TikTok ban : ಈಗ ಅಮೆರಿಕದಲ್ಲೂ ಟಿಕ್‌ಟಾಕ್ ನಿಷೇಧ
TikTok ban : ಚೀನಾ ಮೂಲದ ಟಿಕ್‌ಟಾಕ್ ಅನ್ನು ಭಾರತ 2020ರ ಜೂನ್ 29ರಂದು ನಿಷೇಧ ಮಾಡಿತ್ತು. ಅದಕ್ಕೆ ಮೊದಲು ಭಾರತದಲ್ಲೂ ಆ ಕಂಪನಿ ಲಕ್ಷಾಂತರ ಬಳಕೆದಾರರನ್ನು ಹೊಂದಿತ್ತು. ಆಂತರಿಕ ಭದ್ರತೆಯ ಹಿನ್ನೆಲೆಯಲ್ಲಿ ಭಾರತದಿಂದ ಅದನ್ನು ಹೊರಕ್ಕಟ್ಟಲಾಗಿತ್ತು.;
ಶಾರ್ಟ್ ವಿಡಿಯೊ ಪ್ಲಾಟ್‌ಫಾರ್‌ಮ್ ಟಿಕ್ ಟಾಕ್ ಅಮೆರಿಕದಲ್ಲಿ ನಿಷೇಧಗೊಂಡಿದೆ. ಹೊಸ ಕಾನೂನು ಭಾನುವಾರ ಜಾರಿಗೆ ಬಂದ ನಂತರ ಅಮೆರಿಕದ ಕೋಟ್ಯಂತರ ಚಂದಾದಾರರ ಮೊಬೈಲ್‌ನಿಂದ ಆಪ್ ಕಾಣೆಯಾಗಿದೆ. ಜನಪ್ರಿಯ ವೀಡಿಯೊ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ಕೂಡ ತೆಗೆದು ಹಾಕಲಾಗಿದೆ ಎಂದು ʼʼಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಚೀನಾ ಮೂಲದ ಟಿಕ್‌ಟಾಕ್ ಅನ್ನು ಭಾರತ 2020ರ ಜೂನ್ 29ರಂದು ನಿಷೇಧ ಮಾಡಿತ್ತು. ಅದಕ್ಕೆ ಮೊದಲು ಭಾರತದಲ್ಲೂ ಆ ಕಂಪನಿ ಲಕ್ಷಾಂತರ ಬಳಕೆದಾರರನ್ನು ಹೊಂದಿತ್ತು. ಆಂತರಿಕ ಭದ್ರತೆಯ ಹಿನ್ನೆಲೆಯಲ್ಲಿ ಭಾರತದಿಂದ ಅದನ್ನು ಹೊರಕ್ಕಟ್ಟಲಾಗಿತ್ತು.
ಅಮೆರಿಕದಲ್ಲಿ 170 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಷನ್ ಕಾರ್ಯಾಚರಣೆ ನಿಲ್ಲಿಸಿದ್ದು, ಅಪ್ಲಿಕೇಷನ್ ಓಪನ್ ಆಗದಿರುವ ಸ್ಕ್ರೀನ್ ಶಾಟ್ ಅನ್ನು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಟಿಕ್‌ಟಾಕ್ ನಿಷೇಧಿಸುವ ಕಾನೂನು ಜಾರಿಗೆ ತರಲಾಗಿದೆ ಎಂದು ಹೇಳುವ ಸಂದೇಶದ ಕಿರು- ವೀಡಿಯೊ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
"ಅಧ್ಯಕ್ಷ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಟಿಕ್‌ಟಾಕ್ ಮರುಸ್ಥಾಪನೆಗೆ ಪರಿಹಾರ ಒದಗಿಸುವ ಬಗ್ಗೆ ನಮ್ಮೊಂದಿಗೆ ಕೆಲಸ ಮಾಡುವುದಾಗಿ ಭರವಸೆ ಕೊಟ್ಟಿರುವುದು ನಮ್ಮ ಅದೃಷ್ಟ" ಎಂದು ಟಿಕ್‌ಟಾಕ್ ಸಂಸ್ಥೆ ಈ ವೇಳೆ ತಿಳಿಸಿದೆ.
ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿರುವ ಡೇಟಾವನ್ನು ತೆಗೆದುಕೊಳ್ಳುವುದಕ್ಕೆ ಸದ್ಯಕ್ಕೆ ಅವಕಾಶ ನೀಡಲಾಗಿದೆ. ವೆಬ್‌ಸೈಟ್‌ಗೆ ಹೋಗುವ ಲಿಂಕ್ ನೀಡಲಾಗಿದ್ದು, ಅಲ್ಲಿಂದ ತಮ್ಮ ಡೇಟಾಗಳನ್ನು ಡೌನ್‌ಲೋಡ್ ಮಾಡಬಹುದು. ಈ ಕೆಲಸಕ್ಕೆ ಆಕ್ಟಿವೇಟ್ ಮಾಡಲು ಹಲವು ದಿನಗಳು ತೆಗೆದುಕೊಳ್ಳಬಹುದು ಎಂದು ಟಿಕ್‌ಟಾಕ್ ಹೇಳಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಟಿಕ್‌ಟಾಕ್ ತನ್ನ ಸೇವೆ "ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ" ಎಂದು ಬಳಕೆದಾರರಿಗೆ ಸಂದೇಶದಲ್ಲಿ ತಿಳಿಸಿದೆ. ಅಮೆರಿಕದಲ್ಲಿ ತನ್ನ ಸೇವೆಯನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಮಾರಾಟ ಮಾಡಲು ಕಾನೂನು ರಚನೆ
ಚೀನಾ ಮೂಲದ ಬೈಟ್ ಡ್ಯಾನ್ಸ್ ಟಿಕ್‌ಟಾಕ್‌ನ ಮಾತೃ ಸಂಸ್ಥೆಯಾಗಿದ್ದು ಅದನ್ನು ಅಮೆರಿಕ ಮೂಲದ ಅನುಮೋದಿತ ಕಂಪನಿಗೆ ಮಾರಾಟ ಮಾಡದಿದ್ದರೆ ರಾಷ್ಟ್ರೀಯ ಭದ್ರತೆ ಆಧಾರದ ಮೇಲೆ ಟಿಕ್ ಟಾಕ್ ನಿಷೇಧಿಸುವ ಕಾನೂನು ರಚಿಸಲಾಗಿದೆ. ಈ ಕಾನೂನು ಸಮರ್ಪಕ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿತ್ತು. ಕೋರ್ಟ್ ತೀರ್ಪು ನೀಡಿ ಒಂದೇ ದಿನದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ.
ಟ್ರಂಪ್ ಭರವಸೆ
ಹೊಸ ಒಪ್ಪಂದ ಮಾಡಿಕೊಳ್ಳುವುದಕ್ಕೆ ಟಿಕ್ ಟಾಕ್‌ಗೆ ಇನ್ನೂ 90 ದಿನಗಳ ಕಾಲಾವಕಾಶ ನೀಡುತ್ತೇನೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಕಳೆದ ವರ್ಷ ಯುಎಸ್ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಿದ ಕಾನೂನಿನ ಅಡಿಯಲ್ಲಿ, ಚೀನಾ ಮೂಲದ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಅನ್ನು ಅಮೆರಿಕದಲ್ಲಿ ಅನುಮೋದಿತ ಖರೀದಿದಾರರಿಗೆ ಮಾರಾಟ ಮಾಡಲು ಒಂಬತ್ತು ತಿಂಗಳ ಕಾಲಾವಕಾಶ ನೀಡಲಾಗಿತ್ತು. ವಿಕ್ರಯ ಪ್ರಗತಿಯಲ್ಲಿದ್ದರೆ ಹಾಲಿ ಅಧ್ಯಕ್ಷರಿಗೆ ವಿಸ್ತರಣೆ ನೀಡಲು ಕಾನೂನು ಅವಕಾಶ ಕೊಟ್ಟಿತ್ತು.