ಪೂರೈಕೆಯ ಸವಾಲು, ಮಾಫಿಯಾದ ದರ್ಬಾರ್; ವಿಷವಾಗುತ್ತಿದೆ ಬೆಂಗಳೂರು ಮಂದಿ ಕುಡಿವ ನೀರು
x

ಪೂರೈಕೆಯ ಸವಾಲು, ಮಾಫಿಯಾದ ದರ್ಬಾರ್; ವಿಷವಾಗುತ್ತಿದೆ ಬೆಂಗಳೂರು ಮಂದಿ ಕುಡಿವ ನೀರು

ಕಾವೇರಿ 5ನೇ ಹಂತದ ಯೋಜನೆ ಬೆಂಗಳೂರಿನಮ ನೀರಿನ ದಾಹ ತಣಿಸಲು ಅದು ಸಾಕಾಗುತ್ತಿಲ್ಲ. ಕಲುಷಿತ ನೀರು, ಟ್ಯಾಂಕರ್ ಮಾಫಿಯಾ ಮತ್ತು ನಿರ್ವಹಣಾ ವೈಫಲ್ಯಗಳು ಜನಜೀವನವನ್ನು ಹೈರಾಣಾಗಿಸಿದ್ದು ಮಾತ್ರ ಕಟು ಸತ್ಯ.


Click the Play button to hear this message in audio format

ದಶಕಗಳ ಹಿಂದೆ ‘ಸರೋವರಗಳ ನಗರಿ’ ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಕಾಡಾಗಿ ಬದಲಾಗಿದೆ. ತಂತ್ರಜ್ಞಾನದಲ್ಲಿ ಜಗತ್ತನ್ನೇ ಆಳುತ್ತಿರುವ ಈ ನಗರಕ್ಕೆ ಈಗ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಕುಡಿಯುವ ನೀರು. ಸಿಲಿಕಾನ್ ಸಿಟಿಯ ಜನಸಂಖ್ಯೆ ಕೋಟಿ ದಾಟುತ್ತಿದ್ದಂತೆ, ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವು ಬೃಹತ್​ ಕಂದಕವಾಗಿ ಮಾರ್ಪಟ್ಟಿತ್ತು. ಇದೀಗ ಬೆಂಗಳೂರು ಜಲಮಂಡಳಿಯ (BWSSB) ಮಹತ್ವಾಕಾಂಕ್ಷೆಯ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡಿದ್ದರೂ, ನಗರದ ನೀರಿನ ದಾಹ ತಣಿಸಲು ಅದು ಸಾಕಾಗುತ್ತಿಲ್ಲ. ಈ ನಡುವೆ ಕಲುಷಿತ ನೀರು, ಟ್ಯಾಂಕರ್ ಮಾಫಿಯಾ ಮತ್ತು ನಿರ್ವಹಣಾ ವೈಫಲ್ಯಗಳು ಬೆಂಗಳೂರಿನ ಜನಜೀವನವನ್ನು ಹೈರಾಣಾಗಿಸಿದ್ದು ಮಾತ್ರ ಕಟು ಸತ್ಯ.

ಬೆಂಗಳೂರು ಪೂರ್ವ ಭಾಗದಲ್ಲಿರುವ (ಹೃದಯ ಭಾಗದಿಂದ 7 ಕಿ. ಮೀ ದೂರ- 20 ನಿಮಿಷ ಪ್ರಯಾಣ) ಲಿಂಗರಾಜಪುರ ಪ್ರದೇಶದಲ್ಲಿ ಕುಡಿಯುವ ನೀರಿನ ಜತೆ ಚರಂಡಿ ನೀರು ಮಿಶ್ರಣಗೊಂಡಿದ್ದು ಬೆಂಗಳೂರಿನ ನೀರು ಸರಬರಾಜು ಅವ್ಯವಸ್ಥೆಗೆ ತಾಜಾ ಉದಾಹರಣೆ. ಕಲುಷಿತ ನೀರು ಸೇವಿಸಿ ಆ ಪ್ರದೇಶದ ಕೆಎಸ್​ಎಫ್​​ಸಿ ಲೇಔಟ್​ನ ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ. ಅವರಲ್ಲಿ ಮಕ್ಕಳು, ಗರ್ಭಿಣಿಯರು, ವಯೋವೃದ್ಧರೂ ಸೇರಿಸಿದ್ದಾರೆ. ಜನರು ಎಚ್ಚೆತ್ತು ನೀರು ಕುಡಿಯುವುದಕ್ಕೆ ತಕ್ಷಣಕ್ಕೆ ನಿಲ್ಲಿಸಿದ ಕಾರಣ ಇಂದೋರ್​ನಲ್ಲಿ ನಡೆದಂತ ಪ್ರಾಣಾಪಾಯದಂತಹ ದುರಂತ ನಡೆದಿಲ್ಲ. ಆದರೆ, ಬೆಂಗಳೂರಿನ ಎಲ್ಲ ಪ್ರದೇಶಗಳಲ್ಲಿ ಕುಡಿಯುವ ನೀರು ಕುಡಿಯಲು ಸುರಕ್ಷಿತಲ್ಲ ಎಂಬುವುದು ಮತ್ತೊಮ್ಮೆ ಸಾಕ್ಷಿ ಸಮೇತ ಸಾಬೀತಾಗಿದೆ.

