ಮಾರ್ಕ್ಸ್‌ವಾದಿ ಪಕ್ಷಕ್ಕೆ ಬಹುಮತ ನೀಡಿದ ಲಂಕಾದ ತಮಿಳರು; ಇದು ಸಾಧ್ಯವಾಗಿದ್ದು ಹೇಗೆ?

ತಮಿಳು ಹೃದಯಭಾಗವಾದ ಜಾಫ್ನಾದ ಚುನಾವಣಾ ಜಿಲ್ಲೆಯಲ್ಲಿ, ಎನ್‌ಪಿಪಿ ಆರು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ . ಇದು ಅವರ ಶತ್ರು ಹಾಗೂ ಮಿತ್ರ ಪಕ್ಷಗಳಿಗೇ ಅಚ್ಚರಿ. ಉಳಿದ ಮೂರು ಸ್ಥಾನಗಳು ಮೂರು ತಮಿಳು ಪಕ್ಷಗಳು ಮತ್ತು ಸ್ವತಂತ್ರರಿಗೆ ದಕ್ಕಿವೆ.;

Update: 2024-11-16 02:30 GMT
ದಿಸ್ಸಾನಾಯಕೆ

ಶ್ರೀಲಂಕಾದ ಸಂಸತ್‌ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ದಿಸ್ಸಾನಾಯಕೆ ಅವರ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ ) ಶುಕ್ರವಾರ (ನವೆಂಬರ್ 15) ಬಹುಮತ ಪಡೆದುಕೊಂಡು ಇತಿಹಾಸ ಬರೆದಿದೆ. ವಿಸರ್ಜಿತ ಸಂಸತ್‌ನಲ್ಲಿ ಕೇವಲ 3 ಸ್ಥಾನ ಹೊಂದಿದ್ದ ಎನ್‌ಪಿಪಿ ಇದೀಗ 150 ಕ್ಕೂ ಅಧಿಕ (159) ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಒಂದು ಕಡೆ ವಿಶೇಷ ಸಾಧನೆಯಾದರೆ ಕಾಲು ಶತಮಾನಗಳ ಕಾಲ ಪ್ರತ್ಯೇಕತಾವಾದಿ ಸಮರವನ್ನೇ ಕಂಡಿದ್ದ ತಮಿಳು ಭಾಷಿಕರು ಇರುವ ಪ್ರದೇಶದಲ್ಲೂ ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವು ಚಾರಿತ್ರಿಕ ಸಾಧನೆಯೇ ಸರಿ. ದಶಕಗಳ ಬಳಿಕ ಅತ್ಯಧಿಕ ಸ್ಥಾನ ಗೆದ್ದ ಪಕ್ಷ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.

ಅತ್ಯಂತ ಅನಿರೀಕ್ಷಿತ ಪ್ರದರ್ಶನ ತೋರಿದ , ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಮುಂದಾಳತ್ವದ ಎನ್‌ಪಿಪಿ ಪೂರ್ವ ಕರಾವಳಿಯ ಬಟ್ಟಿಕಲೋವಾ ಹೊರತುಪಡಿಸಿ ತಮಿಳು ಜನಸಂಖ್ಯೆ ಹೆಚ್ಚಿರುವ ಎಲ್ಲಾ 22 ಚುನಾವಣಾ ಜಿಲ್ಲೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವುದು ಅಚ್ಚರಿ.

ತಮಿಳು ಪ್ರಾಬಲ್ಯದ ಜಾಗದಲ್ಲಿ ಗೆಲುವು

ತಮಿಳು ಹೃದಯಭಾಗವಾದ ಜಾಫ್ನಾದ ಚುನಾವಣಾ ಜಿಲ್ಲೆಯಲ್ಲಿ, ಎನ್‌ಪಿಪಿ ಆರು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ . ಇದು ಅವರ ಶತ್ರು ಹಾಗೂ ಮಿತ್ರ ಪಕ್ಷಗಳಿಗೇ ಅಚ್ಚರಿ. ಉಳಿದ ಮೂರು ಸ್ಥಾನಗಳು ಮೂರು ತಮಿಳು ಪಕ್ಷಗಳು ಮತ್ತು ಸ್ವತಂತ್ರರಿಗೆ ದಕ್ಕಿವೆ.

