
ಸಾಂದರ್ಭಿಕ ಚಿತ್ರ
ಪೊಲೀಸರ ಸೋಗಿನಲ್ಲಿ ಟೆಕ್ಕಿಗಳ ದರೋಡೆಗೆ ಯತ್ನ: ಜಿಮ್ ಟ್ರೇನರ್ ಸೇರಿ 6 ಮಂದಿ ಖದೀಮರು ಅರೆಸ್ಟ್
ಪಾರ್ಟಿಯಲ್ಲಿ, ನಜಾಶ್ ಮತ್ತು ಆತನ ಸ್ನೇಹಿತ ವಿಷ್ಣು ಸಂತ್ರಸ್ತರ ಐಷಾರಾಮಿ ಜೀವನಶೈಲಿಯನ್ನು ಗಮನಿಸಿ ದರೋಡೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ನಂತರ ನಜಾಶ್ ತನ್ನ ಸಹಚರರನ್ನು ಕರೆದು ಅವರಿಗೆ ವಿಚಾರ ತಿಳಿಸಿದ್ದಾನೆ.
ಹುಟ್ಟುಹಬ್ಬದ ಪಾರ್ಟಿಗೆ ಬಂದಿದ್ದ ಸ್ನೇಹಿತನೇ, ಅಲ್ಲಿನ ಐಷಾರಾಮಿ ಜೀವನಶೈಲಿಯನ್ನು ನೋಡಿ ದರೋಡೆಗೆ ಸಂಚು ರೂಪಿಸಿದ ಆಘಾತಕಾರಿ ಘಟನೆಯೊಂದು ನಗರದಲ್ಲಿ ನಡೆದಿದೆ. ಪೊಲೀಸರ ಸೋಗಿನಲ್ಲಿ ಬಂದು ಇಬ್ಬರು ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಗಳನ್ನು ಬೆದರಿಸಿ ದರೋಡೆಗೆ ಯತ್ನಿಸಿದ ಜಿಮ್ ಟ್ರೇನರ್ ಮತ್ತು ಆತನ ಐವರು ಸಹಚರರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜಿಮ್ ಟ್ರೇನರ್ ಮೊಹಮ್ಮದ್ ನಜಾಶ್ (24) ಹಾಗೂ ಆತನ ಸಹಚರರಾದ ವಿನು ಕೆ.ಟಿ (23), ಸಾರೂನ್ ಎಂ (38), ದಿವಾಕರ್ (34), ಮಧು ಕುಮಾರ್ (32) ಮತ್ತು ಕಿರಣ್ (29) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಾರ್ಟಿಯಲ್ಲಿಯೇ ನಡೆಯಿತು ದರೋಡೆಯ ಸ್ಕೆಚ್
ಟೆಕ್ಕಿ ಯುವತಿಯರಿಬ್ಬರು ಕಳೆದ ಗುರುವಾರ ತಮ್ಮ ಮನೆಯಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ಪಶ್ಚಿಮ ಬೆಂಗಳೂರಿನ ಸಂತ್ರಸ್ತೆಯೊಬ್ಬರಿಗೆ ಜಿಮ್ ಟ್ರೇನರ್ ಮೊಹಮ್ಮದ್ ನಜಾಶ್ ಪರಿಚಯವಿದ್ದ ಕಾರಣ, ಆತನನ್ನು ಪಾರ್ಟಿಗೆ ಆಹ್ವಾನಿಸಲಾಗಿತ್ತು. ಪಾರ್ಟಿಗೆ ಬಂದಿದ್ದ ನಜಾಶ್ ಮತ್ತು ಆತನ ಸ್ನೇಹಿತ ವಿಷ್ಣು, ಯುವತಿಯರ ಮನೆಯಲ್ಲಿದ್ದ ಐಷಾರಾಮಿ ವಸ್ತುಗಳು ಹಾಗೂ ಅವರ ಜೀವನಶೈಲಿಯನ್ನು ಗಮನಿಸಿದ್ದಾರೆ. ಸುಲಭವಾಗಿ ಹಣಗಳಿಸುವ ದುರುದ್ದೇಶದಿಂದ ಅಲ್ಲೇ ದರೋಡೆಗೆ ಸಂಚು ರೂಪಿಸಿ, ತಮ್ಮ ಇತರ ಸಹಚರರಿಗೆ ಮಾಹಿತಿ ರವಾನಿಸಿದ್ದಾರೆ.
ಖಾಕಿ ಸೋಗಿನಲ್ಲಿ ಎನ್‌ಡಿಪಿಎಸ್ ಕೇಸ್ ಬೆದರಿಕೆ
ಸಂಚಿನಂತೆ ಆರೋಪಿಗಳ ಗುಂಪು ಆರಂಭದಲ್ಲಿ ಆಹಾರ ವಿತರಣಾ ಏಜೆಂಟರ (ಡೆಲಿವರಿ ಬಾಯ್ಸ್) ಸೋಗಿನಲ್ಲಿ ಅಪಾರ್ಟ್‌ಮೆಂಟ್ ಪ್ರವೇಶಿಸಿದೆ. ಬಳಿಕ ಮನೆಗೆ ನುಗ್ಗಿದ ಅವರು, ತಾವು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಮನೆಯನ್ನು ಪರಿಶೀಲಿಸುವ ನಾಟಕವಾಡಿದ್ದಾರೆ. ಅಷ್ಟೇ ಅಲ್ಲದೆ, ನಿಮ್ಮ ಮನೆಯಲ್ಲಿ ಮಾದಕ ವಸ್ತುಗಳಿವೆ ಎಂದು ಸುಳ್ಳು ಆರೋಪ ಹೊರಿಸಿ, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಕರಣವನ್ನು ಕೈಬಿಡಬೇಕಾದರೆ ತಕ್ಷಣವೇ 5 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಮೊಬೈಲ್ ಕಿತ್ತುಕೊಂಡು ಪರಾರಿ
ಗಾಬರಿಗೊಂಡ ಯುವತಿಯರು ತಮ್ಮ ಬಳಿ ಅಷ್ಟು ದೊಡ್ಡ ಮೊತ್ತದ ಹಣವಿಲ್ಲ ಎಂದು ಅಂಗಲಾಚಿದ್ದಾರೆ. ಈ ವೇಳೆ ಆರೋಪಿಗಳು ಯುವತಿಯರ ಮೊಬೈಲ್ ಫೋನ್ ಕಿತ್ತುಕೊಂಡು, "ನಾಳೆ ಬೆಳಿಗ್ಗೆ ಹಣ ವ್ಯವಸ್ಥೆ ಮಾಡಿಕೊಡಬೇಕು" ಎಂದು ತಾಕೀತು ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯಿಂದ ಕಂಗಾಲಾದ ಯುವತಿಯರು ತಮ್ಮ ಆಪ್ತ ಸ್ನೇಹಿತರ ಸಲಹೆಯ ಮೇರೆಗೆ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ಕರೆ ವಿವರಗಳನ್ನು (CDR) ಆಧರಿಸಿ ಕಾರ್ಯಾಚರಣೆ ನಡೆಸಿ, ಜಿಮ್ ಟ್ರೇನರ್ ನಜಾಶ್ ಸೇರಿದಂತೆ ಆರೂ ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

