Gold Smuggling Case | ಚಿನ್ನ ಕಳ್ಳಸಾಗಾಣಿಕೆಗೆ ರನ್ಯಾ ಮಾಸ್ಟರ್ ಮೈಂಡ್; ಡಿಆರ್ಐ ಸಾಕ್ಷಿ ಸಂಗ್ರಹ
ದುಬೈನಲ್ಲಿ ವೀರಾ ಡೈಮಂಡ್ಸ್ ಟ್ರೇಡಿಂಗ್ ಕಂಪನಿ ಸ್ಥಾಪಿಸಿದ್ದರು. ಶೇ 50-50 ಷೇರು ಒಪ್ಪಂದದ ಮೇಲೆ ವ್ಯವಹಾರ ನಡೆಸುತ್ತಿದ್ದರು. ಈ ಕಂಪೆನಿಯು ಮೂಲಕವೇ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.;
ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ತನಿಖಾಧಿಕಾರಿಗಳು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂಬ ರನ್ಯಾ ರಾವ್ ಹೇಳಿಕೆ ತಿರಸ್ಕರಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ರನ್ಯಾ ರಾವ್ ಅಂತಾರಾಷ್ಟ್ರೀಯ ಸಂಘಟಿತ ಚಿನ್ನ ಕಳ್ಳಸಾಗಣೆ ಜಾಲದೊಂದಿಗೆ ನಂಟು ಇರಿಸಿಕೊಂಡಿದ್ದಕ್ಕೆ ಪುರಾವೆಗಳಿವೆ ಎಂದು ಹೇಳಿದೆ.
2023 ರಲ್ಲಿ ರನ್ಯಾ ರಾವ್ ಮತ್ತು ತೆಲುಗಿನ ನಟ ತರುಣ್ ರಾಜ್ ಕೊಂಡೂರು ದುಬೈನಲ್ಲಿ ವೀರಾ ಡೈಮಂಡ್ಸ್ ಟ್ರೇಡಿಂಗ್ ಕಂಪನಿ ಸ್ಥಾಪಿಸಿದ್ದರು. ಶೇ 50-50 ಷೇರು ಒಪ್ಪಂದದ ಮೇಲೆ ವ್ಯವಹಾರ ನಡೆಸುತ್ತಿದ್ದರು. ಈ ಕಂಪೆನಿಯು ಮೂಲಕವೇ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.
ಪ್ರಕರಣದ ಎರಡನೇ ಆರೋಪಿಯಾಗಿರುವ ತರುಣ್ ರಾಜ್ ಕೊಂಡೂರು ಇಡೀ ಸಂಸ್ಥೆಯ ದೈನಂದಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. ರನ್ಯಾ ರಾವ್ ವಿದೇಶಿ ಮಾರುಕಟ್ಟೆಗಳ ಮೂಲಕ ಚಿನ್ನದ ವ್ಯಾಪಾರ ಮುನ್ನಡೆಸಲು ತಮ್ಮ ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬ್ಯಾಂಕಾಕ್ , ಜಿನೀವಾದಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣೆಯನ್ನು ಕೇಂದ್ರೀಕರಿಸಿದ್ದರು. ದೋಹಾ ಹಾಗೂ ಜಿನೀವಾ ಮೂಲದ ಪೂರೈಕೆದಾರರಿಂದ ಚಿನ್ನದ ಗಟ್ಟಿಗಳನ್ನು ಖರೀದಿಸಿ, ದುಬೈ ಮೂಲದ ಬ್ಯಾಂಕ್ ಖಾತೆಗೆ ಹಣ ಪಾವತಿಸುತ್ತಿದ್ದರು ಎಂದು ತನಿಖೆಯಿಂದ ಬಯಲಾಗಿದೆ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ವೀರಾ ಡೈಮಂಡ್ಸ್‌ನಲ್ಲಿ ರನ್ಯಾರಾವ್ ಹೂಡಿಕೆ
ರನ್ಯಾ ರಾವ್ ತಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಮೂಲಕ ವೀರಾ ಡೈಮಂಡ್ಸ್‌ನಲ್ಲಿ 8-10 ಲಕ್ಷ ರೂ. ಹೂಡಿಕೆ ಮಾಡಿ, ವೀಸಾ ರಹಿತ ಪ್ರಯಾಣ ಮತ್ತು ನಿಯಮಿತ ಚಿನ್ನದ ಸಾಗಣೆಗೆ ಅವಕಾಶ ಒದಗಿಸುವ ದುಬೈ ನಿವಾಸ್ ಕಾರ್ಡ್ ಪಡೆದಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ವೀರಾ ಡೈಮಂಡ್ಸ್ ಕಂಪನಿಯು ದುಬೈನಲ್ಲಿನ ಚಿನ್ನದ ಮೇಲಿನ ಶೂನ್ಯ ಆಮದು ಸುಂಕದ ಲಾಭ ಬಳಸಿಕೊಂಡು ಭಾರತಕ್ಕೆ ಚಿನ್ನ ಸಾಗಿಸುತ್ತಿತ್ತು ಎಂದು ಹೇಳಲಾಗಿದೆ.