ಭಾರತೀಯ ಮೂಲದ ಸಾವಿರಾರು ಚಹಾ ತೋಟದ ತಮಿಳು ಕಾರ್ಮಿಕರಿಗೆ ನೆಲೆಯಾಗಿರುವ ನುವಾರೈಲಿಯಾದಲ್ಲಿನ ಎಂಟು ಸ್ಥಾನಗಳಲ್ಲಿ ಐದು ಸ್ಥಾನಗಳು ಎನ್‌ಪಿಪಗೆ ದೊರಕಿದೆ. ಈ ಹಿಂದಿನ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ದಿಸ್ಸಾನಾಯಕೆ ಈ ಎಲ್ಲ ತಮಿಳು ಪ್ರದೇಶಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದರು. ಆದರೆ, ಕೆಲವೇ ತಿಂಗಳಲ್ಲಿ ವ್ಯತಿರಿಕ್ತ ಫಲಿತಾಂಶ ಬಂದಿದೆ.

ಇನ್ನು ಫೆಡರಲ್ ಪಾರ್ಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇಳಂಕೈ ʼತಮಿಳು ಅರಸು ಕಚ್ಚಿ (ಐಟಿಎಕೆ) ದ್ವೀಪ ರಾಷ್ಟ್ರದ ಉತ್ತರ ಮತ್ತು ಪೂರ್ವದ ತಮಿಳು ಪ್ರದೇಶಗಳಲ್ಲಿ ಒಟ್ಟು ಎಂಟು ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿದೆ.

ಪ್ರತ್ಯೇಕತಾವಾದಿಗಳ ಬೆಂಬಲ

ದೀರ್ಘಕಾಲದಿಂದ ಪರಾಜಿತ ಎಲ್‌ಟಿಟಿಐ ಬೆಂಬಲಿಸುತ್ತಿರುವ ಮತ್ತು ಪ್ರತ್ಯೇಕತಾವಾದಿ ಪರ ಧ್ವನಿಗಳನ್ನು ಮುಂದುವರಿಸುತ್ತಿರುವ ರಾಜಕೀಯ ಪಕ್ಷಗಳು ಕೆಲವು ಸ್ಥಾನಗಳನ್ನು ಗಳಿಸಿದೆ. ಆದರೆ ಅವರಿಗೆ ಅಚ್ಚರಿಯ ಹಿನ್ನಡೆ ಉಂಟಾಗಿದೆ.

ಜಾಫ್ನಾ ಸೇರಿದಂತೆ ಲಂಕಾದ ತಮಿಳು ಪ್ರದೇಶಗಳಲ್ಲಿ ದಶಕಗಳಿಂದ ತಮಿಳು ಪಕ್ಷಗಳು ಪ್ರಬಲವಾಗಿವೆ. ಬಹುಸಂಖ್ಯಾತ ಸಿಂಹಳೀಯ ಸಮುದಾಯವು ಇರುವ ಶ್ರೀಲಂಕಾದ ಪ್ರದೇಶಗಳಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಒಡ್ಡುತ್ತಿದೆ.

ಚುನಾವಣಾ ಪ್ರಚಾರದಲ್ಲಿ ದಿಸ್ಸಾನಾಯಕೆ ಮತ್ತು ರಾಷ್ಟ್ರೀಯ ಸಾಮರಸ್ಯ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಭರವಸೆ ಕೊಟ್ಟಿದ್ದರು. ಅದರು ಈಗ ಕೆಲಸ ಮಾಡಿದೆ. ಪ್ರತ್ಯೇಕತಾವಾದದ ಜ್ವಾಲೆಯನ್ನು ಜೀವಂತವಾಗಿಡುವ ಪಕ್ಷಗಳಿಗೆ , ಎಲ್‌ಟಿಟಿಐ ಪರ ಕಾರ್ಯಕರ್ತರು ಮತ್ತು ತಮಿಳು ವಲಸಿಗರು ಮತ ಚಲಾಯಿಸದಂತೆ ಕರೆ ಕೊಟ್ಟಿದ್ದರು. ಅದಕ್ಕೆ ಪೂರಕವಾಗಿ ಫಲಿತಾಂಶ ಬಂದಿದ್ದು ಜಾಫ್ನಾ ಮತದಾರರು ಜನಾಂಗೀಯ ಒಗ್ಗಟ್ಟಿನ ಮಂತ್ರವನ್ನು ತಿರಸ್ಕರಿಸಿದ್ದಾರೆ.

