ಹಾರ್ವರ್ಡ್ ವಿವಿಯ ವಿದೇಶಿ ವಿದ್ಯಾರ್ಥಿಗಳ ದಾಖಲು ಅಧಿಕಾರ ರದ್ದು ಮಾಡಿದ ಟ್ರಂಪ್: ಭಾರತೀಯ ವಿದ್ಯಾರ್ಥಿಗಳಿಗೆ ಸಮಸ್ಯೆ ಇದೆಯೇ? ಇಲ್ಲಿದೆ ಎಲ್ಲ ಮಾಹಿತಿ
ಹಾರ್ವರ್ಡ್ ವಿವಿಯಲ್ಲಿ, ಯಹೂದಿ ವಿದ್ಯಾರ್ಥಿಗಳಿಗೆ ಅಸುರಕ್ಷಿತ ವಾತಾವರಣ, ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳನ್ನು ಉತ್ತೇಜನ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ವಾತಾವರಣ ಇದೆ ಎಂದು ಆರೋಪಿಸಲಾಗಿದೆ.;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಗುರುವಾರ (ಮೇ 22) ಹಾರ್ವರ್ಡ್ ವಿಶ್ವವಿದ್ಯಾಲಯದ ವಿರುದ್ಧ ಬಲವಾದ ಕ್ರಮವೊಂದನ್ನು ಕೈಗೊಂಡಿದೆ. ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ವಿಶ್ವವಿದ್ಯಾಲಯದ ಅಧಿಕಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದು, ಐತಿಹಾಸಿಕ ಕ್ರಮವೆಂದು ಹೇಳಲಾಗುತ್ತಿದೆ. ಈ ಏಕಮುಖಿ ಕ್ರಮವು ಅಲ್ಲಿ ನಾನಾ ಕೋರ್ಸ್ಗಳಲ್ಲಿ ಕಲಿಯುತ್ತಿರುವ ಸುಮಾರು 6,800 ವಿದೇಶಿ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಿದೆ. ಈ ಗುಂಪಿನಲ್ಲಿ ಸುಮಾರು 788 ಭಾರತೀಯ ವಿದ್ಯಾರ್ಥಿಗಳು ಸೇರಿದ್ದಾರೆ.
ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೊಯೆಮ್ ಅವರ ನೇತೃತ್ವದಲ್ಲಿ ಟ್ರಂಪ್ ಆಡಳಿತವು ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮ (SEVP) ಪ್ರಮಾಣೀಕರಣವನ್ನು ರದ್ದುಗೊಳಿಸಿದೆ. ಹಾರ್ವರ್ಡ್ ವಿಶ್ವವಿದ್ಯಾಲಯವು ವಿದೇಶಿ ವಿದ್ಯಾರ್ಥಿಗಳ ದಾಖಲೆಗಳನ್ನು ಒದಗಿಸಲು ಒಪ್ಪದಿರುವುದು ಈ ಕಠಿಣ ಕ್ರಮಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ. ಹಾರ್ವರ್ಡ್ ವಿವಿಯಲ್ಲಿ ಯಹೂದಿ ವಿದ್ಯಾರ್ಥಿಗಳಿಗೆ ಅಸುರಕ್ಷಿತ ವಾತಾವರಣ, ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳಿಗೆ ಉತ್ತೇಜನ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ವಾತಾವರಣ ಇದೆ ಎಂದು ನೋಯೆಮ್ ಆರೋಪಿಸಿದ್ದಾರೆ.
