ಹೆಜ್ಬುಲ್ಲಾ ಮೇಲೆ ಪೇಜರ್ ದಾಳಿ ತಮ್ಮದೇ ಎಂದ ನೆತನ್ಯಾಹು; ಯುದ್ಧೋನ್ಮಾದ ಇಸ್ರೇಲ್‌ನಲ್ಲಿ ʼಕ್ರೆಡಿಟ್ ವಾರ್ʼ?
ಇಸ್ರೇಲ್ ಇಲ್ಲಿಯವರೆಗೆ ದಾಳಿಯ ಜವಾಬ್ದಾರಿಯನ್ನು ಸಾರ್ವಜನಿಕವಾಗಿ ವಹಿಸಿಕೊಂಡಿಲ್ಲ, ಆದರೆ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ ಸಂಕೀರ್ಣ ದಾಳಿಗಳ ಹಿಂದೆ ಆ ದೇಶ ಇದೆ ಎಂದು ವ್ಯಾಪಕವಾಗಿ ಊಹಿಸಲಾಗಿತ್ತು.;
ಸೆಪ್ಟಂಬರ್‌ನಲ್ಲಿ ಲೆಬನಾನ್‌ನ ಹೆಜ್ಬುಲ್ಲಾ ಸಂಘಟನೆ ಮೇಲೆ ನಡೆಸಲಾದ ಪೇಜರ್ ಹಾಗೂ ವಾಕಿ-ಟಾಕಿ ದಾಳಿ ತಮ್ಮದೇ ಕೃತ್ಯ ಎಂದು ಇಸ್ರೇಲ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ. ಇದು ಇಸ್ರೇಲ್ ಕರಾಮತ್ತು ಎಂಬುದು ಜಗತ್ತಿಗೆ ಅದಾಗಲೇ ಗೊತ್ತಾಗಿತ್ತು ಹಾಗೂ ಇದೇ ಕಾರಣಕ್ಕೆ ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಮಿಲಿಟರಿ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ಆದರೆ, ಇಸ್ರೇಲ್ ತಮ್ಮ ಪಾತ್ರವನ್ನು ತಡವಾಗಿ ಒಪ್ಪಿಕೊಂಡಿರುವುದು ಅಚ್ಚರಿಯ ಸಂಗತಿ. ಇದಕ್ಕೆ ಇಸ್ರೇಲ್ ಆಡಳಿತದೊಳಗಿನ ಭಿನ್ನಾಭಿಪ್ರಾಯ ಕಾರಣ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಪ್ರಧಾನಿ ನೆತನ್ಯಾಹು ಹಾಗೂ ಉಚ್ಛಾಟಿತ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ನಡುವಿನ ಕ್ರೆಡಿಟ್ ವಾರ್ ಎನ್ನಲಾಗುತ್ತಿದೆ. ಮಿಲಿಟರಿ ಯಶಸ್ಸು ತಮ್ಮದೇ ಎಂಬುದನ್ನು ಪ್ರಧಾನಿ ಸಾಬೀತುಪಡಿಸುತ್ತಿದ್ದಾರೆ ಎಂಬುದೇ ಈ ಹೇಳಿಕೆಯ ಸಾರ.
ಪೇಜರ್ ದಾಳಿಯಲ್ಲಿ ಕನಿಷ್ಠ 39 ಮಂದಿ ಮೃತಪಟ್ಟು, 3,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. "ರಕ್ಷಣಾ ವ್ಯವಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವಲಯದಲ್ಲಿನ ವಿರೋಧದ ಹೊರತಾಗಿಯೂ ಪೇಜರ್ ಕಾರ್ಯಾಚರಣೆ ನಡೆಸಿದ್ದೇವೆ. ಅದೇ ರೀತಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿದ್ದೇವೆ " ಎಂಬುದಾಗಿ ನೆತನ್ಯಾಹು ಹೇಳಿದ್ದಾರೆ ಎಂಬುದಾಗಿ ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ.
