ಇರಾನ್ ಸಂಘರ್ಷ: 1,200 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ; ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ
x
ಇರಾನ್‌ನಲ್ಲಿ ಸಿಲುಕಿದ ಭಾರತೀಯರು

ಇರಾನ್ ಸಂಘರ್ಷ: 1,200 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ; ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ

Iran-Israel War|ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 1,200ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಮತ್ತೊಂದೆಡೆ ದುಬೈನಲ್ಲಿ ಜೆಡಿಎಸ್ ಎಂಎಲ್‌ಸಿ ಭೋಜೇಗೌಡ ಮತ್ತು ಅವರ ಕುಟುಂಬದವರು ಸಿಲುಕಿದ್ದಾರೆ.


Click the Play button to hear this message in audio format

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವಾಯುದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿದೆ. ಈ ಸಂಘರ್ಷದ ನಡುವೆ ಇರಾನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 1,200ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿಕೊಂಡಿದ್ದು, ತಾಯ್ನಾಡಿಗೆ ಮರಳಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಂಟರ್ನೆಟ್ ಮತ್ತು ಸಂಪರ್ಕ ಸಾಧನಗಳ ಮೇಲೆ ಹೇರಲಾಗಿರುವ ಕಠಿಣ ನಿರ್ಬಂಧಗಳಿಂದಾಗಿ ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡಿದ್ದು, ಭಾರತದಲ್ಲಿರುವ ಅವರ ಪೋಷಕರಲ್ಲಿ ತೀವ್ರ ಆತಂಕ ಮನೆಮಾಡಿದೆ.

ಪರೀಕ್ಷೆಗಾಗಿ ಇರಾನ್‌ನಲ್ಲೇ ಉಳಿದಿದ್ದ ವಿದ್ಯಾರ್ಥಿಗಳು

ಫೆಬ್ರವರಿ 23ರಂದೇ ಭಾರತೀಯ ರಾಯಭಾರ ಕಚೇರಿಯು ಇರಾನ್ ಬಿಟ್ಟು ತೆರಳುವಂತೆ ಸೂಚನೆ ನೀಡಿತ್ತು. ಆದರೆ, ಮಾರ್ಚ್ 5ರಂದು ಇರಾನ್ ಆರೋಗ್ಯ ಸಚಿವಾಲಯವು ನಡೆಸಲಿರುವ ಪ್ರಮುಖ MBBS ಇಂಟರ್ನ್‌ಶಿಪ್ ಅರ್ಹತಾ ಪರೀಕ್ಷೆ ಮತ್ತು ಸಾಮಾನ್ಯ ವಿಜ್ಞಾನ ಪರೀಕ್ಷೆಗಳಿಗಾಗಿ ಅನೇಕ ವಿದ್ಯಾರ್ಥಿಗಳು ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದರು. ಇದೀಗ ವಾಯುಪ್ರದೇಶ ಬಂದ್ ಆಗಿ ವಿಮಾನಗಳು ರದ್ದಾಗಿರುವುದರಿಂದ ಅವರು ಹೊರಬರಲಾರದ ಸ್ಥಿತಿಯಲ್ಲಿದ್ದಾರೆ.

ಕನ್ನಡಿಗರ ರಕ್ಷಣೆಗೆ ಸಚಿವ ಪ್ರಲ್ಹಾದ್ ಜೋಶಿ ಭರವಸೆ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, "ಇರಾನ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕರ್ನಾಟಕದವರು ಸೇರಿದಂತೆ ಅನೇಕ ಭಾರತೀಯರು ಸಿಲುಕಿರುವುದು ನನ್ನ ಗಮನಕ್ಕೆ ಬಂದಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ವಿಮಾನ ಹಾರಾಟವೂ ಅಪಾಯಕಾರಿಯಾಗಿದೆ. ನಾನು ಇಂದು ದೆಹಲಿಗೆ ತೆರಳಿ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿ, ಸುರಕ್ಷಿತವಾಗಿ ಎಲ್ಲರನ್ನೂ ಕರೆತರಲು ಗರಿಷ್ಠ ಪ್ರಯತ್ನ ಮಾಡುತ್ತೇನೆ," ಎಂದು ತಿಳಿಸಿದರು. ದುಬೈನಲ್ಲಿ ಸಿಲುಕಿರುವ ಜೆಡಿಎಸ್ ಎಂಎಲ್‌ಸಿ ಭೋಜೇಗೌಡ ಮತ್ತು ಅವರ ಕುಟುಂಬದವರ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕದ 150 ವಿದ್ಯಾರ್ಥಿಗಳ ಪರದಾಟ

ಪುಣೆಯ ಇಂದಿರಾ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‌ನ 84 ವಿದ್ಯಾರ್ಥಿಗಳು ಮತ್ತು ಕರ್ನಾಟಕದ ಸುಮಾರು 150 ಶಾಲಾ-ಕಾಲೇಜು ವಿದ್ಯಾರ್ಥಿಗಳು ದುಬೈನಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಸರ್ಕಾರವು ಇವರ ರಕ್ಷಣೆಗೆ ಎಲ್ಲಾ ನೆರವು ನೀಡಲು ಸಿದ್ಧವಿದೆ ಎಂದಿದ್ದಾರೆ.

Read More
Next Story