ಲೈಂಗಿಕ ಹಗರಣ ಆರೋಪಿ ಪ್ರಜ್ವಲ್‌ ರೇವಣ್ಣ ಮಂಗಳವಾರ ಎಸ್‌ಐಟಿಗೆ ಶರಣು?

Update: 2024-05-06 15:05 GMT

ದೇಶ ಬಿಟ್ಟು ಪರಾರಿಯಾಗಿರುವ ಪೆನ್‌ಡ್ರೈವ್‌ ಲೈಂಗಿಕ ಹಗರಣದ ಆರೋಪಿ, ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಮಂಗಳವಾರ (ಮೇ 7 ) ಕರ್ನಾಟಕಕ್ಕೆ ಮರಳಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮುಂದೆ ಶರಣಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆ ಬಳಿಕ (ಏಪ್ರಿಲ್‌ 26) ಭಾರತ ಬಿಟ್ಟು ಜರ್ಮನಿಗೆ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಪರಾರಿಯಾಗಿದ್ದರು. ಈಗ ಎರಡನೇ ಹಂತದ ಚುನಾವಣೆ ಮೇ ೭ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ಬಳಿಕ ಅಂದರೆ ಅಂದು ಸಂಜೆ ಭಾರತಕ್ಕೆ ಮರಳುವ ಸಾಧ್ಯತೆ ಇದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಭಾನುವಾರವೇ ಬಂದು ಪೊಲೀಸರಿಗೆ ಶರಣಾಗುವ ಉದ್ದೇಶವಿದ್ದರೂ, ಅದರಿಂದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪರ ಮತ್ತಷ್ಟು ಅಲೆ ಸೃಷ್ಟಿಸುವ ಸಾಧ್ಯತೆಯನ್ನು ಮನಗಂಡ ಬಳಿಕ ತನ್ನ ಕುಟುಂಬದ ಸೂಚನೆ ಮೇರೆಗೆ ಮಂಗಳವಾರ ಬಂದು ಶರಣಾಗಲು ನಿರ್ಧರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಲೋಕಸಭಾ ಚುನಾವಣೆ ವೇಳೆ ಬಹಿರಂಗವಾಗಿರುವ ಪ್ರಜ್ವಲ್‍ ಲೈಂಗಿಕ ದೌರ್ಜನ್ಯ ಹಗರಣ ಬಿಜೆಪಿ -ಜೆಡಿಎಸ್‌ ಮೈತ್ರಿ ಕೂಟಕ್ಕೆ ಸಾಕಷ್ಟು ಹಿನ್ನಡೆ ಉಂಟು ಮಾಡಿದೆ. ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಏ.26ರಂದು ಮಧ್ಯರಾತ್ರಿಯೇ ಜರ್ಮನಿಗೆ ಪರಾರಿಯಾಗಿದ್ದರು. ಅವರು ಮೇ 15ಕ್ಕೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್ ಬರಲು ವಿಮಾನ ಟಿಕೆಟ್ ನಿಗದಿ ಮಾಡಿದ್ದರು. ಬಳಿಕ ಎಸ್‍ಐಟಿ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಮೇ 3ಕ್ಕೆ ಬೆಂಗಳೂರಿಗೆ ಬರಲು ಮತ್ತೊಂದು ಟಿಕೆಟ್ ಬುಕ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಎಚ್‌ಡಿ ರೇವಣ್ಣ ಬಂಧನದ ಬಳಿಕ ಅಂದರೆ ಮರುದಿನ ಮೇ 6ರಂದು ಬೆಂಗಳೂರಿಗೆ ಬರುವ ಬಗ್ಗೆ ನಿರ್ಧಾರವಾಗಿತ್ತು. ಹಾಗಾಗಿ ಪ್ರಜ್ವಲ್ ಬಂಧನಕ್ಕಾಗಿ ಬೆಂಗಳೂರು, ಮಂಗಳೂರು, ಗೋವಾ ಅಥವಾ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿಗಳು ಕಾಯುವಂತಾಗಿತ್ತು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದದ ಬಳಿ ಕಾದಿರುವ ಪೊಲೀಸರು ಬೆಂಗಳೂರಿಗೆ ಬರುವ ವಿಮಾನಗಳಲ್ಲಿನ ಎಲ್ಲಾ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿದ್ದಾರೆ. ಆದರೆ ಅಂತಹ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

ದುಬೈ, ಮಸ್ಕತ್, ಫ್ರಾಂಕ್‍ಫರ್ಟ್ ಸೇರಿ ಹಲವು ದೇಶಗಳಿಂದ ಬರುವ ಪ್ರಯಾಣಿಕರ ವಿವರವನ್ನೂ ಸಂಗ್ರಹಿಸಿ ಪ್ರಜ್ವಲ್‌ ಆಗಮನದ ಬಗ್ಗೆ ಎಸ್‌ಐಟಿ ಮಾಹಿತಿ ಸಂಗ್ರಹಿಸುತ್ತಿದೆ. 

Tags:    

Similar News