ಹೀಬ್ರೂ ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ನಡೆದ ವಾರದ ಕ್ಯಾಬಿನೆಟ್ ಸಭೆಯಲ್ಲಿ ನೆತನ್ಯಾಹು ಈ ಹೇಳಿಕೆಗಳನ್ನು ನೀಡಿದ್ದಾರೆ .
ಇಸ್ರೇಲ್ ಇಲ್ಲಿಯವರೆಗೆ ದಾಳಿಯ ಜವಾಬ್ದಾರಿಯನ್ನು ಸಾರ್ವಜನಿಕವಾಗಿ ವಹಿಸಿಕೊಂಡಿಲ್ಲ, ಆದರೆ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ ಸಂಕೀರ್ಣ ಸಂಘಟಿತ ದಾಳಿಗಳ ಹಿಂದೆ ಅದು ಇದೆ ಎಂದು ವ್ಯಾಪಕವಾಗಿ ಊಹಿಸಲಾಗಿತ್ತು. .
ಸೆಪ್ಟೆಂಬರ್ 16 ರಂದು ಲೆಬನಾನ್ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಸ್ಫೋಟಕಗಳನ್ನು ಹೊಂದಿರುವ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡಿದ್ದವು. ಪೇಜರ್ ಸ್ಫೋಟಗಳ ಸುದ್ದಿಯಾದ ಮರು ದಿನವೇ ವಾಕಿ-ಟಾಕಿಗಳು ಸಿಡಿದಿದ್ದವು. ಇದು ಲೆಬನಾನ್ ಶಿಯಾ ಸಂಘಟನೆಯ ವಿರುದ್ಧದ ಇಸ್ರೇಲಿ ಗುಪ್ತಚರ ಇಲಾಖೆಯ ಸಿದ್ಧತೆಯೇ ಅಚ್ಚರಿ ಮೂಡಿಸಿತ್ತು.
ಮಿಲಿಟರಿ ಯಶಸ್ಸಿನ ಶ್ರೇಯಸ್ಸು ಪಡೆಯುವ ಯತ್ನ
ಈ ದಾಳಿ ಮಿಲಿಟರಿ ಇಸ್ರೇಲ್ ಮಾಡಿರುವುದು ಎಂಬುದನ್ನು ಯಾರಿಗೂ ಅನುಮಾನ ಇರಲಿಲ್ಲ. ಆದರೆ ನೆತನ್ಯಾಹು ತಡವಾಗಿ ಒಪ್ಪಿಕೊಂಡಿರುವುದು ಚರ್ಚೆಯ ವಿಷಯವಾಗಿದೆ. ಯಾಕೆಂದರೆ ಯುದ್ಧದ ಗುಂಗಿನಲ್ಲಿಯೇ ಇರುವ ಇಸ್ರೇಲ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯ ಶ್ರೇಯಸ್ಸು ಪಡೆಯುವ ಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಪದಚ್ಯುತಗೊಳಿಸಿದ ಕೆಲವೇ ದಿನಗಳಲ್ಲಿ ನೆತನ್ಯಾಹು ಈ ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿ . ತಮ್ಮ ವೈಯಕ್ತಿಕ ಜನಪ್ರಿಯತೆ ಹೆಚ್ಚಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಪ್ರಧಾನಿ ಹೇಳಿಕೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಂದ ಹಾಗೆ ಗ್ಯಾಲಂಟ್ ಅವರನ್ನು ನವೆಂಬರ್ 5ರಂದು ರಕ್ಷಣಾ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ನೆತನ್ಯಾಹು ಮತ್ತು ಗ್ಯಾಲಂಟ್ ಪದೇ ಪದೇ ಜಗಳವಾಡಿದ್ದಾರೆ. 2023ರಲ್ಲಿಯೂ ಒಂದು ಬಾರಿ ಅವರನ್ನು ಹುದ್ದೆಯಿಂದ ವಜಾ ಮಾಡಲು ಪ್ರಯತ್ನಿಸಲಾಗಿತ್ತು. ಸರ್ಕಾರದ ವಿವಾದಾತ್ಮಕ ನ್ಯಾಯಾಂಗ ಪರಿಶೀಲನೆಯ ಯೋಜನೆ ಸ್ಥಗಿತಗೊಳಿಸುವಂತೆ ಗ್ಯಾಲಂಟ್ ಕರೆ ನೀಡಿದ ಒಂದು ದಿನದ ಬಳಿಕ ಆ ಪ್ರಯತ್ನ ನಡೆದಿತ್ತು. ಆದರೆ, ಸಾರ್ವಜನಿಕ ಪ್ರತಿಭಟನೆಗಳಿಂದಾಗಿ ಅವರನ್ನು ಮತ್ತೆ ನೇಮಿಸಬೇಕಾಯಿತು.
