ಅಕ್ರಮ ದಾಸ್ತಾನು | ಅಂಗನವಾಡಿ ಕಾರ್ಯಕರ್ತೆಯರ ಬಂಧನ; ಮೇಲ್ವಿಚಾರಕರ ಪಾತ್ರವಿದೆಯೇ?
ಅಕ್ರಮವಾಗಿ ದಾಸ್ತಾನು ಮಾಡಿರಬೇಕಾದರೆ ಮೇಲ್ವಿಚಾರಕರು ಏನು ಮಾಡುತ್ತಿದ್ದರು. ನಿಯಮಿತವಾಗಿ ಏಕೆ ಪರಿಶೀಲನೆ ಮಾಡಿಲ್ಲ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಪ್ರಶ್ನಿಸಿದ್ದಾರೆ.;
ಮಕ್ಕಳು ಹಾಗೂ ಗರ್ಭಿಣಿ-ಬಾಣಂತಿಯರಿಗೆ ಪೂರೈಸುವ ಪೌಷ್ಟಿಕ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ18 ಮಂದಿ ಅಂಗನವಾಡಿ ಕಾರ್ಯಕರ್ತೆಯರನ್ನು ಬಂಧಿಸಲಾಗಿದೆ. ಆದರೆ, ಅಧಿಕಾರಿಗಳ ಪಾತ್ರವಿಲ್ಲದೇ ಅಕ್ರಮ ನಡೆದಿದ್ದೇಗೆ ಎಂದು ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಪ್ರಶ್ನಿಸಿದ್ದಾರೆ.
ಮಕ್ಕಳಿಗೆ ಪೂರೈಸುವ ಪೌಷ್ಟಿಕ ಆಹಾರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯದಲ್ಲಿ ಪ್ರತಿ 25 ಅಂಗನವಾಡಿಗಳಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಬಿಲ್ ಮಾಡುವುದು ಅವರ ಕರ್ತವ್ಯ. ಹೀಗಿರುವಾಗ ಇಷ್ಟೊಂದು ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರಬೇಕಾದರೆ ಮೇಲ್ವಿಚಾರಕರು, ಸಿಡಿಪಿಒ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು. ನಿಯಮಿತವಾಗಿ ಏಕೆ ಪರಿಶೀಲನೆ ಮಾಡಿಲ್ಲ ಎಂದಿದ್ದಾರೆ.
ಪ್ರಕರಣದಲ್ಲಿ ಅಧಿಕಾರಿಗಳು, ಹೊರಗಿನವರು ಶಾಮೀಲಾಗಿರುವ ಸಾಧ್ಯತೆ ಇರಬಹುದು. ಏಕಾಏಕಿ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಿಸುವುದು ಸರಿಯಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತೇವೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೆಲವು ಕಡೆಗಳಲ್ಲಿ ಬೇಕಾಬಿಟ್ಟಿಯಾಗಿ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಇದು ಸಿಡಿಪಿಒ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಗಮನದಲ್ಲಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಾಹ್ಯ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದರೆ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನಗಳಿವೆ. ಇನ್ನು ಹುಬ್ಬಳ್ಳಿಯಲ್ಲಿ ಸಿಐಟಿಯು ಸಂಯೋಜಿತ ಸಂಘಟನೆಯ ಅಂಗನವಾಡಿ ಕಾರ್ಯಕರ್ತರ ಸಂಘಟನೆ ಇಲ್ಲ. ಆದಾಗ್ಯೂ ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದರು.
ಘಟನೆ ಹಿನ್ನೆಲೆ ಏನು?
ಫೆ.15 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಹುಬ್ಬಳ್ಳಿಯ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಪೌಷ್ಟಿಕ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಪತ್ತೆಯಾಗಿತ್ತು.
ಈ ಸಂಬಂಧ ದಾಖಲಾದ ದೂರಿನ ಆಧಾರದ ಮೇಲೆ ಕಸಬಾಪೇಟೆ ಪೊಲೀಸರು 18 ಅಂಗನವಾಡಿಗಳ ಕಾರ್ಯಕರ್ತರು ಸೇರಿ ಒಟ್ಟು 26 ಜನರನ್ನು ಬಂಧಿಸಿದ್ದರು. ಗೋಧಿ ರವೆ, ಹಾಲಿನ ಪುಡಿ, ಬೆಲ್ಲ, ಹೆಸರುಕಾಳು ಮತ್ತು ಅಕ್ಕಿ ಸೇರಿದಂತೆ ನಾಲ್ಕು ಲಕ್ಷ ಮೌಲ್ಯದ ಅಹಾರದ ಪಾಕೆಟ್‌ಗಳನ್ನು ಜಪ್ತಿ ಮಾಡಲಾಗಿತ್ತು.
ಸ್ಥಳೀಯ ಕಾಂಗ್ರೆಸ್ ನಾಯಕಿ ಶಾಮೀಲು
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ ಅವರು ಸಣ್ಣ ಮಕ್ಕಳಿಗೆ ನೀಡುವ ಹಾಲಿನ ಪೌಡರ್, ಗೋಧಿ, ಬೇಳೆ, ಬೆಲ್ಲ ಸೇರಿದಂತೆ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿ ಸಿಕ್ಕಿಬಿದ್ದಿದ್ದರು. ಪತಿ ಫಾರೂಕ್ ಜೊತೆ ಸೇರಿ ಗೋಡೌನ್ಲ್ಲಿ ಅಕ್ರಮವಾಗಿ ಆಹಾರ ಪದಾರ್ಥದ ಪಾಕೆಟ್‌ಗಳನ್ನು ಸಂಗ್ರಹಿಸಿಟ್ಟಿದ್ದರು.
ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಉಪ ವಿಭಾಗ ಅಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ಗಬ್ಬೂರಿನ ಪ್ಲಾಸ್ಟಿಕ್ ಸಂಗ್ರಹ ಮಾಡುವ ಹಳೇ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಗೋಡೌನ್ನಲ್ಲಿ ರಾಶಿ ರಾಶಿ ಮೂಟೆಗಳು ಸಿಕ್ಕಿವೆ.
ಆರೋಪಿ ಕಿಲ್ಲೇದಾರ ಅವರು ಅಂಗನವಾಡಿ ಕಾರ್ಯಕರ್ತೆಯರ ಸಂಘ ಕಟ್ಟಿಕೊಂಡು ಓಡಾಡುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ದೂರಿನ ಮೇಲೆ ಬೈತೂಲ್ಲಾ ಕಿಲ್ಲೇದಾರ, ಪತಿ ಫಾರೂಕ್ ಹಾಗೂ ಕಾರು ಚಾಲಕ ಮತ್ತು ಕಾರು ಮಾಲೀಕರ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬೈತೂಲ್ಲಾ ಕಿಲ್ಲೇದಾರ ನಾಪತ್ತೆಯಾಗಿದ್ದಾರೆ.