ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತೀವ್ರ ತರಾಟೆ: 'ನಿಮಗೆ ಪ್ರಜಾಪ್ರಭುತ್ವವೇ ಅಪರಿಚಿತ'
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹರೀಶ್, "ಪಾಕಿಸ್ತಾನದ ಸೇನಾ ಆಕ್ರಮಣ, ದಬ್ಬಾಳಿಕೆ, ಕ್ರೌರ್ಯ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಅಲ್ಲಿನ ಜನರು ಬಹಿರಂಗವಾಗಿ ದಂಗೆ ಎದ್ದಿದ್ದಾರೆ.
ಭಾರತದ ಕಾಯಂ ಪ್ರತಿನಿಧಿ, ರಾಯಭಾರಿ ಪರ್ವತಾನೇನಿ ಹರೀಶ್
ಪಾಕಿಸ್ತಾನಕ್ಕೆ 'ಪ್ರಜಾಪ್ರಭುತ್ವ' ಎಂಬುದು 'ಅಪರಿಚಿತ' ಪರಿಕಲ್ಪನೆಯಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ತೀಕ್ಷ್ಣವಾಗಿ ಟೀಕಿಸಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಚರಿಸಿದ ಭಾರತ, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದೆ.
ಶುಕ್ರವಾರ ನಡೆದ 'ವಿಶ್ವಸಂಸ್ಥೆ ಭವಿಷ್ಯದತ್ತ ಒಂದು ನೋಟ' ಎಂಬ ವಿಷಯದ ಮೇಲಿನ ಮುಕ್ತ ಚರ್ಚೆಯಲ್ಲಿ, ಪಾಕಿಸ್ತಾನದ ಪ್ರತಿನಿಧಿಯ ಹೇಳಿಕೆಗೆ ಉತ್ತರಿಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ, ರಾಯಭಾರಿ ಪರ್ವತಾನೇನಿ ಹರೀಶ್, "ಜಮ್ಮು ಮತ್ತು ಕಾಶ್ಮೀರದ ಜನರು ಭಾರತದ ಸಾಂವಿಧಾನಿಕ ಚೌಕಟ್ಟಿನಡಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. ಆದರೆ, ಈ ಪರಿಕಲ್ಪನೆಗಳು ಪಾಕಿಸ್ತಾನಕ್ಕೆ ಅಪರಿಚಿತವಾಗಿವೆ ಎಂಬುದು ನಮಗೆ ತಿಳಿದಿದೆ" ಎಂದು ತಿರುಗೇಟು ನೀಡಿದರು. "ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು, ಆಗಿದೆ ಮತ್ತು ಮುಂದೆಯೂ ಇರುತ್ತದೆ," ಎಂದು ಅವರು ಸ್ಪಷ್ಟಪಡಿಸಿದರು.
ಮಾನವ ಹಕ್ಕು ಉಲ್ಲಂಘನೆ
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಹರೀಶ್, "ಪಾಕಿಸ್ತಾನದ ಸೇನಾ ಆಕ್ರಮಣ, ದಬ್ಬಾಳಿಕೆ, ಕ್ರೌರ್ಯ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಅಲ್ಲಿನ ಜನರು ಬಹಿರಂಗವಾಗಿ ದಂಗೆ ಎದ್ದಿದ್ದಾರೆ. ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮತ್ತು ನಿರಂತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪಾಕಿಸ್ತಾನ ತಕ್ಷಣವೇ ಕೊನೆಗೊಳಿಸಬೇಕು" ಎಂದು ಒತ್ತಾಯಿಸಿದರು.
ಇದೇ ವೇಳೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೂ ಭಾರತ ಆಗ್ರಹಿಸಿತು. "1945ರ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುವ 80 ವರ್ಷ ಹಳೆಯ ಭದ್ರತಾ ಮಂಡಳಿಯ ರಚನೆಯು, 2025ರ ಸವಾಲುಗಳನ್ನು ನಿಭಾಯಿಸಲು ಸಜ್ಜಾಗಿಲ್ಲ," ಎಂದು ಹರೀಶ್ ಹೇಳಿದರು. ಭದ್ರತಾ ಮಂಡಳಿಯ ಖಾಯಂ ಮತ್ತು ಖಾಯಂ ಅಲ್ಲದ ಎರಡೂ ವಿಭಾಗಗಳಲ್ಲಿ ಸದಸ್ಯತ್ವವನ್ನು ವಿಸ್ತರಿಸಬೇಕು ಮತ್ತು 'ಗ್ಲೋಬಲ್ ಸೌತ್' (ಅಭಿವೃದ್ಧಿಶೀಲ ರಾಷ್ಟ್ರಗಳು) ಧ್ವನಿಗೆ ಜಾಗತಿಕ ನಿರ್ಧಾರಗಳಲ್ಲಿ ಹೆಚ್ಚಿನ ಪ್ರಾಧಾನ್ಯ ನೀಡಬೇಕು ಎಂದು ಅವರು ಕರೆ ನೀಡಿದರು. ಭಾರತದ 'ವಸುಧೈವ ಕುಟುಂಬಕಂ' (ವಿಶ್ವವೇ ಒಂದು ಕುಟುಂಬ) ನೀತಿಯನ್ನು ಉಲ್ಲೇಖಿಸಿದ ಅವರು, ಜಾಗತಿಕ ಸವಾಲುಗಳನ್ನು ಎದುರಿಸಲು ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.