CMs chair fight just before Sankranti; DK brothers mysterious message after Rahuls visit!
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ. ಸುರೇಶ್‌

ಸಂಕ್ರಾಂತಿಗೇ ಸಿಎಂ ಕುರ್ಚಿ ಫಿಕ್ಸ್? ರಾಹುಲ್ ಭೇಟಿ ಬೆನ್ನಲ್ಲೇ ಡಿಕೆ ಬ್ರದರ್ಸ್ ಪೋಸ್ಟ್‌ ವೈರಲ್‌

ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರು ನೀಡಿರುವ 'ನಿಗೂಢ ಸಂದೇಶ' ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.


Click the Play button to hear this message in audio format

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಯ ಫೈಟ್ ಈಗ ಹೊಸ ತಿರುವು ಪಡೆದುಕೊಂಡಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕರ್ನಾಟಕ ಭೇಟಿ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ನೀಡಿರುವ 'ನಿಗೂಢ ಸಂದೇಶ' ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಂಗಳವಾರ ಮೈಸೂರಿನಲ್ಲಿ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಇಂದು ಬೆಳಗ್ಗೆ ಡಿಕೆ ಶಿವಕುಮಾರ್‌ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಬರೆದುಕೊಂಡಿದ್ದರು. ಇದೀಗ ಇದರ ಬೆನ್ನಲ್ಲೇ ಡಿ.ಕೆ. ಸುರೇಶ್‌ ಕೂಡ ಅಚ್ಚರಿಯ ಪೋಸ್ಟ್‌ವೊಂದನ್ನು ಮಾಡಿದ್ದಾರೆ.

ಬುಧವಾರ(ಜ.14) ತಮ್ಮ ಸಾಮಾಜಿಕ ಜಾಲತಾಣದಲ್ಲಿ " ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ. ಸತತ ಪ್ರಯತ್ನದ ಫಲವೇ ಯಶಸ್ಸು" ಎಂಬ ಸಾಲುಗಳನ್ನು ಸುರೇಶ್‌ ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಕುರ್ಚಿ ಮೇಲೆ ಕೂರಿಸುವ ತಮ್ಮ ಪ್ರಯತ್ನ ನಡೆಯುತ್ತಲೇ ಇರುತ್ತದೆ ಎಂಬ ಸಂದೇಶವನ್ನು ತಮ್ಮ ರಾಜಕೀಯ ವಿರೋಧಿಗಳಿಗೆ ತಲುಪಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸುರೇಶ್‌ ಪೋಸ್ಟ್‌

ಲೋಕಸಭೆ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಮಂಗಳವಾರ(ಜ. 13) ತಮಿಳುನಾಡಿಗೆ ತೆರಳವು ಉದ್ದೇಶದಿಂದ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ವಾಗತಿಸಿದ್ದರು. ಈ ವೇಳೆ ಇಬ್ಬರೂ ರಾಹುಲ್‌ ಗಾಂಧಿಯವರನ್ನು ಪ್ರತ್ಯೇಕವಾಗಿ ಕೆಲವೇ ಸೆಕೆಂಡುಗಳ ಕಾಲ ಚರ್ಚೆ ನಡೆಸಿದ್ದರು. ಇದಾದ ನಂತರ ಡಿಕೆ ಸಹೋದರರಿಬ್ಬರೂ ಪ್ರತ್ಯೇಕ ಸಂದೇಶ ಹಾಕಿರುವುದು ತೀವ್ರ ಕುತೂಹಲ ಮೂಡಿಸಿದೆ.

ಪ್ರಯತ್ನ ಮುಂದುವರಿಸಿರುವ ಡಿ.ಕೆ. ಸುರೇಶ್‌

ರಾಜ್ಯ ಸರ್ಕಾರಕ್ಕೆ 2025 ನವೆಂಬರ್‌ 20ರಂದು ಎರಡುವರೆ ವರ್ಷ ತುಂಬಿದ ನಂತರ ಡಿ.ಕೆ. ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಸಂದೇಶ ಹೊತ್ತು ತಮ್ಮ ಆಪ್ತ ಶಾಸಕರೊಂದಿಗೆ ಡಿ.ಕೆ. ಸುರೇಶ್‌ ದೆಹಲಿಯಲ್ಲಿ ಹೈಕಮಾಂಡ್‌ ಭೇಟಿಗೆ ತೆರಳಿದ್ದರು. ಆದರೆ ಕಾಂಗ್ರೆಸ್‌ ವರಿಷ್ಠರ ಭೇಟಿಗೆ ಅವಕಾಶ ಸಿಗದೇ ಬರಿಗೈನಲ್ಲಿ ವಾಪಸ್‌ ಆಗಿದ್ದರು. ಇದಾದ ನಂತರವು ಅವಕಾಶ ಸಿಕ್ಕಾಗೆಲ್ಲಾ ಡಿಸಿಎಂ ಆಪ್ತ ಶಾಸಕರಾದ ಇಕ್ಬಾಲ್‌ ಹುಸೇನ್‌, ಮಾಗಡಿ ಶಾಸಕ ಸಿ.ಎನ್‌. ಬಾಲಕೃಷ್ಣ ಹಾಗೂ ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಅವರು ಡಿ.ಕೆ. ಶಿವಕುಮಾರ್‌ ಪರ ಹೇಳಿಕೆಗಳನ್ನು ನೀಡುತ್ತಲೇ ಇದ್ದರು. ಇತ್ತೀಚೆಗೆ ಬೆಳಗಾವಿಯಲ್ಲಿ ಮುಕ್ತಾಯವಾದ ಚಳಿಗಾಲದ ಅಧಿವೇಶನದಲ್ಲೂ ಡಿಸಿಎಂ ಪರ ಮಾತನಾಡಿದ್ದು ರಾಜಕೀಯವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಡಿಕೆಶಿ ಪೋಸ್ಟ್‌ನಲ್ಲೇನಿದೆ ?

ಮೈಸೂರಿನಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯವರನ್ನು ಭೇಟಿಯಾದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ "ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ" ಎಂದು ಬರೆದುಕೊಂಡಿದ್ದರು. ರಾಜಕೀಯ ಪ್ರಯತ್ನಗಳು (ಸಿಎಂ ಗಾದಿಗಾಗಿ ನಡೆಸುವ ಹೋರಾಟ) ಎಷ್ಟೇ ಅಡೆತಡೆಗಳನ್ನು ಎದುರಿಸಿದರೂ, ಅಂತಿಮವಾಗಿ 'ದೈವಬಲ' ಅಥವಾ 'ನ್ಯಾಯ' ತಮಗೆ ಸಿಗಲಿದೆ ಎಂಬುದು ಡಿಕೆಶಿಯವರ ನಂಬಿಕೆ ಇರಬಹುದು.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದ್ದರು. ಇದೀಗ ಮೈಸೂರಿನಲ್ಲೇ ರಾಹುಲ್‌ ಗಾಂಧಿಯವರನ್ನು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿ ಏನು ಚರ್ಚೆ ನಡೆಸಿರಬಹುದು ಎಂಬ ಕುತೂಹಲ ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ತುಸು ಹೆಚ್ಚಾಗಿಯೇ ಇದೆ.

Read More
Next Story