ಟ್ರಂಪ್ ಜೊತೆ ವ್ಯವಹರಿಸುವುದು ಹೇಗೆ? ಮೋದಿಗೆ "ಖಾಸಗಿ ಸಲಹೆ" ನೀಡಲು ಮುಂದಾದ ನೆತನ್ಯಾಹು

ಮೋದಿ ಮತ್ತು ಟ್ರಂಪ್ ಇಬ್ಬರೂ ತಮಗೆ "ಅದ್ಭುತ ಸ್ನೇಹಿತರು" ಎಂದು ಹೇಳಿಕೊಂಡಿರುವ ನೆತನ್ಯಾಹು, ಈ ಸಲಹೆಯನ್ನು "ಖಾಸಗಿಯಾಗಿ" ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.;

Update: 2025-08-08 11:06 GMT

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು

ಭಾರತ ಮತ್ತು ಅಮೆರಿಕ ನಡುವಿನ ಸುಂಕ ವಿವಾದದಿಂದ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು "ಕೆಲವು ಖಾಸಗಿ ಸಲಹೆಗಳನ್ನು" ನೀಡುವುದಾಗಿ ಹೇಳಿದ್ದಾರೆ.

ಮೋದಿ ಮತ್ತು ಟ್ರಂಪ್ ಇಬ್ಬರೂ ತಮಗೆ "ಅದ್ಭುತ ಸ್ನೇಹಿತರು" ಎಂದು ಹೇಳಿಕೊಂಡಿರುವ ನೆತನ್ಯಾಹು, ಈ ಸಲಹೆಯನ್ನು "ಖಾಸಗಿಯಾಗಿ" ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕಕ್ಕೆ ಆಮದಾಗುವ ಭಾರತೀಯ ಸರಕುಗಳ ಮೇಲೆ ಟ್ರಂಪ್ ಅವರು ಎರಡು ಹಂತಗಳಲ್ಲಿ ಒಟ್ಟು ಶೇ 50ರಷ್ಟು ಸುಂಕ ವಿಧಿಸಿದ ನಂತರ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೆತನ್ಯಾಹು ಅವರ ಹೇಳಿಕೆ ಮಹತ್ವ ಪಡೆದಿದೆ.

"ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಇಬ್ಬರೂ ನನಗೆ ಅತ್ಯುತ್ತಮ ಸ್ನೇಹಿತರು. ಟ್ರಂಪ್ ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ನಾನು ಪ್ರಧಾನಿ ಮೋದಿಯವರಿಗೆ ಕೆಲವು ಸಲಹೆಗಳನ್ನು ನೀಡುತ್ತೇನೆ, ಆದರೆ ಅದನ್ನು ಖಾಸಗಿಯಾಗಿ ಮಾಡುತ್ತೇನೆ," ಎಂದು ನೆತನ್ಯಾಹು ಗುರುವಾರ (ಆಗಸ್ಟ್ 8) ಪತ್ರಕರ್ತರಿಗೆ ತಿಳಿಸಿದ್ದಾಗಿ ಎನ್.ಡಿ.ಟಿ.ವಿ. ವರದಿ ಮಾಡಿದೆ. ಅಲ್ಲದೆ, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ಇಚ್ಛೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

"ಭಾರತ-ಅಮೆರಿಕ ಸಂಬಂಧದ ಅಡಿಪಾಯ ಭದ್ರವಾಗಿದೆ"

ಸುಂಕ ವಿವಾದದ ಕುರಿತು ಮಾತನಾಡಿದ ನೆತನ್ಯಾಹು, "ಭಾರತ-ಅಮೆರಿಕ ಸಂಬಂಧದ ಅಡಿಪಾಯ ತುಂಬಾ ಭದ್ರವಾಗಿದೆ. ಸುಂಕದ ವಿಷಯದಲ್ಲಿ ಉಭಯ ದೇಶಗಳು ಶೀಘ್ರದಲ್ಲೇ ಒಮ್ಮತಕ್ಕೆ ಬಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಇಬ್ಬರಿಗೂ ಲಾಭದಾಯಕ. ಈ ರೀತಿಯ ಪರಿಹಾರವು ಇಸ್ರೇಲ್‌ಗೂ ಒಳ್ಳೆಯದು, ಏಕೆಂದರೆ ಎರಡೂ ದೇಶಗಳು ನಮ್ಮ ಮಿತ್ರರಾಷ್ಟ್ರಗಳು," ಎಂದು ಹೇಳಿದರು.

"ಇಸ್ರೇಲ್ ಶಸ್ತ್ರಾಸ್ತ್ರಗಳು ಭಾರತಕ್ಕೆ ನೆರವಾಗಿವೆ"

ಭಾರತ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಸಹಕಾರವನ್ನು ಶ್ಲಾಘಿಸಿದ ನೆತನ್ಯಾಹು, 'ಆಪರೇಷನ್ ಸಿಂದೂರ್' ಸಮಯದಲ್ಲಿ ಇಸ್ರೇಲ್ ಪೂರೈಸಿದ ಸೇನಾ ಉಪಕರಣಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ ಎಂದು ತಿಳಿಸಿದರು. "ನಮ್ಮ ಶಸ್ತ್ರಾಸ್ತ್ರಗಳು ಪ್ರಯೋಗಾಲಯಗಳಲ್ಲಿ ತಯಾರಾದವಲ್ಲ, ಬದಲಿಗೆ ಯುದ್ಧಗಳಲ್ಲಿ ಪರೀಕ್ಷಿಸಲ್ಪಟ್ಟಿವೆ (battle-tested)," ಎಂದು ಅವರು ಹೆಮ್ಮೆಯಿಂದ ನುಡಿದರು. ಗಡಿಯಾಚೆಗಿನ ಭಯೋತ್ಪಾದನೆಯ ವಿಷಯದ ಬಗ್ಗೆ ಮಾತನಾಡಿದ ಅವರು, ಭಾರತದಂತಹ ದೊಡ್ಡ ದೇಶಕ್ಕೆ ಎಲ್ಲಾ ಕಡೆ ಕಣ್ಗಾವಲು ಇಡುವುದು ಕಷ್ಟ. ಈ ನಿಟ್ಟಿನಲ್ಲಿ ಇಸ್ರೇಲ್, ಭಾರತಕ್ಕೆ ಕಣ್ಗಾವಲು ಉಪಕರಣಗಳೊಂದಿಗೆ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಭರವಸೆ ನೀಡಿದರು.

Tags:    

Similar News