ಬಂಗಾರ ಪ್ರಿಯರಿಗೆ ಶಾಕ್! ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿವೆ. 10 ಗ್ರಾಂ ಚಿನ್ನ ₹1,38,676 ಕ್ಕೆ ಏರಿಕೆಯಾಗಿದ್ದರೆ, ಬೆಳ್ಳಿ ₹2,23,887 ತಲುಪಿದೆ. ಬೆಲೆ ಏರಿಕೆಗೆ ಕಾರಣಗಳು ಮತ್ತು ಜಾಗತಿಕ ಮಾರುಕಟ್ಟೆಯ ಇತ್ತೀಚಿನ ಅಪ್‌ಡೇಟ್ ಇಲ್ಲಿದೆ.

Update: 2025-12-24 07:38 GMT
ಚಿನ್ನದ ದರದಲ್ಲಿ ಏರಿಕೆ
Click the Play button to listen to article

ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಬುಧವಾರ ದಾಖಲೆಯ ಏರಿಕೆ ಕಂಡಿದೆ. ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ ₹1,38,676 ಕ್ಕೆ ತಲುಪಿದರೆ, ಬೆಳ್ಳಿ ಬೆಲೆ ಕೆಜಿಗೆ ₹2.23 ಲಕ್ಷ ದಾಟಿದೆ.

ದಾಖಲೆ ಬರೆದ ಚಿನ್ನದ ದರ

ಸತತ ಮೂರನೇ ದಿನವೂ ಚಿನ್ನದ ಓಟ ಮುಂದುವರಿದಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನದ ಬೆಲೆಯು ₹791 (0.57%) ಏರಿಕೆಯಾಗಿ, ಪ್ರತಿ 10 ಗ್ರಾಂಗೆ ₹1,38,676 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. 

ಬೆಳ್ಳಿ ದರದಲ್ಲೂ ಭಾರೀ ಜಿಗಿತ

ಬೆಳ್ಳಿ ಬೆಲೆಯು ಸತತ ನಾಲ್ಕನೇ ದಿನವೂ ಏರಿಕೆ ಕಂಡಿದ್ದು, ಮಾರ್ಚ್ 2026 ರ ಕಾಂಟ್ರಾಕ್ಟ್ ಬೆಲೆಯು ₹4,234 (1.93%) ಹೆಚ್ಚಳವಾಗಿದೆ. ಈ ಮೂಲಕ ಒಂದು ಕಿಲೋ ಬೆಳ್ಳಿ ಬೆಲೆಯು ₹2,23,887 ಕ್ಕೆ ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ 4,500 ಡಾಲರ್ ಗಡಿಯನ್ನು ದಾಟಿದೆ. ಕಾಮೆಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 4,555.1 ಡಾಲರ್ ಹಾಗೂ ಬೆಳ್ಳಿ ಬೆಲೆ 72.75 ಡಾಲರ್‌ಗೆ ಏರಿಕೆಯಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು

ಅಮೆರಿಕದ ಫೆಡರಲ್ ರಿಸರ್ವ್: ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆ.

ಭೌಗೋಳಿಕ ಉದ್ವಿಗ್ನತೆ: ಅಮೆರಿಕ ಮತ್ತು ವೆನೆಜುವೆಲಾ ನಡುವೆ ಹೆಚ್ಚುತ್ತಿರುವ ರಾಜಕೀಯ ಸಂಘರ್ಷ.

ಕೇಂದ್ರ ಬ್ಯಾಂಕ್‌ಗಳ ಖರೀದಿ: ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ನಿರಂತರವಾಗಿ ಚಿನ್ನವನ್ನು ಸಂಗ್ರಹಿಸುತ್ತಿರುವುದು.

ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಜಿಗರ್ ತ್ರಿವೇದಿ ಅವರ ಪ್ರಕಾರ, ಈ ವರ್ಷ ಚಿನ್ನದ ಬೆಲೆ ಸುಮಾರು 70 ಪ್ರತಿಶತ ಹೆಚ್ಚಳವಾಗಿದ್ದು, ಇದು 1979ರ ನಂತರದ ಅತಿ ದೊಡ್ಡ ವಾರ್ಷಿಕ ಏರಿಕೆಯಾಗಿದೆ.

Tags:    

Similar News