Azerbaijan jet crash : ಅಜೆರ್‌ಬೈಜಾನ್ ವಿಮಾನ ಅಪಘಾತವಲ್ಲ, ರಷ್ಯಾ ಸೇನೆಯ ಕುಕೃತ್ಯ ಎಂದ ಉಕ್ರೇನ್
Azerbaijan jet crash:ಈ ಆರೋಪಕ್ಕೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತ ವರದಿಗಳ ಆಧಾರದ ಮೇಲೆ ರಷ್ಯಾದ ಮಾಧ್ಯಮಗಳು ಈ ಹಿಂದೆ ಪಕ್ಷಿಗಳ ಹೊಡೆತದಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ವರದಿ ಮಾಡಿದ್ದವು.
ಬುಧವಾರ (ಡಿಸೆಂಬರ್ 25) ಅಜೆರ್‌ಬೈಜಾನ್ ಏರ್‌ಲೈನ್ಸ್‌ನ ವಿಮಾನ ಪತನಗೊಳ್ಳುವುದಕ್ಕೆ ರಷ್ಯಾದ ಸೇನಾಪಡೆಗಳೇ ಕಾರಣ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ರಷ್ಯಾದ ಗ್ರೋಂಜಿ ಪ್ರದೇಶವನ್ನು ಸಮೀಪಿಸುವಾಗ ನಾಗರಿಕ ವಿಮಾನಕ್ಕೆ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ದಾಳಿ ಮಾಡಿವೆ ಎಂದು ಉಕ್ರೇನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಮಾಹಿತಿ ಕೇಂದ್ರದ ಮುಖ್ಯಸ್ಥ ಆಂಡ್ರಿ ಕೊವಾಲೆಂಕೊ ಆರೋಪಿಸಿದ್ದಾರೆ.
ಈ ಆರೋಪಕ್ಕೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕೃತ ವರದಿಗಳ ಆಧಾರದ ಮೇಲೆ ರಷ್ಯಾದ ಮಾಧ್ಯಮಗಳು ಈ ಹಿಂದೆ ಪಕ್ಷಿಗಳ ಹೊಡೆತದಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ವರದಿ ಮಾಡಿದ್ದವು.
ವಿಮಾನಕ್ಕೆ ಕ್ಷಿಪಣಿ ಅಪ್ಪಳಿಸಿದೆಯೇ?
ಇತರ ವರದಿಗಳು,ಕಜಕಿಸ್ತಾನದಲ್ಲಿ ಅಪಘಾತಕ್ಕೀಡಾದ ಅಜೆರ್ಬೈಜಾನ್ ಏರ್‌ಲೈನ್ಸ್‌ನ ವಿಮಾನದ ಮೇಲೆ ವಿಮಾನ ವಿರೋಧಿ ಕ್ಷಿಪಣಿ ದಾಳಿಯ ಪುರಾವೆಗಳಿವೆ ಎಂದು ಹೇಳಿವೆ.
ಕಜಕಿಸ್ತಾನದ ಅಕ್ಟೌ ನಗರದ ಬಳಿ ದಟ್ಟ ಮಂಜಿನ ನಡುವೆ ತುರ್ತು ಭೂಸ್ಪರ್ಶ ಮಾಡಲು ಪ್ರಯತ್ನಿಸಿದಾಗ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ತನ್ನ ಲ್ಯಾಂಡಿಂಗ್ ಗೇರ್ ಕೆಳಗಿಳಿಸಿ ಹೆಚ್ಚಿನ ವೇಗದಲ್ಲಿ ನೆಲದ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ ನೇರವಾಗಿ ಇಳಿಯದೇ ನೆಲಕ್ಕೆ ಅಪ್ಪಳಿಸಿದೆ.
"ರಷ್ಯಾ ಗ್ರೋಂಜಿ ಮೇಲಿನ ವಾಯುಪ್ರದೇಶ ಮುಚ್ಚಬೇಕಾಗಿತ್ತು. ಆದರೆ ಆ ರೀತಿ ಮಾಡದೇ ಅದಕ್ಕೆ ವಿಮಾನ ವಿರೋಧಿ ದಾಳಿ ಮಾಡಲಾಗಿದೆ. ಜೀವ ಉಳಿಸುವ ಉದ್ದೇಶದಿಂದ ಪೈಲೆಟ್‌ಗಳು ಗ್ರೋಂಜಿಯ ಬದಲು ಕಜಕಸ್ತಾನದಲ್ಲಿ ಇಳಿಸಲು ಮುಂದಾದಾಗ ನೆಲಕ್ಕೆ ಅಪ್ಪಳಿಸಿದೆ,ʼʼ ಎಂದು ರಷ್ಯಾದ ಅಧಿಕಾರಿ ಆರೋಪಿಸಿದ್ದಾರೆ.
ವಿಮಾನದ ಮುಂಭಾಗಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಟರ್ಕಿಯ ಮಾಧ್ಯಮ ವರದಿಗಳು ತಿಳಿಸಿವೆ. ಬದುಕುಳಿದವರು ಕೂಡ ಬಾಹ್ಯ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.
ದುರಂತದಿಂದ ಬದುಕುಳಿದ ಒಬ್ಬ ಪ್ರಯಾಣಿಕನ ಲೈಫ್ ಜಾಕೆಟ್ ನಲ್ಲಿ ಗುಂಡು ಬಿದ್ದಿರುವ ರಂಧ್ರಗಳು ಕಂಡುಬಂದಿವೆ ಎಂದು ವರದಿಗಳು ಹೇಳಿವೆ.
ಹಾರಾಟದ ಪಥ ಏಕಾಏಕಿ ಬದಲಾವಣೆ
ಅಪಘಾತಕ್ಕೀಡಾದ ಮೊದಲು ಜೆಟ್ ತನ್ನ ಉದ್ದೇಶಿತ ಹಾರಾಟ ಮಾರ್ಗದಿಂದ ಏಕಾಏಕಿ ತಿರುಗಿದೆ ಎಂಬುದನ್ನು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ತೋರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಕ್ಕಿಗೆ ಡಿಕ್ಕಿ ಹೊಡೆದರೆ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಘಟನೆ ಬಳಿಕ ಅಜೆರ್ಬೈಜಾನ್ ಏರ್‌ಲೈನ್ಸ್ ರಷ್ಯಾದ ಚೆಚೆನ್ಯಾ ಪ್ರದೇಶಕ್ಕೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.