‘ಕಾಂತಾರ’ ಮತ್ತು ‘ಕೆಜಿಎಫ್ ಚಿತ್ರಗಳನ್ನು ಹಿಂದಿಕ್ಕಿದ ‘ಕಾಂತಾರ – ಚಾಪ್ಟರ್ 1’
ಸಾಮಾನ್ಯವಾಗಿ ಹೊಂಬಾಳೆ ಫಿಲಂಸ್ ಸಂಸ್ಥೆಯು ಚಿತ್ರದ ಗಳಿಕೆಯನ್ನು ಅಧಿಕೃತವಾಗಿ ಘೋಷಿಸುವುದಿಲ್ಲ. ಆದರೆ, ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾದ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಸಂದರ್ಭದಲ್ಲಿ ಚಿತ್ರದ ಮೊದಲ ದಿನದ ಗಳಿಕೆಯನ್ನು ಸಂಸ್ಥೆ ಅಧಿಕೃತವಾಗಿ ಘೋಷಿಸಿತ್ತು.
‘ಕಾಂತಾರ – ಚಾಪ್ಟರ್ 1’ ಚಿತ್ರ ಬಿಡುಗಡೆಯಾಗಿ ಒಂದು ವಾರವಾಗಿದೆ. ಈ ಒಂದು ವಾರದಲ್ಲಿ ಚಿತ್ರದ ಗಳಿಕೆ ಎಷ್ಟಾಗಿರಬಹುದು ಎಂಬ ಲೆಕ್ಕಾಚಾರ ನಡೆದೇ ಇತ್ತು. ಮೊದಲ ದಿನದಿಂದ ವಾರ ಮುಗಿಯುವವರೆಗೂ ಹಲವು ಲೆಕ್ಕಾಚಾರಗಳಾಗಿದ್ದವು. ಆದರೆ, ಇದುವರೆಗೂ ಚಿತ್ರವನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆಯು ಗಳಿಕೆ ಎಷ್ಟಾಗಿದೆ ಎಂದು ಎಲ್ಲೂ ಹೇಳಿಕೊಂಡಿರಲಿಲ್ಲ. ಇದೀಗ ಚಿತ್ರತಂಡವು ಅಧಿಕೃತವಾಗಿ ಮೊದಲ ವಾರದ ಗಳಿಕೆಯನ್ನು ಘೋಷಿಸಿದ್ದು, ಚಿತ್ರವು ಮೊದಲ ವಾರ ಜಗತ್ತಿನಾದ್ಯಂತ 509.25 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಸಾಮಾನ್ಯವಾಗಿ ಹೊಂಬಾಳೆ ಫಿಲಂಸ್ ಸಂಸ್ಥೆಯು ಚಿತ್ರದ ಗಳಿಕೆಯನ್ನು ಅಧಿಕೃತವಾಗಿ ಘೋಷಿಸುವುದಿಲ್ಲ. ಆದರೆ, ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾದ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಸಂದರ್ಭದಲ್ಲಿ ಚಿತ್ರದ ಮೊದಲ ದಿನದ ಗಳಿಕೆಯನ್ನು ಸಂಸ್ಥೆ ಅಧಿಕೃತವಾಗಿ ಘೋಷಿಸಿತ್ತು. ಚಿತ್ರವು ಮೊದಲ ದಿನ 178.7 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಿತ್ತು. ಈಗ ‘ಕಾಂತಾರ – ಚಾಪ್ಟರ್ 1’ ಚಿತ್ರದ ಮೊದಲ ವಾರದ ಗಳಿಕೆಯನ್ನು ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್ನಲ್ಲಿ ಮೊದಲ ವಾರದ ಗಳಿಕೆಯನ್ನು ಬಹಿರಂಗಪಡಿಸಿದೆ.
ಗಣ್ಯರಿಂದ ಮೆಚ್ಚುಗೆಯ ಮಾತುಗಳು
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರವು ಅಕ್ಟೋಬರ್ 02ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಮ್ ಗೋಪಾಲ್ ವರ್ಮ, ಉಪೇಂದ್ರ, ರಕ್ಷಿತ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ನಿವೀತಾ ಥಾಮಸ್, ಕೆ.ಎಲ್. ರಾಹುಲ್, ಪ್ರಕಾಶ್ ರೈ, ‘ದುನಿಯಾ’ ವಿಜಯ್, ರಿತೇಶ್ ದೇಶ್‍ಮುಖ್, ಅನುಪಮ್ ಖೇರ್, ಸುಕುಮಾರ್, ವಿಷ್ಣು ಮಂಚು, ಶಶಾಂಕ್, ಮಧುರ್ ಭಂಡಾರ್ಕರ್ ಮುಂತಾದ ಬೇರೆಬೇರೆ ಭಾಷೆಯ ಚಿತ್ರರಂಗಗಳ ನಟರು, ತಂತ್ರಜ್ಞರು ಮತ್ತು ರಾಜಕೀಯ ಮುಖಂಡರು ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದರು. ಚಿತ್ರವು ಮೊದಲ ವಾರ ಹೌಸ್‍ಫುಲ್ ಪ್ರದರ್ಶನ ಕಾಣುವುದರ ಜೊತೆಗೆ ಒಳ್ಳೆಯ ಗಳಿಕೆ ಮಾಡಿದೆ.