ದುಬೈ ಕಸ್ಟಮ್ಸ್‌ನಿಂದ ಸುಲಭವಾಗಿ ಪಾರಾಗಲು ತರುಣ್ ರಾಜ್ ಕೊಂಡೂರು ತಮ್ಮ ಅಮೆರಿಕ ಪೌರತ್ವವನ್ನು ಬಳಸಿದ್ದರು. ಅಲ್ಲದೇ ಕೊಂಡೂರು ತಮ್ಮ ವಿಮಾನ ಪ್ರಯಾಣ ಮತ್ತು ವಸತಿ ಸೌಕರ್ಯಗಳಿಗೆ ಪಾವತಿಸಲು ಹೆಚ್ಚಾಗಿ ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್ ಬಳಸುತ್ತಿದ್ದರು ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ದುಬೈ ಮೂಲದ ವ್ಯಕ್ತಿಗೂ ವಂಚನೆ
ವೀರಾ ಡೈಮಂಡ್ಸ್ ಕಂಪನಿಯು ಚಿನ್ನ ನೀಡದೇ ದುಬೈ ಮಾರಾಟಗಾರನಿಗೆ 1.7 ಕೋಟಿ ರೂ. ವಂಚಿಸಿದ್ದ ಪ್ರಕರಣವನ್ನೂ ಡಿಆರ್‌ಐ ಪತ್ತೆ ಮಾಡಿದೆ. ಈ ರೀತಿ ವಂಚಿಸಿದ ಹಣವನ್ನು ಭಾರತದಲ್ಲಿ ಹವಾಲಾ ವಹಿವಾಟಿಗೆ ಬಳಸಿತ್ತೆಂಬ ಸಂಗತಿ ಬಯಲಾಗಿದೆ.
ಕಳೆದ ವರ್ಷ ರನ್ಯಾ ರಾವ್ ಕನಿಷ್ಠ 27 ಬಾರಿ ವಿದೇಶ ಪ್ರಯಾಣ ಮಾಡಿದ್ದರು. ಪ್ರತಿ ಬಾರಿಯೂ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಗೆ ಒಳಗಾಗದೇ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿರುವ ರನ್ಯಾರಾವ್ ಮನೆಯಲ್ಲಿನಡೆದ ಶೋಧದ ವೇಳೆ 2024 ನ.13 ಹಾಗೂ ಡಿ. 20 ರಂದು ದುಬೈ ಕಸ್ಟಮ್ಸ್ ಅಧಿಕಾರಿಗಳು ನೀಡಿದ್ದ ಘೋಷಣಾ (ಡಿಕ್ಲೆರೇಷನ್) ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವೀರಾ ಡೈಮಂಡ್ಸ್ ಕಂಪನಿಯು ಜಿನೀವಾಕ್ಕೆ ಚಿನ್ನ ಸಾಗಿಸುತ್ತಿತ್ತು ಎಂದು ದಾಖಲೆಗಳಲ್ಲಿದ್ದರೂ ಚಿನ್ನ ಮಾತ್ರ ಜಿನೀವಾಕ್ಕೆ ತಲುಪಿರಲಿಲ್ಲ ಎಂಬುದು ತನಿಖೆ ಬಹಿರಂಗಪಡಿಸಿದೆ.