ದ ಫೆಡರಲ್ ಕರ್ನಾಟಕದ ವರದಿಗಾರರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ತಾವು ಎದುರಿಸಿದ ಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ನಿವಾಸಿ ರೋಜಾ ಎಂಬುವರು ಮಾತನಾಡುತ್ತಾ, 15 ದಿನಗಳಿಂದ ಪಡುತ್ತಿರುವ ಪಡಿಪಾಟಲು ವಿವರಿಸಿದ್ದಾರೆ. ತಮ್ಮ ಮಗಳು, ಮೊಮ್ಮಕ್ಕಳು ಹೇಗೆ ಅಪಾಯ ಎದುರಿಸಿದರು ಎಂಬುದನ್ನು ಹೇಳುತ್ತಾ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.

ಈ ಬಗ್ಗೆ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ಸಮಸ್ಯೆ ಆಗಿದ್ದು ಹೌದು. ಆದರೆ ತಕ್ಷಣವೇ ಸ್ಪಂದಿಸಿದ್ದೇವೆ ಎಂದಿದ್ದಾರೆ. ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ತ್ವರಿತವಾಗಿ ಸಮಸ್ಯೆಯ ಮೂಲ ಪತ್ತೆ ಹಚ್ಚಿದ ತಂಡದ ನೈಪುಣ್ಯ ಪ್ರಶಂಸನೀಯ. ಇಂತಹ ತಂತ್ರಜ್ಞಾನಾಧಾರಿತ ಕಾರ್ಯಪದ್ಧತಿಯು ಮುಂಬರುವ ದಿನಗಳಲ್ಲಿ ಜಲಮಂಡಳಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ,” ಎಂದು ಅವರು ಹೇಳಿ ನೀರು ಸರಬರಾಜು ವಿಚಾರದಲ್ಲಿ ಭರವಸೆ ಮೂಡಿಸಲು ಯತ್ನಿಸಿದ್ದಾರೆ.

ಇದು ತಾಜಾ ಉದಾಹರಣೆಯಾಗಿರುವ ಹೊರತಾಗಿಯೂ ಬೆಂಗಳೂರಿನ ಇತರ ಕಡೆಗಳಲ್ಲಿಯೂ ಆಗಾಗ ಕಲುಷಿತ ನೀರು ಕಾವೇರಿ ನೀರಿನ ಜತೆ ಸೇರಿಕೊಂಡು ಬರುತ್ತಿರುವುದು ಹೊಸತೇನಲ್ಲ. ಅದರಲ್ಲಿ ನಗರದ ಹಳೆಯ ಪ್ರದೇಶವಾಗಿರುವ ಶಿವಾಜಿನಗರವೂ ಸೇರಿದೆ. ಅಲ್ಲಿ, ಗುಜರಿ ಅಂಗಡಿ ಮಾಲೀಕರಾಗಿರುವ ಅಜ್ಮತ್ ಎಂಬುವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ನಮ್ಮ ಏರಿಯಾದಲ್ಲಿ ಈ ಸಮಸ್ಯೆ ಆಗಾಗ ಎದುರಾಗುತ್ತದೆ. ಜಲಮಂಡಳಿಯವರು ತಕ್ಷಣವೇ ಬಂದು ಪರಿಹಾರ ಒದಗಿಸುತ್ತಾರೆ. ಆದರೆ, ಕಲುಷಿತ ನೀರು ಕುಡಿದವರು ಒಂದೆರಡು ದಿನಗಳು ಆಸ್ಪತ್ರೆ ಸೇರುವುದು ಮಾಮೂಲು ಎಂದು ಹೇಳಿದ್ದಾರೆ.

ಬೆಂಗಳೂರಿನ ಸಮಸ್ಯೆಗೆ ಕಾರಣವೇನು?

2025-26ರ ಸಾಲಿನಲ್ಲಿ ಬೆಂಗಳೂರಿನ ಜಲ ಪೂರೈಕೆ ಪರಿಸ್ಥಿತಿ ಗಮನಿಸಿದರೆ, ಅಂಕಿಅಂಶಗಳೇ ಬೆಚ್ಚಿಬೀಳಿಸುವಂತಿವೆ. ನಗರದ ಒಟ್ಟು ನೀರಿನ ಬೇಡಿಕೆ ದಿನಕ್ಕೆ ಸುಮಾರು 2,600ರಿಂದ 3,400 ಎಂಎಲ್​​ಡಿ ದಾಟಿದೆ. ನಗರಕ್ಕೆ ಕಾವೇರಿ ನದಿಯಿಂದ ಪೂರೈಕೆಯಾಗುತ್ತಿರುವ ಒಟ್ಟು ನೀರಿನ ಸಾಮರ್ಥ್ಯ (ಕಾವೇರಿ 5ನೇ ಹಂತದ ಸೇರ್ಪಡೆಯೊಂದಿಗೆ) ಸುಮಾರು 2,225 ಎಂ.ಎಲ್.ಡಿ ಮಾತ್ರ. ಹೀಗಾಗಿ ಪ್ರತಿದಿನ ನಗರಕ್ಕೆ ಕನಿಷ್ಠ 400 ರಿಂದ 1,100 ಎಂಎಲ್​ಡಿ ನೀರಿನ ಕೊರತೆಯಿದೆ. ಇದು ಲೆಕ್ಕಾಚಾರವಾಗಿದ್ದರೂ, ನೀರಿನ ಪೋಲು ಹಾಗೂ ಕಳ್ಳತನ ಸೇರಿ ಜನರನ್ನು ತಲುಪುತ್ತಿರುವ ವಾಸ್ತವ ಲೆಕ್ಕಾಚಾರ ಬೇರೆಯೇ ಇದೆ. ಅದರ ಪತ್ತೆಯೂ ಸುಲಭವಲ್ಲ.

ಈ ಕೊರತೆಯೇ ನಗರದಲ್ಲಿ ಟ್ಯಾಂಕರ್ ಮಾಫಿಯಾ ಮತ್ತು ಅನಧಿಕೃತ ಬೋರ್‌ವೆಲ್‌ಗಳು ಬೆಳೆಯಲು ಮೂಲ ಕಾರಣವಾಗಿದೆ. ಕಾವೇರಿ ನೀರು ತಲುಪದ 110 ಹಳ್ಳಿಗಳ ವ್ಯಾಪ್ತಿ ಮತ್ತು ಹೊಸದಾಗಿ ಬೆಳೆಯುತ್ತಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಅಭಾವ ದಟ್ಟವಾಗಿದೆ. ಈ ಎಲ್ಲ ಕಾರಣಗಳಿಂದ ನಗರದ ನೀರು ಕಲುಷಿತಗಳ್ಳುತ್ತಿದೆ ಹಾಗೂ ಜನರಿಗೆ ತಾವು ಸೇವಿಸುತ್ತಿರುವ ನೀರು ಸುರಕ್ಷಿತವಾಗಿಲ್ಲ ಎಂದು ಅನಿಸಲು ಆರಂಭವಾಗಿದೆ.

ಕಾವೇರಿ ನೀರಿನ ಶುದ್ಧೀಕರಣ ಉತ್ತಮವೇ?

ಹೌದು, ದಾಖಲೆಗಳಲ್ಲಿ ಅದು ನೂರಕ್ಕೆ 100ರಷ್ಟು ನಿಖರ. ಅದು ಶುರುವಾಗುವುದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ.ಕೆ. ಹಳ್ಳಿಯಲ್ಲಿರುವ ಜಲಮಂಡಳಿಯ ಶುದ್ಧೀಕರಣ ಘಟಕದಿದೆ. ಅದು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದು, ಕಾವೇರಿ ನದಿಯಿಂದ ಸಂಗ್ರಹಿಸಿದ ನೀರು ಬೆಂಗಳೂರಿನ ಮನೆಗಳಿಗೆ ತಲುಪುವ ಮೊದಲು ಎಂಟು ಅತ್ಯಾಧುನಿಕ ಮತ್ತು ಕಟ್ಟುನಿಟ್ಟಿನ ಹಂತಗಳ ಶುದ್ಧೀಕರಣ ಪ್ರಕ್ರಿಯೆಗೆ ಒಳಪಡುತ್ತದೆ.

ಜಲಮಂಡಳಿಯ ತಾಂತ್ರಿಕ ಅಧಿಕಾರಿಯೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ನೀಡಿದ ಮಾಹಿತಿಯಂತೆ, ನದಿಯಿಂದ ಬಂದ ನೀರನ್ನು ದೊಡ್ಡ ಕಾರಂಜಿಗಳ ಮೂಲಕ ಗಾಳಿಗೆ ಒಡ್ಡಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿ ಕೆಟ್ಟ ವಾಸನೆ ತೆಗೆಯಲಾಗತ್ತದೆ. ನೀರಿನಲ್ಲಿರುವ ಪಾಚಿ, ಸೂಕ್ಷ್ಮಾಣು ಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಮೊದಲ ಹಂತದಲ್ಲೇ ನಾಶಮಾಡಲು ಕ್ಲೋರಿನ್ ಬೆರೆಸಲಾಗುತ್ತದೆ. ನೀರಿನಲ್ಲಿರುವ ಅತಿ ಸಣ್ಣ ಮಣ್ಣಿನ ಕಣಗಳನ್ನು ಒಟ್ಟುಗೂಡಿಸಲು ‘ಆಲಂ’ (Alum) ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ನೀರನ್ನು ನಿಧಾನವಾಗಿ ಕಲಕಿ ಅಶುದ್ಧತೆಯನ್ನು ಪ್ರತ್ಯೇಕ ಮಾಡಲಾಗುತ್ತದೆ. ಅಶುದ್ಧತೆಯ ದೊಡ್ಡದಾದ ಕಣಗಳು ಗುರುತ್ವಾಕರ್ಷಣೆಯಿಂದ ಕೆಳಗೆ ಹೋಗುವಂತೆ ಮಾಡಿ, ಮೇಲಿರುವ ತಿಳಿ ನೀರನ್ನು ಪ್ರತ್ಯೇಕಿಸಲಾಗುತ್ತದೆ ಮರಳು, ಕಲ್ಲು ಮತ್ತು ಇದ್ದಿಲಿನ ವಿವಿಧ ಪದರಗಳ ಮೂಲಕ ನೀರನ್ನು ಹಾಯಿಸಿ ಅತ್ಯಂತ ಸೂಕ್ಷ್ಮ ಕಲ್ಮಶಗಳನ್ನು ಶೋಧಿಸಲಾಗುತ್ತದೆ. ನೀರು ಪೈಪ್‌ಗಳ ಮೂಲಕ ನಿಮ್ಮ ಮನೆ ತಲುಪುವವರೆಗೆ ಯಾವುದೇ ಹೊಸ ಕ್ರಿಮಿಗಳು ಉತ್ಪತ್ತಿಯಾಗದಂತೆ ಅಂತಿಮವಾಗಿ ಕ್ಲೋರಿನ್ ಸೇರಿಸಲಾಗುತ್ತದೆ. ನಗರದ ವಿವಿಧ ಸಂಗ್ರಹಾಗಾರಗಳಲ್ಲಿ ಗುಣಮಟ್ಟ ಪರೀಕ್ಷಿಸಿ, ಅಗತ್ಯವಿದ್ದರೆ ಮತ್ತೊಮ್ಮೆ ಕ್ಲೋರಿನ್ ಪ್ರಮಾಣ ಸೇರಿಸಲಾಗುತ್ತದೆ.

ಇಷ್ಟೆಲ್ಲಾ ಪ್ರಕ್ರಿಯೆಗಳಿಗೆ ಜಲಮಂಡಳಿಯು, ಕೇಂದ್ರ ಆರೋಗ್ಯ ಇಂಜಿನಿಯರಿಂಗ್ ಸಂಸ್ಥೆಯ (CPHEEO) ಮಾನದಂಡಗಳನ್ನು ಪಾಲಿಸುತ್ತದೆ. ಇಷ್ಟಾದರೂ ಕಲುಷಿತ ನೀರು ಹೇಗೆ ಮನೆಗೆ ತಲುಪುತ್ತದೆ ಎಂಬ ಅನುಮಾನಕ್ಕೆ ಉತ್ತರ ಇಲ್ಲಿದೆ. ನೀರು ನಗರದ ಹಳೆಯ ಮತ್ತು ತುಕ್ಕು ಹಿಡಿದ ಪೈಪ್‌ಲೈನ್‌ಗಳ ಮೂಲಕ ಸಾಗುವಾಗ ಕಲುಷಿತಗೊಳ್ಳುತ್ತಿದೆ.

ಜಲ ಸಂಗ್ರಹಾಗಾರಗಳ ಸ್ಥಿತಿ ಮತ್ತು ನಿರ್ವಹಣೆ

ನಗರದ ಬಾಯಾರಿಕೆ ನೀಗಿಸಲು ಜಲಮಂಡಳಿಯು ಬೃಹತ್ ವ್ಯವಸ್ಥೆ ಹೊಂದಿದೆ. ನಗರದಾದ್ಯಂತ ಒಟ್ಟು 70 ರಿಂದ 84 ನೆಲಮಟ್ಟದ ಸಂಗ್ರಹಾಗಾರಗಳು ಇವುಗಳ ಸಂಗ್ರಹ ಸಾಮರ್ಥ್ಯ ಸುಮಾರು 1,067 ಮಿಲಿಯನ್ ಲೀಟರ್‌ಗಳಿಗಿಂತಲೂ ಹೆಚ್ಚಿದೆ. ಎತ್ತರದ ಪ್ರದೇಶಗಳಿಗೆ ನೀರು ಪೂರೈಸಲು 59ಕ್ಕೂ ಹೆಚ್ಚು ಮೇಲ್ಮಟ್ಟದ ಟ್ಯಾಂಕ್‌ಗಳನ್ನು ಬಳಸಲಾಗುತ್ತಿದೆ. ನೀರನ್ನು ತಳ್ಳಲು 62ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಂಗ್ರಹಾಗಾರಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಸಂಗ್ರಹಾಗಾರಗಳ ತಳದಲ್ಲಿ ಮಣ್ಣು ಮತ್ತು ಪಾಚಿ ಸಂಗ್ರಹವಾಗಿ ನೀರು ಕಲುಷಿತಗೊಳ್ಳುತ್ತಿದೆ.

ಕಲುಷಿತ ನೀರಿನ ಕರಾಳ ಅಧ್ಯಾಯಗಳು

ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕಲುಷಿತ ನೀರಿಗೆ ಸಂಬಂಧಿಸಿದ ಅನೇಕ ಘಟನೆಗಳು ಸಂಭವಿಸಿವೆ. ಇದರಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಗರದ ದಕ್ಷಿಣ ಭಾಗದ ಪ್ರಮುಖ ಬಡಾವಣೆಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಪೈಪ್‌ಲೈನ್ ಸೋರಿಕೆಯಿಂದ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣಗೊಂಡು ಹಲವರು ಅತಿಸಾರದಿಂದ ಬಳಲಿದ್ದರು. ನೂರಾರು ಜನರು ಟೈಫಾಯ್ಡ್ ರೋಗಕ್ಕೆ ತುತ್ತಾಗಿದ್ದರು.

ಪುಲಕೇಶಿನಗರದ ಪ್ರದೇಶಧಲ್ಲಿ ಕಾವೇರಿ ನೀರಿನ ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ ಮಲಮೂತ್ರದಲ್ಲಿ ಕಂಡುಬರುವ ‘ಇ-ಕೋಲಿ’ (E. coli) ಬ್ಯಾಕ್ಟೀರಿಯಾ ಪತ್ತೆಯಾಗಿತ್ತು. 30ಕ್ಕೂ ಹೆಚ್ಚು ಜನರು ತೀವ್ರ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದರು. ಶಾಂತಿನಗರದ ನಂಜಪ್ಪ ರಸ್ತೆಯ ನಿವಾಸಿಗಳು ಕಳೆದ 10 ವರ್ಷಗಳಿಂದ ಒಳಚರಂಡಿ ಮಿಶ್ರಿತ ನೀರನ್ನೇ ಸೇವಿಸುತ್ತಿದ್ದಾರೆ ಎಂಬುದು ಕಟು ಸತ್ಯ,. 250 ಮನೆಗಳ ನಿವಾಸಿಗಳಿಗೆ ಚರ್ಮ ರೋಗಗಳು ಕಾಯಂ . 2024ರ ಏಪ್ರಿಲ್​​ನಲ್ಲಿ ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಶೇ. 40ರಷ್ಟು ಏರಿಕೆ ಕಂಡಿದ್ದವು. ನೀರಿನ ಮೂಲಗಳು ಕಲುಷಿತಗೊಂಡಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು.

ಟ್ಯಾಂಕರ್ ಮಾಫಿಯಾ ಮತ್ತು ಕಲುಷಿತ ಕೆರೆಗಳ ದಂಧೆ

ನಗರದ ನೀರಿನ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಟ್ಯಾಂಕರ್ ಮಾಫಿಯಾ ಇಂದು ಕಬಂಧ ಬಾಹು ಚಾಚಿದೆ. ನಗರದಲ್ಲಿ ಸುಮಾರು 3,500 ಟ್ಯಾಂಕರ್‌ಗಳು ಓಡಾಡುತ್ತಿದ್ದು, ಈ ಪೈಕಿ ಕೇವಲ ಅರ್ಧದಷ್ಟು ಮಾತ್ರ ಅಧಿಕೃತವಾಗಿ ನೋಂದಣಿಯಾಗಿವೆ. ಹೆಸರು ಹೇಳಲು ಇಚ್ಛಿಸದ ಜಲ ಮಂಡಳಿ ಅಧಿಕಾರಿಯೊಬ್ಬರು, ದ ಫೆಡರಲ್ ಕರ್ನಾಟಕ ಜತೆ ಮಾತನಾಡುತ್ತಾ, ಇದು ರಾಜಕಾರಣಿಗಳ ಬೆಂಬಲವಿಲ್ಲದೆ ಸಾಧ್ಯವೇ ಇಲ್ಲ ಎನ್ನುತ್ತಾರೆ.

ಇನ್ನೂ ಭೀಕರ ಸಂಗತಿಯೆಂದರೆ, ಕೆಲವು ಖಾಸಗಿ ಟ್ಯಾಂಕರ್ ಮಾಲೀಕರು ಬೆಳ್ಳಂದೂರು, ವರ್ತೂರು, ಯೆಲೆ ಮಲ್ಲಪ್ಪ ಶೆಟ್ಟಿ ಮತ್ತು ಕಲ್ಕೆರೆ ಅಂತಹ ವಿಷಪೂರಿತ ಕೆರೆಗಳಿಂದ ನೀರನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಕೈಗಾರಿಕಾ ರಾಸಾಯನಿಕ ತ್ಯಾಜ್ಯ ಮತ್ತು ಚರಂಡಿ ನೀರು ಸೇರುವ ಈ ಕೆರೆಗಳ ನೀರನ್ನು ಕೇವಲ ಬ್ಲೀಚಿಂಗ್ ಪೌಡರ್ ಹಾಕಿ ಜನವಸತಿ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ರಾತ್ರಿ ವೇಳೆ ನಡೆಯುವ ಈ ದಂಧೆಯನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಐಟಿ ಕಂಪನಿಗಳು ಹೆಚ್ಚಿರುವ ಹೊರಮಾವು, ಕೆ.ಆರ್. ಪುರ ಮತ್ತು ಮಹದೇವಪುರ ಭಾಗಗಳಲ್ಲಿ ಈ ಅಪಾಯಕಾರಿ ನೀರು ಜನರ ಹೊಟ್ಟೆ ಸೇರುತ್ತಿದೆ. ಕೃತಕ ಅಭಾವ ಸೃಷ್ಟಿಸಿ, ಬೇಸಿಗೆಯಲ್ಲಿ 6,000 ಲೀಟರ್ ನೀರಿಗೆ 1,500ರಿಂದ 3,000 ರೂಪಾಯಿವರೆಗೆ ವಸೂಲಿ ಮಾಡುತ್ತಿದೆ. ಸರ್ಕಾರ ದರ ನಿಗದಿಗೆ ಬೆಲೆಯೇ ಇಲ್ಲ.

ಎಲ್ಲೆಲ್ಲಿ ನೀರಿನ ಸಮಸ್ಯೆಗಳು ಹೆಚ್ಚು

ನಗರ ಯೋಜನೆ ಹಾಗೂ ಜಲ ಪರಿಣತರು ಹೇಳುವ ಪ್ರಕಾರ, ಐಟಿ ಹಬ್​ ಮಹದೇವಪುರ ಮತ್ತು ಕೆ.ಆರ್. ಪುರದಲ್ಲಿ ಕಾವೇರಿ ನೀರಿನ ಸಂಪರ್ಕಕ್ಕಿಂತ ಟ್ಯಾಂಕರ್ ಅವಲಂಬನೆಯೇ ಹೆಚ್ಚು. ಕೆರೆ ನೀರಿನ ಪೂರೈಕೆ ಮತ್ತು ಅಂತರ್ಜಲದಲ್ಲಿ ಫ್ಲೋರೈಡ್ ಹಾಗೂ ನೈಟ್ರೇಟ್ ಅಂಶ ಅಧಿಕವಿರುವ ದೂರುಗಳು ಹೆಚ್ಚಾಗಿವೆ.

ಕೇಂದ್ರ ಬೆಂಗಳೂರಿನ ಶಿವಾಜಿನಗರ, ಹಲಸೂರು ಮತ್ತು ಚಿಕ್ಕಪೇಟೆಯಂತಹ ಪ್ರದೇಶಗಳಲ್ಲಿ ದಶಕಗಳಷ್ಟು ಹಳೆಯದಾದ ಮತ್ತು ತುಕ್ಕು ಹಿಡಿದ ಪೈಪ್‌ಲೈನ್‌ಗಳಿವೆ. ಈ ಪೈಪ್‌ಗಳ ಪಕ್ಕದಲ್ಲೇ ಚರಂಡಿಗಳಿರುವುದರಿಂದ ಲೀಕೇಜ್ ಉಂಟಾದಾಗ ನೀರು ಕಲುಷಿತಗೊಳ್ಳುವುದು ಸಾಮಾನ್ಯ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.