ಅಂದ ಹಾಗೆ, ವಿವಾದವು ಏಪ್ರಿಲ್‌ನಿಂದ ಆರಂಭವಾಗಿತ್ತು. ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳನ್ನು ನಿಯಂತ್ರಿಸಲು ಮತ್ತು ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯ ನೀತಿಗಳನ್ನು ತೆಗೆದುಹಾಕುವಂತೆ ಸರ್ಕಾರದ ಆದೇಶಿಸಿರುವುದನ್ನು ಹಾರ್ವರ್ಡ್ ವಿವಿ ತಿರಸ್ಕರಿಸಿದ ಬಳಿಕ ಸಂಘರ್ಷ ಹೆಚ್ಚಾಗಿತ್ತು. ಇದೀಗ ಸರ್ಕಾರ ಒಂದು ಹೆಜ್ಜೆ ಮುಂದಕ್ಕೆ ಇಟ್ಟು ವಿವಿಗೆ ಇದ್ದ ಅಧಿಕಾರವನ್ನೇ ರದ್ದು ಮಾಡಿದೆ. 2025-26ರ ಶೈಕ್ಷಣಿಕ ವರ್ಷದಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ವಿವಿಯ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ.
ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಇದೆಯೇ?
ಹಾರ್ವರ್ಡ್‌ನ ದಾಖಲೆಗಳ ಪ್ರಕಾರ, ಪ್ರತಿವರ್ಷ 500ರಿಂದ 800 ಭಾರತೀಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ವಿವಿ ಅಧೀನದ ವಿವಿಧ ಶಾಲೆಗಳು ಮತ್ತು ವಿಭಾಗಗಳಿಗೆ ದಾಖಲಾಗುತ್ತಾರೆ. ಪ್ರಸ್ತುತ, 788 ಭಾರತೀಯ ವಿದ್ಯಾರ್ಥಿಗಳು ಮುಖ್ಯವಾಗಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಟ್ರಂಪ್ ಸರ್ಕಾರ ನಿಷ್ಠುರ ಕ್ರಮದಿಂದಾಗಿ ಪ್ರಸ್ತುತ ಇರುವ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಅವರೆಲ್ಲರೂ ತಮ್ಮ ವೀಸಾ ಮಾನ್ಯತೆಯನ್ನು ಕಾಯ್ದುಕೊಳ್ಳಲು SEVP-ಪ್ರಮಾಣೀಕೃತ ಇನ್ನೊಂದು ಶಿಕ್ಷಣ ಸಂಸ್ಥೆಗೆ ಹೋಗಬೇಕಾಗುತ್ತದೆ. ಇಲ್ಲದೇ ಹೋದರೆ ವೀಸಾ ರದ್ದತಿ ಮತ್ತು ಸಂಭಾವ್ಯ ಗಡೀಪಾರಿನ ಅಪಾಯ ಎದುರಿಸಲಿದ್ದಾರೆ.
ಡಾಕ್ಟರೇಟ್ ಮತ್ತು ಬಹು-ವರ್ಷದ ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಮಧ್ಯದಲ್ಲಿಯೇ ಬೇರೆ ಶಿಕ್ಷಣ ಸಂಸ್ಥೆಗಳಿಗೆ ವರ್ಗಾವಣೆಯಾಗುವುದು ಶೈಕ್ಷಣಿಕವಾಗಿ ದೊಡ್ಡ ಅಡಚಣೆ ಎಂದು ಹೇಳಲಾಗಿದೆ.
ಕಾನೂನು ಸಾಧ್ಯತೆಗಳು ಮತ್ತು ಹಾರ್ವರ್ಡ್ ಪ್ರತಿಕ್ರಿಯೆ
"ಗೃಹ ಭದ್ರತಾ ಇಲಾಖೆಗೆ ಎಸ್ಇವಿಪಿ ಅಡಿಯಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುವ ಅಥವಾ ರದ್ದು ಮಾಡುವ ಪರಮಾಧಿಕಾರವಿದೆ. ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದು ವಿಶ್ವವಿದ್ಯಾಲಯಗಳ ಹಕ್ಕಲ್ಲ, ಅದೊಂದು ಸವಲತ್ತು," ಎಂದು ನೊಯೆಮ್ ಸರ್ಕಾರದ ನಿರ್ಧಾರವನ್ನು ಮಗದೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ತಜ್ಞರ ಪ್ರಕಾರ, ಹಾರ್ವರ್ಡ್ ವಿರುದ್ಧದ ಈ ಕ್ರಮವು ಐತಿಹಾಸಿಕವಾಗಿದ್ದು, ವಿಶ್ವವಿದ್ಯಾಲಯವು ಗಂಭೀರ ಆಡಳಿತಾತ್ಮಕ ಲೋಪಗಳನ್ನು ಆಗಾಗ ಎದುರಿಸಿತ್ತು.