ಕರ್ನಾಟಕದ ಪಾಲು ದೊಡ್ಡದು
ಈ 500 ಕೋಟಿ ರೂ. ಗಳಿಕೆಯಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಕರ್ನಾಟಕವೊಂದರಿಂದಲೇ 100 ಕೋಟಿ ರೂ.ಗಳಷ್ಟು ಗಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ದಿನದ ಗಳಿಕೆ 20 ಕೋಟಿ ರೂ.ಗಳಷ್ಟಿತ್ತು. ರಾಜ್ಯದಲ್ಲಿ ಮೊದಲ ವಾರ ಬಹುತೇಕ ಚಿತ್ರಮಂದಿರಗಳಲ್ಲಿ ಬಹುತೇಕ ಪ್ರದರ್ಶನಗಳು ಹೌಸ್‍ಫುಲ್ ಆಗಿರುವುದು ವಿಶೇಷ. ಅದರಲ್ಲೂ ಚಿತ್ರ ಬಿಡುಗಡೆಯ ಮೊದಲ ದಿನ, ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ದಾಖಲೆಯ 30 ಪ್ರದರ್ಶನಗಳನ್ನು ಚಿತ್ರ ಕಂಡಿದೆ.
ಹಿಂದಿನ ಎರಡು ದಾಖಲೆಗಳು ಉಡೀಸ್
ವಿಶೇಷವೆಂದರೆ, ‘ಕಾಂತಾರ – ಚಾಪ್ಟರ್ 1’ ಚಿತ್ರವು 500 ಕೋಟಿ ರೂ. ಕ್ಲಬ್ ಸೇರಿದ ಎರಡನೇ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ‘ಕೆಜಿಎಫ್ - 2’ ಚಿತ್ರವು 1000 ಕೋಟಿ ರೂ. ಕ್ಲಬ್ ಸೇರಿತ್ತು. ಇದೀಗ 500 ಕೋಟಿ ರೂ. ಮೀರಿ ಗಳಿಕೆ ಮಾಡಿರುವ ಎರಡನೇ ಚಿತ್ರವಾಗಿ ‘ಕಾಂತಾರ – ಚಾಪ್ಟರ್ 1’ ಹೊರಹೊಮ್ಮಿದೆ. ಈ ಮೂಲಕ ‘ಕೆಜಿಎಫ್ - ಚಾಪ್ಟರ್ 1’ ಮತ್ತು ‘ಕಾಂತಾರ’ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ‘ಕೆಜಿಎಫ್ - ಚಾಪ್ಟರ್ 1’ ಚಿತ್ರವು ಜಾಗತಿಕವಾಗಿ 228 ಕೋಟಿ ರೂ. ಗಳಿಸಿತ್ತು ಎಂದು ಹೇಳಲಾಗುತ್ತಿದೆ. ಈ ದಾಖಲೆಯನ್ನು ಮುರಿದಿದ್ದು ‘ಕಾಂತಾರ’ ಚಿತ್ರ. ಈ ಚಿತ್ರವು ಸುಮಾರು 400 ಕೋಟಿ ರೂ. ಗಳಿಕೆ ಮಾಡಿತ್ತು ಎಂಬ ಸುದ್ದಿ ಇದೆ. ಈಗ ಈ ಎರಡರ ಗಳಿಕೆಯನ್ನು ‘ಕಾಂತಾರ – ಚಾಪ್ಟರ್ 1’ ಮುರಿದಿದೆ. ಚಿತ್ರವು ಬಿಡುಗಡೆಯಾದ ಒಂದೇ ವಾರದಲ್ಲಿ 509.25 ಕೋಟಿ ಗಳಿಕೆ ಮಾಡುವ ಮೂಲಕ ಆ ಎರಡು ಚಿತ್ರಗಳ ಜೀವಮಾನದ ಗಳಿಕೆಯನ್ನು ಹಿಂದಿಕ್ಕಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ – ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ, ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ನವೀನ್ ಡಿ. ಪಡೀಲ್, ಬಲರಾಜ್ ವಾಡಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಈ ಚಿತ್ರಕ್ಕಿದೆ.