Donald Trump : ಇಸ್ರೇಲ್‌ಗೆ ಬಾಂಬ್ ನೀಡಲು ಬೈಡೆನ್ ಹೇರಿದ್ದ ನಿರ್ಬಂಧ ತೆರವುಗೊಳಿಸಿದ ಟ್ರಂಪ್

Donald Trump : ಗಾಜಾ ಪಟ್ಟಿಯಲ್ಲಿ ಸಮರ ನಡೆಸುತ್ತಿರುವ ಇಸ್ರೇಲ್‌ಗೆ ಈ ಬಾಂಬ್‌ಗಳನ್ನು ಪೂರೈಸಿದರೆ, ಇನ್ನಷ್ಟು ಸಂಖ್ಯೆಯ ಸಾವು ನೋವಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಬೈಡೆನ್ ಅವರು ಅವುಗಳ ಪೂರೈಕೆಗೆ ನಿರ್ಬಂಧ ಹೇರಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.;

Update: 2025-01-26 08:19 GMT
ಡೊನಾಲ್ಡ್‌ ಟ್ರಂಪ್‌.

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್‌ (Joe Biden) ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ಇಸ್ರೇಲ್‌ಗೆ 2000 ಪೌಂಡ್ ಬಾಂಬ್‌ಗಳನ್ನು ಪೂರೈಸುವುದಕ್ಕೆ ನಿರ್ಬಂಧ ಹೇರಿದ್ದರು. ಇದರಿಂದ ದೊಡ್ಡ ವಿನಾಶ ಉಂಟಾಗಬಹುದು ಎಂಬುದಾಗಿ ಅವರು ಆ ವೇಳೆ ಅಭಿಪ್ರಾಯಪಟ್ಟಿದ್ದರು. ಈ ಆದೇಶ ವಜಾ ಮಾಡಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಈ ಕೂಡಲೇ ಬಾಂಬ್ ಗಳನ್ನು ರವಾನಿಸಿ ಎಂದು ಸೇನೆಗೆ ನಿರ್ದೇಶನ ನೀಡಿದ್ದಾರೆ.

ಗಾಜಾ ಪಟ್ಟಿಯಲ್ಲಿ ಸಮರ ನಡೆಸುತ್ತಿರುವ ಇಸ್ರೇಲ್‌ಗೆ ಈ ಬಾಂಬ್‌ಗಳನ್ನು ಪೂರೈಸಿದರೆ, ಇನ್ನಷ್ಟು ಸಂಖ್ಯೆಯ ಸಾವು, ನೋವಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಬೈಡೆನ್ ಅವರು ಅವುಗಳ ಪೂರೈಕೆಗೆ ನಿರ್ಬಂಧ ಹೇರಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ಬೈಡೆನ್‌ ಹಾಕಿರುವ ನಿರ್ಬಂಧ ಹಾಗೂ ಹೇಳಿಕೆಗಳನ್ನು ನಿರಾಕರಿಸಿರುವ ಟ್ರಂಪ್, " ಸಾಕಷ್ಟು ಶಸ್ತ್ರಾಸ್ತ್ರ, ಬಾಂಬ್‌ಗಳು ಬೇಕು ಎಂಬುದಾಗಿ ಇಸ್ರೇಲ್‌ ಮೊದಲೇ ಆರ್ಡರ್‌ ಕೊಟ್ಟು ಹಣ ಪಾವತಿ ಮಾಡಿತ್ತು. ಬದ್ಧತೆಗೆ ಪೂರಕವಾಗಿ ಬೈಡೆನ್ ಆ ಬಾಂಬ್‌ಗಳನ್ನು ನೀಡದೇ ತಡೆ ಹಿಡಿದಿದ್ದರು. ಈಗ ಆ ನಿರ್ಬಂಧ ತೆರವುಗೊಳಿಸಿದ್ದೇನೆ. ಕೆಲವೇ ದಿನಗಳಲ್ಲಿ ಬಾಂಬ್‌ಗಳು ಇಸ್ರೇಲ್ ಸೇರಲಿವೆ," ಎಂದು ತಮ್ಮ ಟ್ರುಥ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೇಳಿಕೆ ನೀಡಿದ್ದಾರೆ.

