Kambala Controversy | ಬೆಂಗಳೂರು ಕಂಬಳಕ್ಕೆ ಅನುಮತಿ; ಹೈಕೋರ್ಟ್ ಅಂಗಳದಲ್ಲಿ ವಿವಾದ
ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಇತರೆ ಸ್ಥಳಗಳಲ್ಲಿ ಕಂಬಳ ಆಯೋಜಿಸುವ ಕುರಿತು ಮುಂಚಿತವಾಗಿಯೇ ಪೇಟಾ ಇಂಡಿಯಾಗೆ ಮಾಹಿತಿ ನೀಡಬೇಕು. ಪೇಟಾ ಇಂಡಿಯಾದ ಆಕ್ಷೇಪಗಳನ್ನು ಆಲಿಸುವವರೆಗೂ ಸ್ಪರ್ಧೆಗಳಿಗೆ ಅನುಮತಿ ನೀಡಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.;
ಸಾಂಪ್ರದಾಯಿಕ ಕಂಬಳವು ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಲ್ಲ, ಅದು ಇಡೀ ರಾಜ್ಯದ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿಸುವ ಗ್ರಾಮೀಣ ಕ್ರೀಡೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.
PETA (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸರ್ಕಾರ ಬುಧವಾರ ಪ್ರತಿಕ್ರಿಯೆ ದಾಖಲಿಸಿದ ಸಂದರ್ಭ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಂಬಳವು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಕ್ರೀಡೆ. ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವುದರ ಹಿಂದೆ ಸಂಸ್ಕೃತಿ, ಪರಂಪರೆ ಸಂರಕ್ಷಣೆಗಿಂತ ಹೆಚ್ಚಾಗಿ ವಾಣಿಜ್ಯ ಹಿತಾಸಕ್ತಿ ಪ್ರೇರೇಪಿಸುವಂತಿದೆ ಎಂದು ಪೇಟಾ ತನ್ನ ಅರ್ಜಿಯಲ್ಲಿ ದೂರಿತ್ತು.
ಪೇಟಾದ ಅರ್ಜಿ ಕುರಿತು ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಅಂತೆಯೇ ಇಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ (ಎಜಿ) ಶಶಿ ಕಿರಣ್ ಶೆಟ್ಟಿ ಅವರು, ಕಂಬಳವನ್ನು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತಗೊಳಿಸಿದ ಪೇಟಾದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಕಂಬಳವು ಕರ್ನಾಟಕದ ವಿಶಾಲ ಸಾಂಸ್ಕೃತಿಕ ರಚನೆಯ ಭಾಗವಾಗಿದೆ. ದೇಶದಾದ್ಯಂತ ಎಲ್ಲಿ ಬೇಕಾದರೂ ಕಂಬಳವನ್ನು ನಡೆಸಬಹುದು ಎಂದು ಒತ್ತಿ ಹೇಳಿದರು.
ಕಂಬಳ ಕ್ರೀಡೆಯು ಕುದುರೆ ರೇಸ್ ಇದ್ದಂತೆ. ಅಲ್ಲಿ ಓಟದ ಕುದುರೆಗಳನ್ನು ವಿವಿಧೆಡೆಯಿಂದ ಸ್ಪರ್ಧೆ ನಡೆಯುವ ಸ್ಥಳಗಳಿಗೆ ಸಾಗಿಸಲಾಗುತ್ತದೆ. ಇಲ್ಲಿ ಉದ್ಭವಿಸಿರುವ ಸಮಸ್ಯೆ ಕೇವಲ ಭೌಗೋಳಿಕ ಸ್ಥಳದ ಕುರಿತಾಗಿದೆಯೇ ಹೊರತು ಪ್ರಾಣಿಗಳ ಮೇಲಿನ ಕ್ರೌರ್ಯದ ಕುರಿತಂತಲ್ಲ ಎಂದು ಕಿರಣ್ ಶೆಟ್ಟಿ ಪ್ರತಿಪಾದಿಸಿದರು.
