ಇರಾನ್‌ನ ತಾತ್ಕಾಲಿಕ ಪರಮೋಚ್ಚ ನಾಯಕನಾಗಿ ಅಲಿರೇಜಾ ಅರಾಫಿ ನೇಮಕ
x
ಆಯತೊಲ್ಲಾ ಅಲಿರೇಜಾ ಅರಾಫಿ (ಸಂಗ್ರಹ)

ಇರಾನ್‌ನ ತಾತ್ಕಾಲಿಕ ಪರಮೋಚ್ಚ ನಾಯಕನಾಗಿ ಅಲಿರೇಜಾ ಅರಾಫಿ ನೇಮಕ

Ayatollah Ali Khamenei| ಖಮೇನಿ ಹತ್ಯೆಯ ಬೆನ್ನಲ್ಲೇ ಇರಾನ್ ಸಂವಿಧಾನದ ವಿಧಿ 111 ಜಾರಿಯಾಗಿದ್ದು, ಹಿರಿಯ ಧರ್ಮಗುರು ಆಯತೊಲ್ಲಾ ಅಲಿರೇಜಾ ಅರಾಫಿ ಈಗ ಇರಾನ್‌ನ ತಾತ್ಕಾಲಿಕ ಪರಮೋಚ್ಚ ನಾಯಕರಾಗಿ ಆಯ್ಕೆಯಾಗಿದ್ದಾರೆ.


ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿಯಲ್ಲಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಹಿರಿಯ ಧರ್ಮಗುರು ಆಯತೊಲ್ಲಾ ಅಲಿರೇಜಾ ಅರಾಫಿ ಅವರನ್ನು ಇರಾನ್‌ನ ತಾತ್ಕಾಲಿಕ ಪರಮೋಚ್ಚ ನಾಯಕನನ್ನಾಗಿ ನೇಮಕ ಮಾಡಲಾಗಿದೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಇಸ್ನಾ (ISNA) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಖಮೇನಿ ಅವರ ಮರಣದ ನಂತರ ಇರಾನ್ ತನ್ನ ಸಂವಿಧಾನದ ವಿಧಿ 111ನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಕಾಯಂ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ದೇಶದ ಪರಮೋಚ್ಚ ಅಧಿಕಾರವನ್ನು ಚಲಾಯಿಸಲು ಮೂವರು ಸದಸ್ಯರ ತುರ್ತು ನಾಯಕತ್ವ ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಯ ಪ್ರಮುಖ ಸದಸ್ಯರಾಗಿ ಅರಾಫಿ ಅವರು ಈಗ ಇರಾನ್‌ನ ಸರ್ವೋಚ್ಚ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಏನಿದು ನಾಯಕತ್ವ ಮಂಡಳಿ?

ಪರಮೋಚ್ಚ ನಾಯಕನು ಮೃತಪಟ್ಟರೆ ಅಥವಾ ಕರ್ತವ್ಯ ನಿರ್ವಹಿಸಲು ಅಶಕ್ತನಾದರೆ, ಹೊಸ ನಾಯಕನ ಅಧಿಕೃತ ಆಯ್ಕೆಯಾಗುವವರೆಗೆ ದೇಶದ ಆಡಳಿತವನ್ನು ಮುನ್ನಡೆಸಲು ಉನ್ನತ ಮಟ್ಟದ ತಾತ್ಕಾಲಿಕ ನಾಯಕತ್ವ ಮಂಡಳಿಯನ್ನು ರಚಿಸಲಾಗುತ್ತದೆ. ಈ ಪ್ರಮುಖ ಮಂಡಳಿಯು ದೇಶದ ಅಧ್ಯಕ್ಷರಾದ ಮಸೂದ್ ಪೆಜೆಶ್ಕಿಯಾನ್, ನ್ಯಾಯಾಂಗದ ಮುಖ್ಯಸ್ಥರಾದ ಘೋಲಮ್ ಹೊಸೈನ್ ಮೊಹ್ಸೆನಿ ಎಜೆಯಿ ಮತ್ತು ಗಾರ್ಡಿಯನ್ ಕೌನ್ಸಿಲ್‌ನ ಪ್ರತಿನಿಧಿಯಾಗಿ ಹಿರಿಯ ಧರ್ಮಗುರು ಅಲಿರೇಜಾ ಅರಾಫಿ ಅವರನ್ನೊಳಗೊಂಡಿದ್ದು, ಈ ಮೂವರು ಸದಸ್ಯರು ಒಟ್ಟಾಗಿ ದೇಶದ ಭದ್ರತೆ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ.

ಅಲಿರೇಜಾ ಅರಾಫಿ ಯಾರು?

ಅಲಿರೇಜಾ ಅರಾಫಿ (67) ಇರಾನ್‌ನ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ. 1959ರಲ್ಲಿ ಯಜ್ಡ್ ಪ್ರಾಂತ್ಯದಲ್ಲಿ ಜನಿಸಿದ ಇವರು, ಖಮೇನಿ ಅವರ ಅತ್ಯಂತ ವಿಶ್ವಾಸಾರ್ಹ ಆಪ್ತರಲ್ಲಿ ಒಬ್ಬರು. ಇವರು ಇರಾನ್‌ನಾದ್ಯಂತ ಇರುವ ಎಲ್ಲಾ ಇಸ್ಲಾಮಿಕ್ ಮದರಸಾಗಳ ಮುಖ್ಯಸ್ಥರಾಗಿದ್ದಾರೆ. ಇದು ಇರಾನ್‌ನ ಧಾರ್ಮಿಕ ವಲಯದಲ್ಲಿ ಇವರಿಗಿರುವ ಅಗಾಧ ಶಕ್ತಿಯನ್ನು ತೋರಿಸುತ್ತದೆ.

ಈ ಹಿಂದೆ ಇವರು 'ಅಲ್-ಮುಸ್ತಫಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ'ದ ಅಧ್ಯಕ್ಷರಾಗಿದ್ದರು. ಈ ಸಂಸ್ಥೆಯು ವಿಶ್ವದಾದ್ಯಂತ ಶಿಯಾ ಧರ್ಮ ಪ್ರಚಾರಕರನ್ನು ತಯಾರು ಮಾಡುತ್ತದೆ. ಇವರು ಕೇವಲ ಸಾಂಪ್ರದಾಯಿಕ ಧರ್ಮಗುರುವಲ್ಲ; ಇಸ್ಲಾಮಿಕ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಕೃತಕ ಬುದ್ಧಿಮತ್ತೆ (AI) ಬಳಸುವ ಬಗ್ಗೆ ಮಾತನಾಡಿದ ತಾಂತ್ರಿಕ ಪ್ರಜ್ಞೆಯುಳ್ಳ ನಾಯಕ.

ಈ ನೇಮಕದ ಮಹತ್ವವೇನು?

ಖಮೇನಿ ಅವರ ಮರಣದ ನಂತರ ಇರಾನ್‌ನಲ್ಲಿ ಅಧಿಕಾರಕ್ಕಾಗಿ ಅಂತರ್ಯುದ್ಧ ಅಥವಾ ಗೊಂದಲ ಏರ್ಪಡದಂತೆ ತಡೆಯಲು ಅರಾಫಿ ಅವರ ನೇಮಕ ಪ್ರಮುಖವಾಗಿದೆ. ಅರಾಫಿ ಅವರು ಖಮೇನಿ ಅವರ ಸಿದ್ಧಾಂತಕ್ಕೆ ಬದ್ಧರಾಗಿರುವ ವ್ಯಕ್ತಿಯಾಗಿದ್ದು, ದೇಶದಲ್ಲಿ ಹಳೆಯ ಪದ್ಧತಿಯೇ ಮುಂದುವರಿಯುತ್ತದೆ ಎಂಬ ಸಂದೇಶವನ್ನು ಇದು ನೀಡುತ್ತದೆ.

ಮುಂದಿನ ಪರಮೋಚ್ಚ ನಾಯಕ?

ಅನೇಕ ರಾಜಕೀಯ ವಿಶ್ಲೇಷಕರು ಅಲಿರೇಜಾ ಅರಾಫಿ ಅವರನ್ನೇ ಇರಾನ್‌ನ ಮುಂದಿನ ಕಾಯಂ ಪರಮೋಚ್ಚ ನಾಯಕ ಎಂದು ಪರಿಗಣಿಸುತ್ತಿದ್ದಾರೆ. ಅವರ ಆಡಳಿತಾತ್ಮಕ ಅನುಭವ ಮತ್ತು ಧಾರ್ಮಿಕ ಪಾಂಡಿತ್ಯ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಸದ್ಯಕ್ಕೆ ಈ ಮೂವರ ಮಂಡಳಿಯು ಇರಾನ್‌ನ ದಿನನಿತ್ಯದ ಆಡಳಿತ ಮತ್ತು ಭದ್ರತೆಯನ್ನು ನೋಡಿಕೊಳ್ಳಲಿದೆ. ಈ ನಡುವೆ, 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಸಭೆ ಸೇರಿ ಇಡೀ ದೇಶಕ್ಕೆ ಒಬ್ಬನೇ ಒಬ್ಬ ಪರಮೋಚ್ಚ ನಾಯಕನನ್ನು ಶೀಘ್ರದಲ್ಲೇ ಆಯ್ಕೆ ಮಾಡಲಿದೆ. ಅಲಿರೇಜಾ ಅರಾಫಿ ಅವರೇ ಆ ಸ್ಥಾನಕ್ಕೇರುತ್ತಾರೋ ಅಥವಾ ಬೇರೆಯವರನ್ನು ಆಯ್ಕೆ ಮಾಡುತ್ತಾರೋ ಎಂಬುದು ಇಡೀ ವಿಶ್ವದ ಕುತೂಹಲವಾಗಿದೆ.

Read More
Next Story