ಡಿಆರ್ಐ ವಿಚಾರಣೆ ವೇಳೆ ರನ್ಯಾ ರಾವ್ VoIP ಕರೆಗಳ ಮೂಲಕ ಕೆಲ ಅಪರಿಚಿತ ವ್ಯಕ್ತಿಗಳೊಂದಿಗೆ ಚಿನ್ನ ಸಾಗಣೆ ಕುರಿತು ಸಂಭಾಷಣೆ ನಡೆಸಿದ್ದರು. ಅದರಂತೆ YouTube ವಿಡಿಯೋ ಮೂಲಕ ಕಳ್ಳಸಾಗಣೆ ಮಾಡುವ ಕುರಿತು ಕಲಿತಿದ್ದಾಗಿ ಬಾಯ್ಬಿಟ್ಟಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಚಿನ್ನವನ್ನು ರನ್ಯಾ ರಾವ್ ತನಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಿದ ಬಳಿಕ ಪ್ರಕರಣ ಇನ್ನಷ್ಟು ಕುತೂಹಲ ಘಟ್ಟ ತಲುಪಿದೆ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ಪತಿಯ ಕ್ರೆಡಿಟ್ ಕಾರ್ಡ್ ಬಳಕೆ
ರನ್ಯಾ ರಾವ್ ತಮ್ಮ ಪತಿ ಜತಿನ್ ಹುಕ್ಕೇರಿ ಅವರ ಕ್ರೆಡಿಟ್ ಕಾರ್ಡ್ ಬಳಸಿ ಬೆಂಗಳೂರಿನಿಂದ ದುಬೈಗೆ ರೌಂಡ್-ಟ್ರಿಪ್ ಟಿಕೆಟ್ ಬುಕ್ ಮಾಡಿರುವುದಕ್ಕೆ ದಾಖಲೆಗಳು ದೊರೆತಿವೆ. ಇದು ಜತಿನ್ ಹುಕ್ಕೇರಿ ನಂಟಿನ ಕುರಿತು ಅನುಮಾನ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜತಿನ್ ಹುಕ್ಕೇರಿಗೆ ಸೇರಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಬಂಧನಕ್ಕೆ ತಡೆ ತಂದಿದ್ದರಿಂದ ಹೆಚ್ಚಿನ ವಿಚಾರಣೆ ಸಾಧ್ಯವಾಗಿಲ್ಲ ಎಂದು ಡಿಆರ್ಐ ಅಧಿಕಾರಿಗಳು ಹೇಳಿದ್ದಾರೆ.
ಶೀಘ್ರ ವರದಿ ಸಲ್ಲಿಕೆ
ರನ್ಯಾರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಐಜಿಪಿ ರಾಮಚಂದ್ರರಾವ್ ನಂಟಿನ ಕುರಿತು ತನಿಖೆ ನಡೆಸಿರುವ ಗೌರವ್ ಗುಪ್ತಾ ನೇತೃತ್ವದ ಸಮಿತಿ ವರದಿ ಸಿದ್ದಪಡಿಸಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಿದೆ.
ರನ್ಯಾರಾವ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಿಂದ ಪಾರಾಗಲು ಪ್ರೋಟೊಕಾಲ್ ದುರ್ಬಳಕೆ ಮಾಡಿಕೊಂಡಿದ್ದರು. ಅಲ್ಲದೇ ತಮ್ಮ ಮಲತಂದೆಯಾದ ಐಜಿಪಿ ರಾಮಚಂದ್ರರಾವ್ ಅವರ ಹೆಸರು ಬಳಸಿಕೊಂಡಿದ್ದರು ಎಂಬ ಆರೋಪ ಕುರಿತಂತೆ ಸಮಿತಿ ತನಿಖೆ ನಡೆಸಿದರು.
ರನ್ಯಾಗೆ ಭದ್ರತೆ ಒದಗಿಸಿದ್ದ ಪೊಲೀಸರು, ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ವರದಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.