ಕಳೆದ ವರ್ಷ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ತನ್ನ ಮಾರಣಾಂತಿಕ ಭಯೋತ್ಪಾದಕ ದಾಳಿ ನಡೆಸಿದಾಗ ಗ್ಯಾಲಂಟ್ ರಕ್ಷಣಾ ಸಚಿವರಾಗಿದ್ದರು. ಗಾಜಾ ಪಟ್ಟಿಯ , ಉತ್ತರ ಗಡಿಯಲ್ಲಿ ಹೋರಾಟ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆಯಲ್ಲಿ ಅವರು ನೇತೃತ್ವ ವಹಿಸಿಕೊಂಡಿದ್ದರು.
ತಮ್ಮನ್ನು ವಜಾಗೊಳಿಸಿದ ಬಗ್ಗೆ ಗ್ಯಾಲಂಟ್ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದರು. ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ತೀವ್ರ- ಸಂಪ್ರದಾಯವಾದಿ ಪುರುಷರನ್ನು ನೇಮಿಸುವ ಅಗತ್ಯ, ಗಾಝಾದಿಂದ ಒತ್ತೆಯಾಳುಗಳನ್ನು ಮರಳಿ ಕರೆತರುವ ಅನಿವಾರ್ಯತೆ ಮತ್ತು ಅಕ್ಟೋಬರ್ 7 ರ ಹಮಾಸ್ ಭಯೋತ್ಪಾದಕ ದಾಳಿ ಮತ್ತು ನಂತರದ ಯುದ್ಧದ ಬಗ್ಗೆ ಪರಿಶೀಲಿಸಲು ರಾಜ್ಯ ತನಿಖಾ ಆಯೋಗ ಸ್ಥಾಪಿಸುವ ಕುರಿತು ತಮ್ಮ ನಡುವಿನ ಭಿನ್ನಾಭಿಪ್ರಾಯದಿಂದಾಗಿ ವಜಾ ಮಾಡಲಾಗಿದೆ ಎಂದು ಹೇಳಿದ್ದರು.
ದೇಶದ ಭದ್ರತಾ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೆತನ್ಯಾಹು ನಿರಾಕರಿಸಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ಹತ್ಯಾಕಾಂಡವನ್ನು ಊಹಿಸಲು ವಿಫಲವಾದ ಕಾರಣ ಇಸ್ರೇಲ್‌ನ ಭದ್ರತಾ ಪಡೆಗಳನ್ನು ದೂಷಿಸಿದ್ದಾರೆ ಎಂದು ಗ್ಯಾಲಂಟ್ ಹೇಳಿದ್ದರು. ಘಟನೆ ಬಗ್ಗೆ ಸಾರ್ವಜನಿಕ ತನಿಖಾ ಆಯೋಗವನ್ನು ರಚಿಸಬೇಕೆಂಬ ಕರೆಗಳನ್ನು ಅವರು ತಳ್ಳಿಹಾಕಿದ್ದಾರೆ ಎಂದು ಗ್ಯಾಲಂಟ್ ದೂರಿದ್ದರು.