ಟ್ರಂಪ್ ಸರ್ಕಾರದ ಕ್ರಮವನ್ನು ಹಾರ್ವರ್ಡ್ ಒಪ್ಪಿಲ್ಲ. ಕಾನೂನುಬಾಹಿರ ಮತ್ತು ತನ್ನ ಶೈಕ್ಷಣಿಕ ಉದ್ದೇಶಕ್ಕೆ ಧಕ್ಕೆ ತರುವ ಪ್ರಯತ್ನ ಎಂದಿದೆ. ಸರ್ಕಾರದ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲು ಎರುವುದಾಗಿ ವಿವಿ ಹೇಳಿದ್ದು, ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದೆ. ಏತನ್ಮಧ್ಯೆ, ಟ್ರಂಪ್ ಸರ್ಕಾರ 72 ಗಂಟೆಗಳ ಒಳಗೆ ವಿದ್ಯಾರ್ಥಿಗಳ ದಾಖಲೆಗಳು ಮತ್ತು ಪ್ರತಿಭಟನೆಯ ಆಡಿಯೋ-ವಿಡಿಯೋ ರೆಕಾರ್ಡಿಂಗ್‌ಗಳನ್ನು ಒದಗಿಸುವಂತೆ ಸೂಚಿಸಿದೆ.
ಹಾರ್ವರ್ಡ್ ವಿವಿಯು ತನ್ನ ಮೇಲಿನ ಕ್ರಮವನ್ನು ಪ್ರಶ್ನಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಖಾತರಿ. ಒಂದು ವಿಚಾರಣೆಗೆ ಒಪ್ಪಿ ಆದೇಶಕ್ಕೆ ತಡೆ ನೀಡಿದರೆ ಸ್ವಲ್ಪ ದಿನ ವಿದ್ಯಾರ್ಥಿಗಳ ಆತಂಕ ದೂರವಾಗಲಿದೆ. ಆದರೆ, ಕೋರ್ಟ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ೬೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ನಿಂತಿದೆ.
ವಿದ್ಯಾರ್ಥಿಗಳಿಗೆ ಏನಾಗುತ್ತದೆ?
2025ರ ಶೈಕ್ಷಣಿಕ ವರ್ಷದಲ್ಲಿ ಕಲಿಕೆ ಆರಂಭಿಸಿರುವ ವಿದ್ಯಾರ್ಥಿಗಳಿಗೆ ಈ ಸೆಮಿಸ್ಟರ್‌ನಲ್ಲಿ ತಮ್ಮ ಪದವಿ ಪೂರ್ಣಗೊಳಿಸಲು ಅನುಮತಿ ಸಿಗಲಿದೆ. ಆದರೆ, ತಮ್ಮ ಪದವಿ ಇನ್ನೂ ಪೂರ್ಣಗೊಳಿಸದ ವಿದೇಶಿ ವಿದ್ಯಾರ್ಥಿಗಳು ಇನ್ನೊಂದು ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾಗಬೇಕಾಗುತ್ತದೆ. ಇಲ್ಲದಿದ್ದರೆ ಅವರು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಉಳಿಯಲು ಅನುಮತಿ ಕಳೆದುಕೊಳ್ಳುತ್ತಾರೆ. 2025ರ ಮುಂದಿನ ಸೆಮಿಸ್ಟರ್ ವೇಳೆ ಹಾರ್ವರ್ಡ್‌ಗೆ ಹೋಗಲು ಬಯಸಿದ್ದ ವಿದ್ಯಾರ್ಥಿಗಳಿಗೂ ಈ ನಿರ್ಧಾರದಿಂದ ತೊಂದರೆಯಾಗಲಿದೆ, ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಅಥವಾ ಕೋರ್ಟ್ ಮಧ್ಯಪ್ರವೇಶಿಸದಿದ್ದರೆ ಆಕಾಂಕ್ಷಿಗಳು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಎದುರಿಸಲಿದ್ದಾರೆ.
