
ಡಿಸಿಎಂ ಡಿ.ಕೆ. ಶಿವಕುಮಾರ್
ಸಿಎಂ ಸ್ಥಾನದ ವಿಚಾರ ನಮ್ಮ ಮತ್ತು ಹೈಕಮಾಂಡ್ ನಡುವೆ ಮಾತ್ರ: ದೆಹಲಿಯಲ್ಲಿ ಡಿಸಿಎಂ ಸ್ಪಷ್ಟನೆ
ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಲಿರುವ ಕಾರಣ, ಅದಕ್ಕೂ ಮುನ್ನವೇ ನಾಯಕತ್ವ ಗೊಂದಲ ಬಗೆಹರಿಸಿಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ಸುಕರಾಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿನ ಅಧಿಕಾರ ಹಂಚಿಕೆ ಹಾಗೂ ನಾಯಕತ್ವ ಗೊಂದಲದ ಚರ್ಚೆ ಇದೀಗ ದೆಹಲಿ ಅಂಗಳ ತಲುಪಿದೆ. ಸಿಎಂ ಸ್ಥಾನದ ವಿಚಾರ ನನ್ನ, ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ (ಜ.16) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲೆಂದೇ ದೆಹಲಿಗೆ ಆಗಮಿಸಿದ್ದೇನೆ ಎಂದು ತಿಳಿಸಿದರು.
"ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆಗೆ ಶುಕ್ರವಾರ ಸಭೆ ಇದೆ. ಚುನಾವಣೆಗಾಗಿಯೇ ಹಲವಾರು ಯೋಜನೆಗಳನ್ನು ಮಾಡಲಾಗಿದ್ದು, ಇದನ್ನು ಪಕ್ಷದ ಮಟ್ಟದಲ್ಲಿ ಮಾತ್ರ ಚರ್ಚೆ ಮಾಡಲಾಗುವುದು. ಈ ಕುರಿತಂತೆ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೆಚ್ಚಿನ ಮಾಹಿತಿ ನೀಡುತ್ತಾರೆ" ಎಂದರು.
“ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿದೆ. ಕಾನೂನು ತಜ್ಞರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು" ಎಂದು ತಿಳಿಸಿದರು.
ದೆಹಲಿಗೆ ಆಹ್ವಾನ ನೀಡಿದ್ದ ರಾಹುಲ್ ಗಾಂಧಿ
ಇತ್ತೀಚೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ, ರನ್‌ವೇನಲ್ಲಿ ಇಂತಹ ಚರ್ಚೆ ಬೇಡ, ದೆಹಲಿಗೆ ಬನ್ನಿ ಎಂದು ಅವರು ನೀಡಿದ್ದ ಆಹ್ವಾನದ ಮೇರೆಗೆ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಲಿರುವ ಕಾರಣ, ಅದಕ್ಕೂ ಮುನ್ನವೇ ಗೊಂದಲ ಬಗೆಹರಿಸಿಕೊಳ್ಳಲು ಡಿಕೆಶಿ ಉತ್ಸುಕರಾಗಿದ್ದಾರೆ.
ಎಕ್ಸ್ ಪೋಸ್ಟ್ ಬಗ್ಗೆ ಸ್ಪಷ್ಟನೆ
ಇನ್ನು ಬುಧವಾರ ತಾವು ಮಾಡಿದ್ದ 'ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ' ಎಂಬ ಪೋಸ್ಟ್ ಬಗ್ಗೆ ಡಿಕೆಶಿ ಸ್ಪಷ್ಟನೆ ಗುರವಾರ(ಜ.16) ಕೊಟ್ಟಿದ್ದಾರೆ. "ನಾನು ಬುಧವಾರ ಮಾಡಿದ್ದ ಎಕ್ಸ್ ಪೋಸ್ಟನ್ನು ಕೆಲವು ಮಾಧ್ಯಮಗಳು ವಿವಿಧ ರೀತಿ ವ್ಯಾಖ್ಯಾನಿಸಿವೆ. ಕಾವೇರಿ ಆರತಿಯ ಪ್ರಾರ್ಥನೆಗೆ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ. ಮೇಕೆದಾಟು ಯೋಜನೆಯ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದೇನೆ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವುದರಲ್ಲಿ ಅರ್ಥವಿಲ್ಲ" ಎಂದರು.

