ಭಾರತ ಸಂಬಂಧಿ 'ದೊಡ್ಡ' ವರದಿಯ ಸುಳಿವು ನೀಡಿದ ಹಿಂಡೆನ್‌ಬರ್ಗ್
ಯುಎಸ್ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ,ಈ ಹಿಂದೆ ಅದಾನಿ ಗ್ರೂಪ್ ವಿರುದ್ಧ ಆರೋಪ ಮಾಡಿತ್ತು.
ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್, ಭಾರತ ಕೇಂದ್ರಿತ ಮತ್ತೊಂದು ಪ್ರಮುಖ ವರದಿ ಬಗ್ಗೆ ಸುಳಿವು ನೀಡಿದೆ. ʻಶೀಘ್ರದಲ್ಲೇ ಭಾರತದ ಬಗ್ಗೆ ದೊಡ್ಡದೊಂದು ವರದಿʼ ಎಂದು ಹಿಂಡೆನ್‌ಬರ್ಗ್ ಶುಕ್ರವಾರ ಎಕ್ಸ್ ನಲ್ಲಿ ಬರೆದಿದೆ.
ಅದಾನಿ ಗುಂಪಿನ ಕಂಪನಿಗಳು ʻಒಳವ್ಯವಹಾರʼ ಮತ್ತು ಇತರ ಷೇರು ಮಾರುಕಟ್ಟೆ ಉಲ್ಲಂಘನೆ ಮಾಡಿವೆ ಎಂದು ಸಂಸ್ಥೆ ವರದಿ ಬಿಡುಗಡೆ ಮಾಡಿ ಒಂದು ವರ್ಷ ಆಗಿದೆ.
ಅದಾನಿ ವಿರುದ್ಧ ಆರೋಪ: ಅದಾನಿ ಗುಂಪು ಈ ಆರೋಪಗಳನ್ನು ನಿರಾಕರಿಸಿದರೂ, ಕಂಪನಿ ಷೇರುಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ ಆಗಿ, 100 ಶತಕೋಟಿ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿತು. ಅದಾನಿ ಗುಂಪು ಸ್ಟಾಕ್ ಗಳನ್ನು ತಿದ್ದಿದೆ, ತನ್ನ ಷೇರು ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದೆ ಎಂದು ಹಿಂಡೆನ್ ಬರ್ಗ್ ಆರೋಪಿಸಿತ್ತು. ಅದಾನಿ ಎಂಟರ್‌ಪ್ರೈಸಸ್ 2.5 ಬಿಲಿಯನ್ ಡಾಲರ್ ಐಪಿಒ ಬಿಡುಗಡೆಗೆ ಎರಡು ದಿನಗಳ ಮೊದಲು ಹಿಂಡೆನ್‌ಬರ್ಗ್ ತನ್ನ ವರದಿ ಬಿಡುಗಡೆ ಮಾಡಿತು.
ಆರೋಪ ತಳ್ಳಿಹಾಕಿದ ಅದಾನಿ: ಹಿಂಡೆನ್‌ಬರ್ಗ್ ವರದಿಯು ತನ್ನ ಕಂಪನಿಯನ್ನು ಅಸ್ಥಿರಗೊಳಿಸುವ ಮತ್ತು ಭಾರತ ಸರ್ಕಾರದ ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶಪೂರ್ವಕ ಪ್ರಯತ್ನ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮಾರ್ಚ್ ನಲ್ಲಿ ಹೇಳಿದ್ದರು.
ʻನಮ್ಮ ಸಮಗ್ರತೆ ಮತ್ತು ಖ್ಯಾತಿ ಮೇಲಿನ ದಾಳಿ ವಿರುದ್ಧ ನಾವು ಹೋರಾಡಿದ್ದೇವೆ. ಇಂಥ ಸವಾಲುಗಳು ಗುಂಪಿನ ಅಡಿಪಾಯವನ್ನು ದುರ್ಬಲಗೊಳಿಸುವುದಿಲ್ಲ,ʼ ಎಂದು ಅದಾನಿ ಜೂನ್ ನಲ್ಲಿ ಹೇಳಿದ್ದರು. 2024ರ ಜನವರಿಯಲ್ಲಿ, ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಲಾದ ಆರೋಪಗಳಿಂದ ಸುಪ್ರೀಂ ಕೋರ್ಟ್ ಅದಾನಿ ಗ್ರೂಪ್ ಅನ್ನು ತೆರವುಗೊಳಿಸಿತು.