ಯುದ್ಧಕ್ಕೆ ಕೊನೆ

"ಇದು ಎಲ್‌ಟಿಟಿಐ ಪರ ವಲಸಿಗರಿಗೆ ಕೇವಲ ಕಪಾಳಮೋಕ್ಷ" ಎಂದು ಜಾಫ್ನಾ ಮಾನಿಟರ್ ಸಂಪಾದಕ ಅರುಲ್ ಜಾಫ್ನಾದಿಂದ ದೂರವಾಣಿಯಲ್ಲಿ ದ ಫೆಡರಲ್‌ಗೆ ತಿಳಿಸಿದ್ದಾರೆ .

ಜಾಫ್ನಾದ ಶಾಂತಿ ಸ್ಥಾಪಿಸಲು ಮತ್ತು ಆಡಳಿತಕ್ಕೆ ಹೊಸ ಭಾಷ್ಯ ಬರೆಯಲು ಮುಂದಾಗಿರುವ ಎಲ್‌ಟಿಟಿಇ ಮಾಜಿ ಹೋರಾಟಗಾರರು ಎನ್‌ಪಿಪಿಗೆ ಮತ ಚಲಾಯಿಸಿದ್ದಾರೆ ಎಂಬುದಾಗಿ ಅರುಲ್‌ ಹೇಳಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಜಾಫ್ನಾ ನಿವಾಸಿ, "ಈ ಎಲ್ಲ ಪ್ರತ್ಯೇಕತಾವಾದಿ ಮಾತುಗಳು ಜನರಿಗೆ ಬೇಸರ ಮೂಡಿಸಿದೆ. ಅವರು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಯಸಿದ್ದಾರೆ. ಅವರೆಲ್ಲರೂ ಎನ್‌ಪಿಪಿ ಪರವಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.

ಎಲ್‌ಟಿಟಿಇ ಪ್ರಭಾವ ಕ್ಷೀಣ

ಜಾಫ್ನಾ ಚುನಾವಣಾ ಜಿಲ್ಲೆಯಲ್ಲಿ ಜಾಫ್ನಾ ಮತ್ತು ಕಿಲಿನೊಚ್ಚಿ ಇದೆ. ಇದು ದಶಕಗಳಿಂದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ನ ಭದ್ರಕೋಟೆಯಾಗಿತ್ತು, ಇಲ್ಲಿ ದಂಗೆಕೋರರ ಗುಂಪು ಇದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ತಮಿಳು ಪಕ್ಷಗಳನ್ನು ಹೊರಗಿಟ್ಟು ಜಾಫ್ನಾದ ಜನರು ದಕ್ಷಿಣ ಮೂಲದ ರಾಷ್ಟ್ರೀಯ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ" ಎಂದು ಮಾಜಿ ವಿದೇಶಾಂಗ ಸಚಿವ ಅಲಿ ಸಬ್ರಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ಕೇವಲ ಚುನಾವಣಾ ಫಲಿತಾಂಶಗಳ ಮಾತಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆ ಮತ್ತು ಏಕತೆಯ ಪ್ರಬಲ ಸಂಕೇತ" ಎಂದು ಅವರು ಬರೆದುಕೊಂಡಿದ್ದಾರೆ. ಇಲ್ಲಿನ ಪ್ರತ್ಯೇಕವಾದಿ ನಿಲುವು ಈ ಪ್ರದೇಶದಲ್ಲಿ ಸಾವಿರಾರು ಜನರ ಸಾವು ಮತ್ತು ಗಾಯಗಳಿಗೆ ಕಾರಣವಾಗಿತ್ತು. ಈಗ ಈ ಪ್ರದೇಶದವರೂ ಏಕತೆಯ ಮಂತ್ರ ಪಠಿಸಿದ್ದಾರೆ.

ಎಲ್‌ಟಿಟಿಇ ಸ್ಥಾಪಕ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ ಮನ್ನಾರ್, ವಾವುನಿಯಾ ಮತ್ತು ಮುಲ್ಲೈತೀವು ಜಿಲ್ಲೆಗಳನ್ನು ಒಳಗೊಂಡ ವನ್ನಿ ಚುನಾವಣಾ ಜಿಲ್ಲೆಯಲ್ಲಿ, ಎನ್‌ಪಿಪಿ ಐದು ಸ್ಥಾನಗಳಲ್ಲಿ ಎರಡನ್ನು ಗೆದ್ದು ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಪೂರ್ವ ಕರಾವಳಿಯ ಟ್ರಿಂಕೋಮಲಿಯಲ್ಲಿ, ನಾಲ್ಕು ಸ್ಥಾನಗಳಲ್ಲಿ ಎರಡನ್ನು ದಕ್ಕಿಸಿಕೊಂಡಿದೆ. ತಮಿಳು ಬಹುಸಂಖ್ಯಾತ ಜಿಲ್ಲೆಯಾದ ಬಟ್ಟಿಕಲೋವಾದಲ್ಲಿ ಈ ಬಾರಿಯೂ ತಮಿಳು ಪಕ್ಷವು ಅಗ್ರ ಸ್ಥಾನ ಪಡೆದುಕೊಂಡಿದೆ.