ಟ್ರಂಪ್ ನಿರ್ಧಾರದಿಂದ ವಿದ್ಯಾರ್ಥಿಗಳು ಆತಂಕದಲ್ಲಿ ಇರುವುದು ಅವರ ಹೇಳಿಕೆಗಳ ಮೂಲಕ ಬಹಿರಂಗಗೊಂಡಿದೆ. ವಿದ್ಯಾರ್ಥಿಯೊಬ್ಬ ಸುದ್ದಿ ಸಂಸ್ಥೆ ಎಎಫ್ಪಿ ಜತೆ ಮಾತನಾಡಿ, "ಎಲ್ಲರೂ ಸ್ವಲ್ಪ ಭಯಭೀತರಾಗಿದ್ದಾರೆ. ಇದು ಎಲ್ಲಿಯ ತನಕ ಮುಂದುವರಿಯುತ್ತದೆ ಎಂಬುದು ಗೊತ್ತಿಲ್ಲ,'' ಎಂದು ಹೇಳಿದ್ದಾರೆ. ಇನ್ನೊಬ್ಬ''ಇದು ಅನಿರೀಕ್ಷಿತ ಮತ್ತು ದುಃಖಕರ ವಿಚಾರ. ಈ ಸ್ಕೂಲ್ಗೆ ದಾಖಲಾಗಿರುವುದು ನನ್ನ ಜೀವನದ ಶ್ರೇಷ್ಠ ಸಾಧನೆ ," ಎಂದು ತಿಳಿಸಿದ್ದಾರೆ.
ಬೇರೆ ಶಿಕ್ಷಣ ಸಂಸ್ಥೆಗಳಿಗೂ ಅಪಾಯ
ನೊಯೆಮ್ ಅವರು, ಅಮೆರಿಕದಲ್ಲಿರುವ ಇತರ ಶಿಕ್ಷಣ ಸಂಸ್ಥೆಗಳ ಮೇಲೂ ಇದೇ ರೀತಿಯ ಕ್ರಮ ಕೈಗೊಳ್ಳುವುದಾಗಿ ಎಚ್ದರಿಕೆ ನೀಡಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯವನ್ನು ಸಂಭಾವ್ಯ ಗುರಿಯಾಗಿ ಉಲ್ಲೇಖಿಸಿದ್ದಾರೆ. ಈ ಕ್ರಮವು ಅಮೆರಿಕದ ಉನ್ನತ ಶಿಕ್ಷಣದ ಜಾಗತಿಕ ಖ್ಯಾತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ವಿದೇಶಿ ವಿದ್ಯಾರ್ಥಿಗಳು ಶಿಕ್ಷಣ ಶುಲ್ಕದಿಂದ ಗಣನೀಯ ಆದಾಯ ಪಡೆಯುತ್ತಾರೆ. ಮತ್ತು ಈಗಾಗಲೇ ಟ್ರಂಪ್ ಆಡಳಿತವು ಶತಕೋಟಿ ಡಾಲರ್‌ಗಳ ಸಂಶೋಧನಾ ಅನುದಾನವನ್ನು ಕಡಿತಗೊಳಿಸಿದೆ. ಈ ಆದಾಯವೂ ಇಲ್ಲದೇ ಹೋದರೆ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ.