ವಲಸಿಗ ಭಾರತೀಯರಿಗೆ ಅಮೆರಿಕದ ಪೀಡನೆ: ಮೋದಿ ಸರ್ಕಾರ ಯಾಕೆ ಮೌನ ?

ಅಕ್ರಮ ವಲಸಿಗರನ್ನು ನಿಭಾಯಿಸಲು ನಿಗದಿತ ವಿಧಾನಗಳಿವೆ. ಅಮೆರಿಕ ಈ ನಿಯಮಗಳನ್ನು ಗಾಳಿಗೆ ತೂರಿದೆ., ಭಾರತವೂ ಅದನ್ನು ಪ್ರಶ್ನಿಸಿಲ್ಲ. ಮುಂದಿನ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಟ್ರಂಪ್ ಅವರನ್ನು ಅಪ್ಪಿಕೊಳ್ಳುವುದಕ್ಕೆ ಹೇಗೆ ಸಾಧ್ಯ?;

Update: 2025-02-07 02:00 GMT
ನರೇಂದ್ರ ಮೋದಿ ಮತ್ತು ಟ್ರಂಪ್‌ (ಸಂಗ್ರಹ ಚಿತ್ರ)

ಫೆಬ್ರವರಿ 5 ರಂದು ಅಮೃತಸರದಲ್ಲಿ ಅಮೆರಿಕ ಸೇನಾ ವಿಮಾನ ಲ್ಯಾಂಡ್ ಆಗಿತ್ತು. ಅದರಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 104 ಭಾರತೀಯರನ್ನು ಕೈಕಾಲು ಕಟ್ಟಿ ಕಳುಹಿಸಲಾಗಿತ್ತು. ಎಲ್ಲ ಭಾರತೀಯರೂ ಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಿದ್ದರು ಮತ್ತು ವೀಸಾ ಅವಧಿ ಮುಗಿದ ನಂತರವೂ ಅಲ್ಲೇ ಇದ್ದರು ಎಂಬುದನ್ನು ಒಪ್ಪಿಕೊಳ್ಳೋಣ. ಅಲ್ಲದೆ ಯಾವುದೇ ದೇಶಕ್ಕೆ ತನ್ನ ನೆಲದಲ್ಲಿ ವಿದೇಶೀಯರು ಕಾನೂನುಬದ್ಧವಾಗಿ ಮಾತ್ರ ಇರಬೇಕು ಎಂದು ಹೇಳುವ ಹಕ್ಕಿದೆ. ಹೀಗಾಗಿ ಅಮೆರಿಕ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ವಾಪಸ್‌ ಕಳುಹಿಸುವ ಕ್ರಮಕ್ಕೆ ವಿರೋಧವಿಲ್ಲ. ಆದರೆ, ಈ ಕೆಲಸದಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಯಾಕೆ ಅನುಸರಿಸಿಲ್ಲ ಮತ್ತು ಭಾರತ ಯಾಕೆ ಪ್ರಶ್ನಿಸಿಲ್ಲ ಎಂಬುದೇ ಯಕ್ಷ ಪ್ರಶ್ನೆ,

ಈ 104 ಭಾರತೀಯರನ್ನು ಹಿಂದಿರುಗಿಸಲು ಅನುಸರಿಸಿದ ವಿಧಾನ ಅತ್ಯಂತ ಅವಹೇಳನಕಾರಿ. ಇದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆಯ ಜತೆಗೆ , ಅಮೆರಿಕ ತನ್ನನ್ನು ತಾನು ಜಗತ್ತಿನ ಎಲ್ಲರ ಹಕ್ಕುಗಳನ್ನು ರಕ್ಷಿಸುವ ರಾಷ್ಟ್ರವೆಂದು ಘೋಷಿಸಿಕೊಂಡಿರುವುದಕ್ಕೆ ವ್ಯತಿರಿಕ್ತ . ಈ ಕ್ರಮದ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ವಾಗ್ದಾನಗಳನ್ನು ಪೂರೈಸುವ ಸಮರ್ಥ ನಾಯಕ ಎನಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ. ಯಾಕೆಂದರೆ ಅವರ ಚುನಾವಣಾ ಪ್ರಚಾರದಲ್ಲಿ ಅಕ್ರಮ ವಲಸಿಗರನ್ನು ಹೊರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿಯೇ ಅವರಗೆ ಮತಗಳು ಬಿದ್ದಿದ್ದವು.

ಫೆಬ್ರವರಿ 4ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುವಿನ ಜೊತೆ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಅಮೆರಿಕದಿಂದ ವಿದೇಶಿ ಭಯೋತ್ಪಾದಕರು, ಜಿಹಾದಿಗಳು ಮತ್ತು ಹಮಾಸ್ ಬೆಂಬಲಿಗರನ್ನು ಹೊರಗಟ್ಟುತ್ತೇವೆ ಎಂದು ಹೇಳಿದ್ದರು. ಇದು ಕೂಡ ಮತದಾರರನ್ನು ಸಮಾಧಾನಿಸುವ ಹೇಳಿಕೆ.

ಅಕ್ರಮ ಪ್ರವೇಶ ಪಡೆದ 104 ಭಾರತೀಯರನ್ನು ಹೇಗೆ ಹಿಂದಕ್ಕೆ ಕಳುಹಿಸಲಾಯಿತು ಎಂಬುದು ಸದ್ಯದ ಪ್ರಶ್ನೆ. ಅಮೆರಿಕದ ಅಧಿಕಾರಿಗಳು ಅವರನ್ನು ಭಯೋತ್ಪಾದಕರಂತೆ ಕಂಡಿರುವುದು ಸ್ಪಷ್ಟವಾಗಿದೆ. ಮಾಹಿತಿಯ ಪ್ರಕಾರ, ಅವರನ್ನು ಕರೆತಂದ ವಿಮಾನದಲ್ಲಿ 11 ಸಿಬ್ಬಂದಿ ಜೊತೆಗೆ 45 ಅಮೆರಿಕದ ಭದ್ರತಾ ಅಧಿಕಾರಿಗಳೂ ಇದ್ದರು. ಈ ಭಾರತೀಯರು ಕೇವಲ ಉತ್ತಮ ಜೀವನಕ್ಕಾಗಿ ಅಮೆರಿಕವನ್ನು ಸೇರಲು ಪ್ರಯತ್ನಿಸಿದ ಜನರೇ ಆಗಿದ್ದರು. ಅವರಲ್ಲಿ ಹೆಚ್ಚಿನವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದವರು. ಅವರು ಕಾನೂನಿನ ಉಲ್ಲಂಘನೆ ಮಾಡಿದ್ದರೂ, ಅವರನ್ನು ಈ ರೀತಿ ಅಪಮಾನ ಮಾಡಿದ್ದು ಸರಿಯಲ್ಲ,.

ಈ ವಿಮಾನದ ಪ್ರಯಾಣದ ಬಗ್ಗೆ ಒಬ್ಬ ವಲಸಿಗ ಭಾರತೀಯ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. “40 ಗಂಟೆಗಳ ಕಾಲ, ನಮ್ಮ ಕೈಕಾಲುಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಕಟ್ಟಿ ಹಾಕಿದ್ದರು. ಸ್ವಲ್ಪವೂ ಅಲ್ಲಾಡಲು ಅನುಮತಿ ಇರಲಿಲ್ಲ. ಶೌಚಾಲಯಕ್ಕೆ ಅನುಮತಿಯ ಮೇಲೆ ಬಳಸಲು ಅವಕಾಶ ಕೊಡಲಾಯಿತು. ಅವರೇ ಬಾಗಿಲು ತೆರೆಯುತ್ತಿದ್ದರು ಮತ್ತು ನಾವು ಒಳಗೆ ಹೋದ ನಂತರ ಮುಚ್ಚುತ್ತಿದ್ದರು ಎಂದು ಹೇಳಿದ್ದಾರೆ.

ನಾವು ಆಹಾರ ಸೇವಿಸುವಾಗಲೂ ಕೈಕಾಲುಗಳನ್ನು ಕಟ್ಟಿ ಹಾಕಿದ್ದರು. ನಮ್ಮ ಮನವಿಗೆ ಬೆಲೆಯೇ ಇರಲಿಲ. ಈ ಪ್ರಯಾಣ ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವಿನಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಭಾರತ ಒಪ್ಪಿಕೊಳ್ಳಬಾರದು

ಅಮೆರಿಕದ ಈ ರೀತಿಯ ವರ್ತನೆಯನ್ನು ಭಾರತ ಒಪ್ಪಿಕೊಳ್ಳುವಂತಿಲ್ಲ. ಅಮೆರಿಕದ ರಾಯಭಾರಿಯನ್ನು ಕರೆಸಿ, ಭಾರತೀಯರ ಮೇಲಿನ ಈ ಅವಮಾನಕರ ವರ್ತನೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಬೇಕಿತ್ತು. ಭಾರತದ ಯಾವ ಪೌರರನ್ನು ಅಪಮಾನಿಸುವಂತಿಲ್ಲ ಎಂದು ಹೇಳಬೇಕಿತ್ತು. ಅಕ್ರಮ ವಲಸಿಗರನ್ನು ಹಿಂತಿರುಗಿಸುವ ಅಂತರರಾಷ್ಟ್ರೀಯ ವಿಧಾನಗಳಿವೆ. ಅಕ್ರಮ ವಲಸಿಗರಾಗಿದ್ದಾರೆ ಎಂಬುದು ಸ್ಪಷ್ಟವಾದಾಗ ಸಬಂಧಿತ ದೇಶ ಅವರ ಗುರುತನ್ನು ಪರಿಶೀಲಿಸಿ, ಅವರ ಮೇಲೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಆದರೆ, ಅಮೆರಿಕ ಈ ಎಲ್ಲಾ ನಿಯಮಗಳನ್ನು ಮೀರಿದೆ .

ನಾಗರಿಕರು ಇಷ್ಟೊಂದು ಅವಮಾನಕ್ಕೆ ಒಳಗಾಗಿದ್ದಾರೆ. ನರೇಂದ್ರ ಮೋದಿ ಶೀಘ್ರದಲ್ಲೇ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ, ಟ್ರಂಪ್ ಅವರನ್ನು “ಅಪರೂಪದ ಸ್ನೇಹಿತ” ಎಂದು ಅಪ್ಪಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಈ ಅಮಾನವೀಯ ಘಟನೆಯ ಬಗ್ಗೆ ತಿರುಗಿ ಪ್ರಶ್ನೆ ಮಾಡುವ ಧೈರ್ಯ ಇದೆಯಾ? ಅಮೆರಿಕ ಈ ಸೇನಾ ವಿಮಾನದ ವಿಮಾನ ಖರ್ಚನ್ನು ಭಾರತದಿಂದ ವಸೂಲಿ ಮಾಡಲು ಪ್ರಯತ್ನಿಸಿದರೆ? ಈ ದೇಶಪ್ರೇಮದ ಸರ್ಕಾರ ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?

ಈ ಪ್ರಕರಣ ಭಾರತ ಮತ್ತು ಅಮೆರಿಕ ನಡುವಿನ ರಾಜಕೀಯ ಸಂಬಂಧದ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. ಭಾರತ ತನ್ನ ಪ್ರಜೆಯ ಗೌರವವನ್ನು ಕಾಪಾಡಲು, ಅಮೆರಿಕದ ಈ ನಡೆಗೆ ಖಂಡನೆ ವ್ಯಕ್ತಪಡಿಸಬೇಕಾಗಿದೆ.  

Tags:    

Similar News