ಅಕ್ಕನ ಮನೆಗೇ ಕನ್ನ! ಶಿಡ್ಲಘಟ್ಟ ರಾಬರಿ ಕೇಸ್‌ಗೆ ಟ್ವಿಸ್ಟ್‌; ತಂದೆ-ಮಕ್ಕಳು ಅರೆಸ್ಟ್‌
x
ದರೋಡೆ ಪ್ರಕರಣದ ಬಂಧಿತ ಆರೋಪಿಗಳು

ಅಕ್ಕನ ಮನೆಗೇ ಕನ್ನ! ಶಿಡ್ಲಘಟ್ಟ ರಾಬರಿ ಕೇಸ್‌ಗೆ ಟ್ವಿಸ್ಟ್‌; ತಂದೆ-ಮಕ್ಕಳು ಅರೆಸ್ಟ್‌

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದಿದ್ದ ಭೀಕರ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ರೋಚಕ ಕ್ರೈಂ ಸ್ಟೋರಿಯ ಪೂರ್ಣ ವಿವರ ಇಲ್ಲಿದೆ.


ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಭೀಕರ ದರೋಡೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಕ್ಕಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು 54 ವರ್ಷದ ಇನಾಯತ್ ಪಾಷಾ ಹಾಗೂ ಆತನ ಮಕ್ಕಳಾದ 25 ವರ್ಷದ ಶಾರುಖ್ ಪಾಷಾ ಹಾಗೂ 24 ವರ್ಷದ ಸಾಹಿಲ್ ಪಾಷಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ವೇಳೆ ದರೋಡೆಗಿಳಿಯುವ ಈ ಅಪ್ಪ-ಮಕ್ಕಳಿಗೆ ಒಂಟಿ ಮಹಿಳೆಯರೇ ಟಾರ್ಗೆಟ್‌. ಶಿಡ್ಲಘಟ್ಟದ ದರೋಡೆ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ದ ಪೊಲೀಸರ ಬಲೆಗೆ ಕೊನೆಗೂ ಈ ಕಿಡಿಗೇಡಿಗಳು ಬಿದ್ದಿದ್ದಾರೆ.

ಏನಿದು ಪ್ರಕರಣ?

ಇದೇ ತಿಂಗಳು 10ರಂದು, ಮುಂಜಾನೆ 3 ಗಂಟೆಯಲ್ಲಿ ಶಿಡ್ಲಘಟ್ಟ ನಗರದ ಇಲಾಹಿ ನಗರದಲ್ಲಿ ಭಾರೀ ದರೋಡೆ ನಡೆದಿತ್ತು. ಮಹಿಳೆ ಬಾಯಿಗೆ ಟೇಪ್ ಸುತ್ತಿ, ಭೀಕರವಾಗಿ ಹಲ್ಲೆ ಮಾಡಿ, ಬಂಗಾರ ಹಾಗೂ ಬೆಳ್ಳಿ‌ ರಾಬರಿ ಮಾಡಲಾಗಿತ್ತು. ಮನೆಯಲ್ಲಿ ಎಲ್ಲರೂ ಅಜ್ಮಿರಕ್ಕೆ ಹೋಗಿದ್ದು, ಮನೆಯಲ್ಲಿ ಮುಬಾರಕ್ ಎಂಬ ಮಹಿಳೆ ಮಾತ್ರ ಇದ್ದರು.

ಬರ್ಬರವಾಗಿ ಹಲ್ಲೆ ನಡೆಸಿ ಕೆಜಿಗಟ್ಟಲೇ ಚಿನ್ನ ರಾಬರಿ

ಮನೆಯಲ್ಲಿ ಮುಬಾರಕ್‌ ಒಬ್ಬರೇ ಇರುವ ಬಗ್ಗೆ ಗೊತ್ತಿದ್ದ ದರೋಡೆಕೋರರು, ಮುಂಜಾನೆ 3 ಗಂಟೆಗೆ ಮನೆಗೆ ನುಗ್ಗಿ ಮುಬಾರಕ್ ಮೇಲೆ ಮಚ್ಚು, ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಆಕೆ ಕೂಗಿಕೊಳ್ಳದಂತೆ ಬಾಯಿಗೆ ಗಮ್ ಟೇಪ್ ಅಂಟಿಸಿ, 3 ಕೆಜಿ ಬಂಗಾರ ಹಾಗೂ ಬೆಳ್ಳಿ ದರೋಡೆ ಮಾಡಿ ಎಸ್ಕೇಪ್‌ ಆಗಿದ್ದರು. ಇದರ ಬೆನ್ನಲ್ಲೇ ಮುಬಾರಕ್‌ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳು ಪೊಲೀಸ್‌ ಬಲೆಗೆ

ಇನ್ನು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೀಗ ದರೋಡೆ ಮಾಡಿದ್ದ ತಂದೆ, ಮಕ್ಕಳನ್ನು 11 ದಿನದಲ್ಲೇ ಪೊಲೀಸರು ಬಂಧಿಸಿದ್ದಾರೆ. ಮೊದಲು ಮನೆಯ ಮೇಲಿನ ಗೇಟ್ ನಿಂದ ಬಂದು, ಸಿಸಿಟಿವಿ ವೈರ್ ಕಟ್ ಮಾಡಿದ್ದ ತಂದೆ, ಮಕ್ಕಳು, ಬಳಿಕ ದರೋಡೆ ಮಾಡಿದ್ದರು ಎಂಬುದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು.

ಸ್ವಂತ ಅಕ್ಕನ ಮನೆಯಲ್ಲೇ ದರೋಡೆ

ಇನ್ನು ಸಂತ್ರಸ್ತ ಮಹಿಳೆ ಮುಬಾರಕ್‌ ಆರೋಪಿ ಇನಾಯತ್‌ನ ಸ್ವಂತ ಅಕ್ಕ. ಅಕ್ಕನ ಮನೆಯಲ್ಲಿ ಬಂಗಾರ ಇತ್ತು ಎಂದು ತಿಳಿದಿದ್ದ ಅಪ್ಪ ಹಾಗೂ ಮಕ್ಕಳು, ಪ್ಲಾನ್ ಮಾಡಿ ದರೋಡೆ ಮಾಡಿದ್ದರು. ಅಕ್ಕನ ಮೇಲೆ ಹಲ್ಲೆ ನಡೆಸಿ, ಮೂರು‌ ಕೆಜಿ ಬಂಗಾರ ಎಂದು ಕಳ್ಳತನ ಮಾಡಿದ್ದರು. ಬಂಧಿತರಿಂದ ಸದ್ಯ 451 ಗ್ರಾಂ‌ಮ ಚಿನ್ನ, 819 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಮೂರು ಕೆಜಿಯಲ್ಲಿ 451 ಗ್ರಾಂ ಬಂಗಾರ ಇತ್ತು, ಉಳಿದೆಲ್ಲಾ‌ ಬಂಗಾರ ನಕಲಿ ಬಂಗಾರ ಎಂದು ತಿಳಿದು ಬಂದಿದೆ.

Read More
Next Story