ಎನ್‌ಪಿಪಿಗೆ ವರವಾಗಿದ್ದು ಏನು?

ಈಗ ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಮಾಜಿ ತಮಿಳು ಉಗ್ರಗಾಮಿ ಶಾಂತನ್ ಕೆ ತಂಬಿಯಾ ಪ್ರಕಾರ, ತಮಿಳು ವಲಸಿಗರಲ್ಲಿ ಅನೇಕರು ಎನ್‌ಪಿಪಿಯತ್ತ ಒಲವು ತೋರಲು ಪ್ರಾರಂಭಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ.

ಕೊಲಂಬೊ ಮೂಲದ ರಾಜಕೀಯ ವಿಶ್ಲೇಷಕ ಕುಸಾಲ್ ಪೆರೆರಾ ಹೇಳುವಂತೆ, ಎನ್‌ಪಿಪಿ ತಮಿಳು ಪ್ರದೇಶಗಳಿಗೆ ಅಧಿಕಾರದ ಬಲ ನೀಡಲು ನಿರಾಕರಿಸಿದರೂ ಅಲ್ಲಿನವರ ಬೆಂಬಲವನ್ನು ಗಳಿಸಿದೆ ಎಂದು ಹೇಳಿದ್ದಾರೆ. ಇದು ಶ್ರೀಲಂಕಾದ ಇತಿಹಾಸದಲ್ಲಿ ಬಹಳ ಮಹತ್ವದ ಕ್ಷಣ" ಎಂದು ಅಭಿಪ್ರಾಯಪಟ್ಟಿದ್ದಾರೆ.

ದಿಸ್ಸಾನಾಯಕೆಯನ್ನು ತಮಿಳರು ಅಪ್ಪಿಕೊಂಡಿದ್ದು ಯಾಕೆ?

ಎನ್ಪಿಪಿಯ ಪ್ರಮುಖ ಘಟಕ ಹಾಗೂ ಮಾರ್ಕ್ಸ್‌ವಾದಿ ದಿಸ್ಸಾನಾಯಕೆ ಸಂಘಟಿಸಿದ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ, ಪೀಪಲ್ಸ್ ಲಿಬರೇಶನ್ ಫ್ರಂಟ್) ಸಿಂಹಳಿಯರು ಹೆಚ್ಚಿರುವ ಪ್ರದೇಶವನ್ನು ಪ್ರತಿನಿಧಿಸುತಿತ್ತು. ಆದರೆ, ಆ ಪಕ್ಷವನ್ನು ತಮಿಳರೂ ಅಪ್ಪಿಕೊಳ್ಳುತ್ತಿದ್ದಾರೆ.

ಶ್ರೀಲಂಕಾವನ್ನು ದೀರ್ಘಕಾಲದಿಂದ ಕಾಡುತ್ತಿರುವ ಜನಾಂಗೀಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಕೊನೆಗೊಳಿಸುವುದಾಗಿ ಮತ್ತು ಸಿಂಹಳೀಯರು, ತಮಿಳರು ಮತ್ತು ಮುಸ್ಲಿಮರು ಸಮಾನ ಪಾಲುದಾರರಾಗಿ ಬದುಕಬಹುದಾದ ದೇಶವನ್ನು ನಿರ್ಮಿಸುವುದಾಗಿ ದಿಸ್ಸಾನಾಯಕೆ ಪದೇ ಪದೇ ಭರವಸೆ ನೀಡಿದ್ದರು. ಅದನ್ನು ಮತದಾರರು ಒಪ್ಪಿಕೊಂಡಿದ್ದಾರೆ.  


(ಮೂಲ ಲೇಖನ ದ ಫೆಡರಲ್‌ನಲ್ಲಿ ಪ್ರಕಟವಾಗಿದ್ದು ಅದರ ಭಾಷಾಂತರ ಇಲ್ಲಿದೆ) 

Tags:    

Similar News