Israel-Iran conflict | ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ; ನಾಮ ನಿರ್ದೇಶನ ಮರುಪರಿಶೀಲಿಸಲು ಪಾಕಿಸ್ತಾನಿ ರಾಜಕಾರಣಿಗಳ ಆಗ್ರಹ

ಕಳೆದ ಶುಕ್ರವಾರ ಪಾಕಿಸ್ತಾನ ಸರ್ಕಾರವು, ಇತ್ತೀಚಿನ ಭಾರತ - ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಟ್ರಂಪ್‌ ಅವರು ಶಾಂತಿ ಸ್ಥಾಪನೆಗಾಗಿ ಮಾಡಿದ ಪ್ರಯತ್ನಗಳ ಹಿನ್ನೆಲೆಯಲ್ಲಿಅವರನ್ನು ಈ ಪ್ರತಿಷ್ಠಿತ ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದಾಗಿ ಘೋಷಿಸಿತ್ತು.;

Update: 2025-06-23 07:43 GMT
Attack on Iran: Pakistani politicians urge reconsideration of Trumps Nobel Peace Prize nomination

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಅಮೆರಿಕವು ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವ ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹಲವಾರು ಪಾಕಿಸ್ತಾನಿ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಒತ್ತಾಯಿಸಿದ್ದಾರೆ.

ಕಳೆದ ಶುಕ್ರವಾರ ಪಾಕಿಸ್ತಾನ ಸರ್ಕಾರವು, ಇತ್ತೀಚಿನ ಭಾರತ - ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಟ್ರಂಪ್‌ರವರು ಶಾಂತಿಗಾಗಿ ಮಾಡಿದ ಪ್ರಯತ್ನಗಳಿಗಾಗಿ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದಾಗಿ ಘೋಷಿಸಿತ್ತು. ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್‌ರವರು ಸಹಿ ಮಾಡಿದ ಶಿಫಾರಸು ಪತ್ರವನ್ನು ಈಗಾಗಲೇ ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಕಳುಹಿಸಲಾಗಿದೆ.

ಆದರೆ, ಅಮೆರಿಕವು ಇಸ್ರೇಲ್‌ನೊಂದಿಗೆ ಸೇರಿಕೊಂಡು ಇರಾನ್‌ನ ಫೊರ್ಡೊ, ಇಸ್ಫಹಾನ್ ಮತ್ತು ನತಾಂಜ್ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿ, ಟೆಹ್ರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ನಂತರ ಈ ನಾಮನಿರ್ದೇಶನದ ನಿರ್ಧಾರವು ತೀವ್ರ ಟೀಕೆಗೆ ಗುರಿಯಾಗಿದೆ. ಡಾನ್ ಪತ್ರಿಕೆಯ ವರದಿಯ ಪ್ರಕಾರ, ಕೆಲವು ಪ್ರಮುಖ ರಾಜಕಾರಣಿಗಳು ಈ ಇತ್ತೀಚಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರವನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

ಹಿರಿಯ ರಾಜಕಾರಣಿ ಮತ್ತು ಜಮಿಯತ್ ಉಲೇಮಾ-ಇ-ಇಸ್ಲಾಮ್ (JUI-F) ಮುಖ್ಯಸ್ಥರಾದ ಮೌಲಾನಾ ಫಜ್ಲುರ್ ರೆಹಮಾನ್ ಅವರು, ಸರ್ಕಾರವು ತನ್ನ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇರಾನ್ ಮೇಲಿನ ದಾಳಿಯ ನಂತರ ಟ್ರಂಪ್‌ರ ಶಾಂತಿಮಾರ್ಗದ ಪ್ರಯತ್ನಗಳ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಈ ನಾಮನಿರ್ದೇಶನದ ಹಿಂದಿನ ತರ್ಕಬದ್ಧತೆ ಕುರಿತು ಪಾಕಿಸ್ತಾನದಲ್ಲಿ ಚರ್ಚೆ ಆರಂಭವಾಗಿದೆ.

Tags:    

Similar News