 2,143 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 83 ಪ್ರಕರಣಗಳು ಖುಲಾಸೆಗೊಂಡಿದ್ದು, ಇನ್ನುಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ ಎಂದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
ಈಗ ರಾಜ್ಯದಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ವರ್ಷ 2 ಪ್ರಕರಣಗಳಿಗೆ ಸೀಮಿತವಾಗಿತ್ತು. ವಿವಿಧ ವ್ಯಕ್ತಿಗಳಿಂದ ಲೈಂಗಿಕ ಕಿರುಕುಳ ಹಾಗೂ ಪತಿಯಿಂದ ಕಿರುಕುಳ ಪ್ರಕರಣ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಎರಡೂವರೆ ವರ್ಷಗಳಲ್ಲಿ 16,273 ಪ್ರಕರಣಗಳಿಂದ 19,312 ಆರೋಪಿಗಳನ್ನು ಬಂಧಿಸಲಾಗಿದೆ. ದಿನಕ್ಕೆ ಸರಾಸರಿ 16 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ.
ಪತಿಯಿಂದ ಪತ್ನಿಗೆ ನೀಡುವ ಕಿರುಕುಳ ಪ್ರಕರಣಗಳು ಎರಡೂವರೆ ವರ್ಷಗಳಲ್ಲಿ 7,516 ಕೇಸ್ಗಳು ದಾಖಲಾಗಿದ್ದು, 7,930 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿನಿತ್ಯ 8 ಪ್ರಕರಣಗಳು ಪತಿಯಿಂದ ಕಿರುಕುಳ ಬಗ್ಗೆ ವರದಿಯಾಗುತ್ತಿವೆ. ಇಂತಹ ಪ್ರಕರಣದಲ್ಲಿ 16 ಮಂದಿ ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇನ್ನುಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂಬುದು ಪೊಲೀಸರ ಸಮಜಾಯಿಷಿಯಾಗಿದೆ.
ಪರಿಚಯಸ್ಥರಿಂದಲೇ ಅತ್ಯಾಚಾರ, ದೌರ್ಜನ್ಯ
ಪೊಲೀಸ್ ಮೂಲಗಳ ಪ್ರಕಾರ, ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ಸಂಬಂಧಿಗಳು ಹಾಗೂ ಪರಿಚಯಸ್ಥರಾಗಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಒಟ್ಟಿಗೆ ಸುತ್ತಾಡುವ ಯುವ ಜೋಡಿಗಳು ದೈಹಿಕ ಸಂಪರ್ಕದ ಬಳಿಕ ವಿವಾಹವಾಗದೆ, ನುಣುಚಿಕೊಳ್ಳುವ ಪ್ರಹಸನಗಳು ಹೆಚ್ಚಾಗುತ್ತಿವೆ. ಬಳಿಕ ಠಾಣೆಗೆ ಹೋಗಿ ಸಂತ್ರಸ್ತೆಯು ಪ್ರಿಯಕರನ ವಿರುದ್ಧ ಅತ್ಯಾಚಾರ ಮಾಡಿರುವುದಾಗಿ ದೂರು ನೀಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವೆನಿಸಿದೆ. ಬಹುತೇಕ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಿಂದ ಪ್ರೇರೇಪಿತರಾಗಿ ಆನ್ಲೈನ್ ಮೂಲಕ ಸಂಪರ್ಕ ಸಾಧಿಸಿ, ಆರಂಭವಾಗುವ ಸ್ನೇಹ ಕ್ರಮೇಣ ಆತ್ಮೀಯತೆಗೆ ತಿರುಗಿ ಬೇಜವಾಬ್ದಾರಿ ಕೃತ್ಯಗಳಲ್ಲಿ ಯುವ ಸಮುದಾಯ ಭಾಗಿಯಾಗುತ್ತಿರುವುದು ನೋವಿನ ವಿಚಾರವಾಗಿದೆ. ವಿವಿಧ ಕಾರಣಗಳಿಗಾಗಿ ದೂರವಾಗಿ, ತನಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡುತ್ತಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯುವತಿಯ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ, ಹಣ ವಸೂಲಿ ಮಾಡುವ ಆರೋಪಿಗಳ ಸಂಖ್ಯೆ ಕೂಡ ಕಡಿಮೆಯಾಗಿಲ್ಲ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸೇಫ್ ಸಿಟಿ ಯೋಜನೆ ಇದ್ದರೂ ರಕ್ಷಣೆ ಸಮಸ್ಯೆ
ದಾಖಲಾಗಿರುವ ಅತ್ಯಾಚಾರ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ಸಿಂಹಪಾಲು ಪಡೆದುಕೊಂಡಿದೆ. ಆದರೆ, ನಿಖರವಾದ ಮಾಹಿತಿ ಲಭ್ಯವಾಗಲಿಲ್ಲ. ಪೊಲೀಸ್ ಇಲಾಖೆಯು ಸಹ ಈ ಬಗ್ಗೆ ಮಾಹಿತಿ ಕ್ರೊಢೀಕರಿಸಲಾಗುತ್ತಿದೆ ಎಂದು ಹೇಳಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕಾಗಿ ಸೇಫ್ ಸಿಟಿ ಯೋಜನೆಯಡಿ ಕೇಂದ್ರದ ಸಹಭಾಗಿತ್ವದೊಂದಿಗೆ ರಾಜ್ಯ ಸರ್ಕಾರದಿಂದ ನಗರದ 3 ಸಾವಿರ ಸ್ಥಳಗಳಲ್ಲಿ 496.57 ಕೋಟಿ ವೆಚ್ಚದಲ್ಲಿ 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ 635 ಕೋಟಿ ರೂ. ವೆಚ್ಚದಲ್ಲಿ ಇನ್ನೂ 1,376 ಕ್ಯಾಮರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಈ ಕ್ಯಾಮರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿ ನೇರವಾಗಿ ಕಮಾಂಡ್ ಸೆಂಟರ್ಗೆ ಸಂಪರ್ಕ ಕಲ್ಪಿಸಲಾಗಿದೆ. ಹೊಯ್ಸಳ ಗಸ್ತು ವಾಹನಗಳಲ್ಲಿ ಡ್ಯಾಶ್ ಕ್ಯಾಮರಾ ಅಳವಡಿಸಿ, ಸಾರ್ವಜನಿಕರ ತುರ್ತು ಕರೆಗಳಿಗೆ ಸ್ಪಂದಿಸುತ್ತಿದೆ. ನಗರದೆಲ್ಲೆಡೆ, 50 ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದೆ. ಶೋಷಣೆಗೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ, ಕಾನೂನು ನೆರವು ಒದಗಿಸಲಾಗಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೂ ಮಹಿಳೆಯರಿಗೆ ರಕ್ಷಣೆ ನೀಡುವುದು ಸಮಸ್ಯೆಯಾಗಿಯೇ ಕಾಡುತ್ತಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ.
ಅತ್ಯಾಚಾರ, ದೌರ್ಜನ್ಯಕ್ಕೆ ಕಾರಣಗಳು
* ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಪ್ರಮುಖ ಕಾರಣ
* ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲದಿರುವುದು
* ಡಗ್ಸ್, ಕುಡಿತ ಹಾಗೂ ಇನ್ನಿತರ ದುಶ್ಚಟದ ಗುಂಗಿನಲ್ಲಿ ಅರಿವಿಲ್ಲದೆ ಬಲತ್ಕಾರ
* ಅಧಿಕಾರ ಹಾಗೂ ಹಣದ ಪ್ರಭಾವ
* ನೀಲಿಚಿತ್ರ ವೀಕ್ಷಣೆಗೆ ದಾಸರಾಗಿ ದುಷ್ಟ ಚಟುವಟಿಕೆಗಳಲ್ಲಿ ಭಾಗಿ
* ಬಡತನ, ಹಣಕಾಸಿನ ಸಮಸ್ಯೆ ಸೇರಿದಂತೆ ಇತರೆ ದೌರ್ಬಲ್ಯಗಳನ್ನು ಬಳಸಿಕೊಂಡು ಲೈಂಗಿಕವಾಗಿ ದುರ್ಬಳಕೆ