ಉತ್ತರ ಬೆಂಗಳೂರಿನ ಯಲಹಂಕ ಮತ್ತು ಬ್ಯಾಟರಾಯನಪುರ ಭಾಗಗಳಲ್ಲಿ ನೀರಿನಲ್ಲಿ ಮಣ್ಣಿನ ಅಂಶ ಮತ್ತು ಕೆಟ್ಟ ವಾಸನೆ ಬರುತ್ತಿದೆ ಎಂಬ ಆರೋಪಗಳಿವೆ. ಇಲ್ಲಿನ ಹೊಸ ಬಡಾವಣೆಗಳಲ್ಲಿ ನೀರಿನ ಪೂರೈಕೆಯಲ್ಲಿ ತಾರತಮ್ಯ ಹೆಚ್ಚಿದೆ. ದಾಸರಹಳ್ಳಿ ಮತ್ತು ಪೀಣ್ಯದ ಕೈಗಾರಿಕಾ ವಲಯವಾಗಿರುವುದರಿಂದ ಇಲ್ಲಿನ ಬೋರ್‌ವೆಲ್ ನೀರು ರಾಸಾಯನಿಕಗಳಿಂದ ಕೂಡಿದೆ.

5 ರೂಪಾಯಿ ನೀರಿನ ಕೇಂದ್ರಗಳು ಸರಿಯಾಗಿವೆಯೇ?

ಬಡವರಿಗೆ ಅನುಕೂಲವಾಗಲೆಂದು ಜನಪ್ರತಿನಿಧಿಗಳು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಆರಂಭಿಸಿರುವ 5 ರೂಪಾಯಿ ಕೊಟ್ಟು ಪಡೆಯುವ ಶುದ್ಧ ಕುಡಿಯುವ ನೀರಿನ ಕೇಂದ್ರಗಳು ನಗರದಾದ್ಯಂತ ಜನಪ್ರಿಯವಾಗಿವೆ. ಖಾಸಗಿ ಕ್ಯಾನ್ (40 ರೂಪಾಯಿ) ನೀರಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ದರ. ಆದರೂ ಇದರ ನಿರ್ವಹಣೆಯಲ್ಲಿ ಗಂಭೀರ ಲೋಪಗಳಿವೆ. ಹೆಚ್ಚಿನ ಕೇಂದ್ರಗಳಲ್ಲಿ ಫಿಲ್ಟರ್‌ಗಳನ್ನು ಸಕಾಲಕ್ಕೆ ಬದಲಿಸುತ್ತಿಲ್ಲ. ಇದರಿಂದ ಶುದ್ಧ ನೀರಿಗಿಂತ ಅಶುದ್ಧ ನೀರೇ ಹೆಚ್ಚು ಪೂರೈಕೆಯಾಗುತ್ತಿದೆ ಎಂದು ನೀರು ಬಳಕೆದಾರರ ಆರೋಪ.

ಇದೇ ನೀರನ್ನು ಅವಲಂಬಿಸಿರುವ ವಿಜಯನಗರ ಪ್ರದೇಶದ ಚೇತನ್ ಅವರ ಪ್ರಕಾರ, ಈ ನೀರು ಶುದ್ಧ ಎಂದು ನಂಬಿದ್ದೇವೆ. ಅಂಗಡಿಯಲ್ಲಿ ಸಿಗುವ ನೀರಿನ ಬೆಲೆಯನ್ನು ಹೋಲಿಕೆ ಮಾಡಿದರೆ ಇದು ಕನಿಷ್ಠ. ಹೀಗಾಗಿ ದೊಡ್ಡ ಆದಾಯ ಇಲ್ಲದ ನನಗೆ ಬಲುಪಕಾರಿ. ಆದರೆ, ಬೇಸಿಗೆಯಲ್ಲಿ ಅಂದರೆ ನೀರಿಗೆ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಶುದ್ಧತೆ ಬಗ್ಗೆ ನಮಗೆ ಅನುಮಾನ ಬರುತ್ತದೆ. ಮತ್ತೆ ಇಂಥ ಕೇಂದ್ರಗಳಲ್ಲಿ ಫಿಲ್ಟರ್​ ಬದಲಿಸಿದ್ದನ್ನು ನಾನು ನೋಡಿಯೇ ಇಲ್ಲ ಎಂದು ಹೇಳಿದ್ದಾರೆ.

ರಾಜರಾಜೇಶ್ವರಿನಗರದ ಸಂಜಯ್​ ಎಂಬುವರ ಪ್ರಕಾರ, ನಮ್ಮ ಏರಿಯಾದಲ್ಲಿನ ಇಂಥ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ನಾವು ಹಾಕುವ 5 ರೂಪಾಯಿ ಕಾಯಿನ್​ ವಿದ್ಯುತ್ ಬಿಲ್ ಹಾಗೂ ನಿರ್ವಹಣೆಗೆ ವೆಚ್ಚವಾಗುತ್ತಿದೆ. ನಮಗೆ ಈ ನೀರೇ ಆಸರೆ ಎಂದು ಹೇಳುತ್ತಾರೆ.

ಇದು ಬೋರ್​ವೆಲ್​ನಿಂದ ಪಡೆದಿರುವ ನೀರು. ಅಲ್ಲದೆ, ಒಂದು ಲೀಟರ್ ನೀರನ್ನು ಶುದ್ಧೀಕರಿಸುವಾಗ ಸುಮಾರು ಎರಡು ಲೀಟರ್ ನೀರು ಪೋಲಾಗುತ್ತಿದೆ ಎಂಬ ಆರೋಪಗಳಿವೆ. ವ್ಯರ್ಥ ನೀರನ್ನು ಮರುಬಳಕೆ ಮಾಡುವ ಯಾವುದೇ ವ್ಯವಸ್ಥೆ ಬಹುತೇಕ ಕೇಂದ್ರಗಳಲ್ಲಿ ಇಲ್ಲ. ಇಂಥಹ ಹೆಚ್ಚಿನ ಕೇಂದ್ರಗಳು ಸದಾ ದುರಸ್ತಿಯಲ್ಲಿರುತ್ತವೆ ಅಥವಾ ವಿದ್ಯುತ್ ಸಮಸ್ಯೆ ಎಂಬ ನೆಪವೊಡ್ಡಿ ಮುಚ್ಚಿರುತ್ತವೆ.

ಜನರ ಬೇಡಿಕೆಗಳೇನು?

ನಗರದ ನೀರು ಕಲುಷಿತಗೊಳ್ಳುವುದನ್ನು ತಪ್ಪಿಸಲು ನಾಗರಿಕರು ಹಲವು ಸಲಹೆಗಳನ್ನು ನೀಡುತ್ತಾರೆ. ಹಳೆಯ ಮತ್ತು ತುಕ್ಕು ಹಿಡಿದ ಪೈಪ್‌ಲೈನ್‌ಗಳನ್ನು ಯುದ್ಧೋಪಾದಿಯಲ್ಲಿ ಬದಲಾಯಿಸಬೇಕು. ಸೀವೇಜ್ ಪೈಪ್ ಮತ್ತು ಕುಡಿಯುವ ನೀರಿನ ಪೈಪ್ ನಡುವೆ ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು. ಪ್ರತಿಯೊಂದು ಟ್ಯಾಂಕರ್‌ಗೆ ಜಿಪಿಎಸ್ ಮತ್ತು ಕ್ಯೂಆರ್ ಕೋಡ್ ಕಡ್ಡಾಯಗೊಳಿಸಬೇಕು. ನೀರಿನ ಮೂಲವನ್ನು ಪರೀಕ್ಷಿಸಿದ ನಂತರವೇ ಪೂರೈಕೆಗೆ ಅನುಮತಿ ನೀಡಬೇಕು. ಕೆರೆಗಳಿಗೆ ಚರಂಡಿ ನೀರು ಸೇರುವುದನ್ನು ತಡೆಯಬೇಕು. ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳುತ್ತಾಎರ.

ನಾಗರಬಾವಿಯ ಬ್ರಹ್ಮಗಿರಿ ಬಿಡಿಎ ಅಪಾರ್ಟ್​ಮೆಂಟ್​​ನ ಅಸೋಶಿಯೇಶನ್ ಮಾಜಿ ಅಧ್ಯಕ್ಷ ಸುದರ್ಶನ್ ಅವರು ದ ಫೆಡರಲ್ ಕರ್ನಾಟಕ ಪ್ರಕಾರ, ಜಲಮಂಡಳಿ ಬಿಲ್​ ಪಡೆಯುವುದನ್ನು ಮಾತ್ರ ಗುರಿಯಾಗಿಸಬಾರದು. ಶುದ್ಧ ಕುಡಿಯುವ ನೀರು ಪ್ರತಿ ಮನೆಗೂ ತಲುಪುವಂತೆ ನೋಡಿಕೊಳ್ಳಬೇಕು. ಹೀಗಾದರೆ ಮಾತ್ರ ಸುಂದರ ಬೆಂಗಳೂರು ಇನ್ನಷ್ಟ ಆರೋಗ್ಯಕರ ಹಾಗೂ ಸ್ವಚ್ಛವಾಗಲಿದೆ.
Read More
Next Story