ಬೆಂಗಳೂರಿನಲ್ಲಿ ಕಾರ್ಯಕ್ರಮದ ದಿನಾಂಕ ಕುರಿತು ಪೇಟಾ ಪ್ರಸ್ತಾಪಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನಲ್ಲಿ ಅ.26 ರಂದು ಯಾವುದೇ ಕಂಬಳ ಓಟ ಯೋಜಿಸಿಲ್ಲ. ಸ್ಪರ್ಧೆ ನಡೆಸಲು ಇನ್ನೂ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ ಅರವಿಂದ್ ನೇತೃತ್ವದ ವಿಭಾಗೀಯ ಪೀಠವು ಕಾರ್ಯಕ್ರಮಕ್ಕೆ ಅನುಮತಿ ನೀಡುವ ಕುರಿತು ಮುಂಚಿತವಾಗಿ ನ್ಯಾಯಾಲಯಕ್ಕೆ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ನ.5 ಕ್ಕೆ ಮುಂದೂಡಿತು. ಆಗೊಮ್ಮೆ ಮಾಹಿತಿ ನೀಡದೇ ಸ್ಪರ್ಧೆ ನಡೆಸಿದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಪೇಟಾಗೆ ಅವಕಾಶವನ್ನೂ ಕೊಟ್ಟಿತು.
ಬೆಂಗಳೂರಿನಲ್ಲಿ ಕಂಬಳ ಸ್ಪರ್ಧೆಗೆ ತಡೆ ನೀಡುವಂತೆ ಕೋರಿ ಪೇಟಾ ಇಂಡಿಯಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960 ಮತ್ತು ಕಾಯಿದೆಗೆ 2017 ರ ರಾಜ್ಯದ ತಿದ್ದುಪಡಿಗಳ ನಿಬಂಧನೆಗಳನ್ನು ಜಾರಿಗೊಳಿಸಲು ಅರ್ಜಿಯಲ್ಲಿ ಮನವಿ ಮಾಡಿತ್ತು. ಜೊತೆಗೆ ಕಂಬಳವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೀಮಿತ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಿತ್ತು.
ಪೇಟಾ ಆಕ್ಷೇಪ ಆಲಿಸುವವರೆಗೆ ಅನುಮತಿ ಬೇಡ
ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಇತರೆ ಸ್ಥಳಗಳಲ್ಲಿ ಕಂಬಳ ಆಯೋಜಿಸುವ ಕುರಿತು ಮುಂಚಿತವಾಗಿಯೇ ಪೇಟಾ ಇಂಡಿಯಾಗೆ ಮಾಹಿತಿ ನೀಡಬೇಕು. ಪೇಟಾ ಇಂಡಿಯಾದ ಆಕ್ಷೇಪಗಳನ್ನು ಆಲಿಸುವವರೆಗೂ ಸ್ಪರ್ಧೆಗಳಿಗೆ ಅನುಮತಿ ನೀಡಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪೇಟಾ ಇಂಡಿಯಾ ಪರ ವಾದ ಮಂಡಿಸಿದ ವಕೀಲರಾದ ಅರುಣಿಮಾ ಕೆಡಿಯಾ ಅವರು, ಕಂಬಳಕ್ಕೆ ಬಳಸುವ ಎಮ್ಮೆಗಳ ಸಾಗಣೆ, ಕ್ರೌರ್ಯವನ್ನು ತಡೆಯಬೇಕು. ಬೆಂಗಳೂರಿನಲ್ಲಿ ಕಂಬಳಕ್ಕೆ ಒತ್ತಾಯಿಸುತ್ತಿರುವ ಹಿಂದಿನ ಉದ್ದೇಶವನ್ನು ಅರಿಯಬೇಕು. ಕರ್ನಾಟಕವು ಆಧುನಿಕತೆ, ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಖ್ಯಾತಿ ಪಡೆದಿದೆಯೇ ಹೊರತು ಪ್ರಾಣಿಗಳ ಹಿಂಸೆಗಲ್ಲ. ಜನರು ಕೂಡ ಮನರಂಜನೆಗಾಗಿ ಪ್ರಾಣಿಗಳನ್ನು ಬೆದರಿಸುವ ಕ್ರೀಡೆಗಳನ್ನು ಪ್ರೋತ್ಸಾಹಿಸಬಾರದು ಎಂದು ಮನವಿ ಮಾಡಿದರು.