ಅತ್ಯಾಚಾರ ಪ್ರಕರಣಗಳ ಅಂಕಿ-ಅಂಶಗಳ ವಿವರ
ಅತ್ಯಾಚಾರ ಪ್ರಕರಣಗಳ ಬಗ್ಗೆ ಗೃಹ ಇಲಾಖೆ ನೀಡಿರುವ ಮಾಹಿತಿಯನ್ನು ಗಮನಿಸಿದರೆ 2023 ರಲ್ಲಿ600 ಪ್ರಕರಣಗಳು ನಡೆದರೆ 767 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈ ವರ್ಷದಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. 55 ಮಂದಿ ಖುಲಾಸೆಯಾಗಿದ್ದಾರೆ. 2024 ರಲ್ಲಿ739 ಪ್ರಕರಣಗಳು ದಾಖಲಾಗಿದ್ದು, 969 ಆರೋಪಿಗಳನ್ನು ಬಂಧಿಸಲಾಗಿದೆ. ಈ ವರ್ಷದಲ್ಲಿಯೂ ಸಹ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. 28 ಮಂದಿ ಖುಲಾಸೆಯಾಗಿದ್ದಾರೆ. 2025ರಲ್ಲಿ ಜುಲೈವರೆಗೆ 549 ಪ್ರಕರಣಗಳು ದಾಖಲಾಗಿದ್ದು, 407 ಆರೋಪಿಗಳನ್ನು ಬಂಧಿಸಲಾಗಿದೆ. ಇಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಮತ್ತು ಖುಲಾಸೆಯೂ ಆಗಿಲ್ಲ.
ಶಿಕ್ಷೆಯಾಗದಿರುವುದಕ್ಕೆ ಕಾರಣ
ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಬಹಳಷ್ಟು ಬಾರಿ ರಾಜೀ ಸಂಧಾನದಿಂದಾಗಿ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ. ಕೆಲವು ಬಾರಿ ಹಣ ಬಲದಿಂದಲೂ ಶಿಕ್ಷೆಯಾಗುವುದಿಲ್ಲ. ಇದಲ್ಲದೇ, ನ್ಯಾಯಾಲಯದಲ್ಲಿ ವಕೀಲರ ವಾದವೂ ಸಹ ಕೆಲಸ ಮಾಡುತ್ತಿದೆ. ಹೀಗೆ ಹಲವು ಕಾರಣಗಳಿಂದಾಗಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾಗುವುದಿಲ್ಲ. ಅಲ್ಲದೇ, ಪೊಲೀಸರ ಏಕಪಕ್ಷೀಯ ಕೆಲಸಗಳು ಸಹ ಇದಕ್ಕೆ ಕಾರಣವಾಗಿರುತ್ತದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಹೇಳಿವೆ.
ಪತಿಯಿಂದಲೇ ಕಿರುಕುಳ ಪ್ರಕರಣಗಳ ಅಂಕಿ-ಸಂಖ್ಯೆ
ಪತಿಯಿಂದಲೇ ಕಿರುಕುಳ ನಡೆದ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ 2023ರಲ್ಲಿ 2959 ಪ್ರಕರಣಗಳು ವರದಿಯಾಗಿದ್ದು, 3598 ಮಂದಿಯನ್ನು ಬಂಧಿಸಲಾಗಿದೆ. 10 ಮಂದಿಗೆ ಶಿಕ್ಷೆಯಾದರೆ 364 ಮಂದಿ ಖುಲಾಸೆಗೊಂಡಿದ್ದಾರೆ. 2024ರಲ್ಲಿ 2910 ಪ್ರಕರಣಗಳು ದಾಖಲಾಗಿದ್ದು, 3136 ಮಂದಿಯನ್ನು ಬಂಧಿಸಲಾಗಿದೆ. 6 ಮಂದಿಗೆ ಮಾತ್ರ ಶಿಕ್ಷೆಯಾದರೆ 130 ಮಂದಿ ಖುಲಾಸೆಗೊಂಡಿದ್ದಾರೆ. 2025ರ ಜುಲೈವರೆಗೆ 1677 ಪ್ರಕರಣಗಳು ವರದಿಯಾಗಿದ್ದು, 1196 ಮಂದಿಯನ್ನು ಬಂಧಿಸಲಾಗಿದೆ. ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಇಬ್ಬರು ಖುಲಾಸೆಗೊಂಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳಿವೆ.