ದೆಹಲಿಗೆ ಹಾರಿದ ಡಿಕೆಶಿ; ಅಸ್ಸಾಂ ಚುನಾವಣೆ ನೆಪ... ಅಧಿಕಾರ ಹಂಚಿಕೆಯ ಜಪ?
x
ಡಿಸಿಎಂ ಡಿ.ಕೆ. ಶಿವಕುಮಾರ್‌

ದೆಹಲಿಗೆ ಹಾರಿದ ಡಿಕೆಶಿ; ಅಸ್ಸಾಂ ಚುನಾವಣೆ ನೆಪ... ಅಧಿಕಾರ ಹಂಚಿಕೆಯ ಜಪ?

ರಾಹುಲ್ ಗಾಂಧಿ ಆಹ್ವಾನದ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ 10:55ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಧಿಕೃತವಾಗಿ ಅಸ್ಸಾಂ ಮತ್ತು ಇತರ ರಾಜ್ಯಗಳ ಚುನಾವಣೆಗಳ ಕುರಿತಾದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರೂ, ಇದರ ಅಸಲಿ ಉದ್ದೇಶ 'ಅಧಿಕಾರ ಹಂಚಿಕೆ' ಎನ್ನಲಾಗುತ್ತಿದೆ.

ರಾಹುಲ್ ಗಾಂಧಿ ಆಹ್ವಾನ

ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ರನ್‌ವೇನಲ್ಲಿ ಇಂತಹ ಚರ್ಚೆ ಬೇಡ, ದೆಹಲಿಗೆ ಬನ್ನಿ ಎಂದು ಅವರು ನೀಡಿದ್ದ ಆಹ್ವಾನದ ಮೇರೆಗೆ ಡಿಕೆಶಿ ದೆಹಲಿಗೆ ತೆರಳುತ್ತಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಲಿರುವ ಕಾರಣ, ಅದಕ್ಕೂ ಮುನ್ನವೇ ಗೊಂದಲ ಬಗೆಹರಿಸಿಕೊಳ್ಳಲು ಡಿಕೆಶಿ ಉತ್ಸುಕರಾಗಿದ್ದಾರೆ.

ಪ್ರಿಯಾಂಕ್ ಖರ್ಗೆ ಜೊತೆ ಮಾತುಕತೆ

ಇಂದು ಬೆಳಿಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯ ಅಥವಾ ಹೈಕಮಾಂಡ್ ನೀಡಿದ ಯಾವುದಾದರೂ ಪ್ರಮುಖ ಸಂದೇಶವನ್ನು ಅವರು ತಲುಪಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.



ಅಸ್ಸಾಂ ಚುನಾವಣೆ ಸಂಬಂಧ ಭೇಟಿ ಎಂದ ಡಿಕೆಶಿ

ಇನ್ನು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಶುಕ್ರವಾರ ದೆಹಲಿಗೆ ತೆರಳುತ್ತಿದ್ದು, ಇದು ಕೇವಲ ಅಸ್ಸಾಂ ಚುನಾವಣೆಗೆ ಸಂಬಂಧಿಸಿದ ಭೇಟಿ ಎಂದಿದ್ದಾರೆ. ಅಸ್ಸಾಂ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಹಲವು ಚರ್ಚೆಗಳನ್ನು ನಡೆಸಲು ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

'ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದೀರಾ' ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದು, 'ರಾಹುಲ್ ಗಾಂಧಿಯನ್ನು ನಾನು ಭೇಟಿ ಮಾಡುವುದು ಹೊಸತೇನೂ ಅಲ್ಲ. ನಮ್ಮ ಪಕ್ಷದ ಅಧ್ಯಕ್ಷರು, ನಾಯಕರನ್ನು ಭೇಟಿ ಮಾಡುವುದು, ಕರೆ ಮಾಡಿ ಅವರ ಜೊತೆ ಚರ್ಚಿಸುವುದು ಸಹಜ ಪ್ರಕ್ರಿಯೆ. ಅವುಗಳನ್ನು ಸಾರ್ವಜನಿಕವಾಗಿ ಚಚೆ ಮಾಡುವುದಿಲ್ಲ' ಎಂದರು.

'ರಾಹುಲ್ ಗಾಂಧಿ ಅವರನ್ನು ನೀವು ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ. ಅವರ ಅಪೇಕ್ಷೆಯನ್ನು ರಾಹುಲ್ ಬಳಿ ಹೇಳಿಕೊಳ್ಳುತ್ತೀರಾ' ಎಂದು ಕೇಳಿದಾಗ, 'ಅವರು ನಮ್ಮ ಪಕ್ಷದ ನಾಯಕರು. ನಿಮ್ಮ (ಮಾಧ್ಯಮಗಳ) ಬಯಕೆಯನ್ನು ಅವರ ಮುಂದೆ ಪ್ರಸ್ತಾಪಿಸುತ್ತೇನೆ' ಎಂದರು.

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಇಂದು ಅಸ್ಸಾಂ‌ ಚುನಾವಣಾ ಚರ್ಚೆ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ್ ವಾದ್ರಾ, ಕೆ.ಸಿ. ವೇಣುಗೋಪಾಲ್ ಒಂದೇ ವೇದಿಕೆಯಲ್ಲಿ ಸಿಗಲಿದ್ದಾರೆ. ಒಂದೇ ವೇದಿಕೆಯಲ್ಲಿ ನಾಲ್ವರು ಸಿಗುವ ಹಿನ್ನಲೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಲು ತಯಾರಿ ನಡೆಸಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರ ನನಗೆ ಒಂದು ಸ್ಪಷ್ಟನೆ ಕೊಡಿ ಎಂದು ಕೇಳಲು ಡಿ.ಕೆ.ಶಿವಕುಮಾರ್ ಸಿದ್ದತೆ ನಡೆಸಿದ್ದಾರೆ. ಅಸ್ಸಾಂ ಚುನಾವಣಾ ಸಿದ್ದತಾ ಸಭೆಗೂ ಮೊದಲು ಅಥವಾ ನಂತರ ಈ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ್ ವಾದ್ರಾ, ಕೆ.ಸಿ. ವೇಣುಗೋಪಾಲ್ ಜತೆ ಪ್ರಸ್ತಾಪಿಸಲು ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ

ಚರ್ಚೆಗೆ ಅವಕಾಶ ನೀಡಲು ಸಹಕಾರ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದಾಗ ಡಿ.ಕೆ.ಶಿ ಮನವಿಮಾಡಿದ್ದರು. ರಾಹುಲ್ ಗಾಂಧಿ ಈ ಸಮಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಅವಕಾಶ ನೀಡುತ್ತಾರಾ ಎನ್ನುವುದು ಕುತೂಹಲ.

ಎಕ್ಸ್‌ ಪೋಸ್ಟ್‌ ಬಗ್ಗೆ ಸ್ಪಷ್ಟನೆ

ಇನ್ನು ಬುಧವಾರ ತಾವು ಮಾಡಿದ್ದ 'ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ' ಎಂಬ ಪೋಸ್ಟ್‌ ಬಗ್ಗೆ ಡಿಕೆಶಿ ನಿನ್ನೆ ಸ್ಪಷ್ಟನೆ ಕೊಟ್ಟಿದ್ದಾರೆ. "ನಾನು ಬುಧವಾರ ಮಾಡಿದ್ದ ಎಕ್ಸ್‌ ಪೋಸ್ಟನ್ನು ಕೆಲವು ಮಾಧ್ಯಮಗಳು ವಿವಿಧ ರೀತಿ ವ್ಯಾಖ್ಯಾನಿಸಿವೆ. ಕಾವೇರಿ ಆರತಿಯ ಪ್ರಾರ್ಥನೆಗೆ ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ. ಮೇಕೆದಾಟು ಯೋಜನೆಯ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದೇನೆ. ಅದನ್ನು ಬೇರೆ ರೀತಿ ವ್ಯಾಖ್ಯಾನಿಸುವುದರಲ್ಲಿ ಅರ್ಥವಿಲ್ಲ" ಎಂದರು.

Read More
Next Story