ವಾಸ್ತವದಲ್ಲಿ ಬೈಡೆನ್ ಅಮೆರಿಕದ ಮಿತ್ರರಾಷ್ಟ್ರವಾದ ಇಸ್ರೇಲ್‌ನ ದೊಡ್ಡ ಬೆಂಬಲಿಗರು. ಟ್ರಂಪ್‌ ಕೂಡ ಅಧಿಕಾರಕ್ಕೆ ಬರುವ ಮೊದಲೇ ಇಸ್ರೇಲ್‌ ಪರ ಮಾತನಾಡಿದ್ದರು. ಆದರೆ, ಹಮಾಸ್ ಉಗ್ರರ ವಿರುದ್ಧದ ಹೋರಾಟದ ನೆಪದಲ್ಲಿ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ನಿರಂತರ ದಾಳಿಯು ಮಾನವ ವಿನಾಶಕ್ಕೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಗೊಂಡಿತ್ತು. ಇದಕ್ಕೆಲ್ಲ ಅಮೆರಿಕವೇ ಕಾರಣ ಎಂಬ ಕಟು ಟೀಕೆ ವ್ಯಕ್ತವಾಗಿತ್ತು. ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೈಡೆನ್ ಕೊನೇ ಕ್ಷಣದಲ್ಲಿ ಬಾಂಬ್‌ಗಳನ್ನು ಕೊಟ್ಟಿರಲಿಲ್ಲ.

ಕದನ ವಿರಾಮ ಒಪ್ಪಂದ

ಒಂದು ವಾರದ ಹಿಂದೆ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ನಡೆದಿದ್ದು, ಎರಡೂ ಕಡೆಯವರು ತಮ್ಮ ಬಳಿಯಿದ್ದ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದ್ದಾರೆ. ಜನವರಿ 20ರ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೂ ಮುಂಚೆಯೇ ಟ್ರಂಪ್ ಅವರು, ಹಮಾಸ್ ಉಗ್ರರು ಗಾಜಾದಲ್ಲಿ ಒತ್ತೆಯಲ್ಲಿಟ್ಟಿರುವ ಇಸ್ರೇಲಿಗರನ್ನು ಬಿಡುಗಡೆ ಮಾಡದೇ ಹೋದಲ್ಲಿ ನರಕ ತೋರಿಸುತ್ತೇನೆ ಎಂಬ ಎಚ್ಚರಿಕೆ ನೀಡಿದ್ದರು.

ಟ್ರಂಪ್‌ ಅಧಿಕಾರಕ್ಕೆ ಬಂದ ಮೇಲೆ ಆಗಬಹುದಾದ ಆನಾಹುತವನ್ನು ಲೆಕ್ಕಿಸಿದ ಹಮಾಸ್‌ ಕದನ ವಿರಾಮಕ್ಕೆ ಒಪ್ಪಿತ್ತು. ಬೆನ್ನಲ್ಲೇ ಇಸ್ರೇಲ್ ಮತ್ತು ಹಮಾಸ್ ನಡುವೆ ಒಪ್ಪಂದ ಏರ್ಪಟ್ಟಿದೆ.

2023ರ ಅಕ್ಟೋಬರ್ 7ರಂದು ಇಸ್ರೇಲ್‌ಗೆ ನುಗ್ಗಿದ್ದ ಹಮಾಸ್ ಉಗ್ರರು 250 ಮಂದಿಯನ್ನು ಹೊತ್ತೊಯ್ದು ಒತ್ತೆಯಲ್ಲಿಟ್ಟುಕೊಂಡಿದ್ದರು. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಈ ದಾಳಿಯಲ್ಲಿ ಸುಮಾರು 1200 ಮಂದಿ ಮೃತಪಟ್ಟಿದ್ದರು. ಘಟನೆಯಿಂದ ಇಸ್ರೇಲ್‌ ಕೆರಳಿತ್ತು. ಯಾವುದೇ ನಿಯಂತ್ರಣ ಇಲ್ಲದೆ ಪ್ರತಿ ದಾಳಿ ನಡೆಯಿತು.

ಹಮಾಸ್ ಉಗ್ರರ ದಾಳಿಯು ದಶಕಗಳ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಬೆಂಕಿಗೆ ತುಪ್ಪ ಸುರಿಯಿತು. ದೊಡ್ಡ ಪ್ರಮಾಣದ ರಕ್ತಪಾತವೇ ನಡೆಯಿತು. ಗಾಜಾ ಮೇಲೆ ಇಸ್ರೇಲ್ ನಡೆಸಿದ ಯುದ್ಧದಲ್ಲಿ 47 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 

Tags:    

Similar News