Ground Report:  ಬೆಂಗಳೂರಿನಲ್ಲಿ ತಪ್ಪಿದ ಇಂದೋರ್‌ ಮಾದರಿ ದುರಂತ; ಕಲುಷಿತ ನೀರಿನಿಂದ ಲಿಂಗರಾಜಪುರ ಹೈರಾಣ
x

ಲಿಂಗರಾಜಪುರಂನಲ್ಲಿ ಸ್ಥಳೀಯರೊಬ್ಬರು ಕಲುಷಿತ ನೀರನ್ನು ತೋರಿಸುತ್ತಿರುವುದು

Ground Report: ಬೆಂಗಳೂರಿನಲ್ಲಿ ತಪ್ಪಿದ ಇಂದೋರ್‌ ಮಾದರಿ ದುರಂತ; ಕಲುಷಿತ ನೀರಿನಿಂದ ಲಿಂಗರಾಜಪುರ ಹೈರಾಣ

15 ದಿನಗಳ ಹಿಂದೆ ಕಲುಷಿತ ನೀರು ಬರುತ್ತಿರುವುದನ್ನು ಗಮನಿಸಿದ ಕೂಡಲೇ ಎಲ್ಲ ಸ್ಥಳೀಯರು ಜಲಮಂಡಳಿ ಸರಬರಾಜು ಮಾಡುವ ನೀರಿನ ಬಳಕೆ ನಿಲ್ಲಿಸಿದ್ದರು. ಆದ್ದರಿಂದಲೇ ಇಂದೋರ್‌ ಮಾದರಿಯ ದುರಂತವೊಂದು ದೂರವಾಗಿದೆ.


ಬೆಂಗಳೂರಿನ ಲಿಂಗರಾಜಪುರದ ಕೆಎಸ್‌ಎಫ್‌ಸಿ ಬಡಾವಣೆಯಲ್ಲಿ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಒಳಚರಂಡಿ ನೀರು ಮಿಶ್ರಣವಾಗುತ್ತಿದ್ದು, ನಿವಾಸಿಗಳ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗಿದೆ. 30-35 ವರ್ಷಗಳ ಹಳೆಯ ಪೈಪ್‌ಗಳಿಂದ ಕಪ್ಪು ಬಣ್ಣದ, ದುರ್ಗಂಧದ ನೀರು ಸರಬರಾಜು ಆಗುತ್ತಿರುವುದು ಗೊತ್ತಾದ ಕೂಡಲೇ ಸ್ಥಳೀಯರು ಜಲಮಂಡಳಿ ನೀರಿನ ಬಳಕೆ ನಿಲ್ಲಿಸಿ, ಖಾಸಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇಂದೋರ್‌ನಲ್ಲಿ ಕಲುಷಿತ ನೀರಿನಿಂದ ನಡೆದ ದುರಂತದ ನೆನಪುಗಳು ಇಲ್ಲಿನ ನಿವಾಸಿಗಳನ್ನು ಭಯಭೀತರನ್ನಾಗಿ ಮಾಡಿವೆ. ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದರೂ, ಶಾಶ್ವತ ಪರಿಹಾರಕ್ಕಾಗಿ ಅವರು ನಿರೀಕ್ಷೆಯಲ್ಲಿದ್ದಾರೆ.

ದ ಫೆಡರಲ್​ ಕರ್ನಾಟಕ ತಂಡದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರು ಪೂರ್ವ ಭಾಗದಲ್ಲಿರುವ ನಗರದ ಹೃದಯ ಭಾಗದಿಂದ 20 ನಿಮಿಷಗಳ ಪ್ರಯಾಣ (7 ಕಿ.ಮೀ) ಲಿಂಗರಾಜಪುರ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಜನರು ಎದುರಿಸುತ್ತಿರುವ ಒಂದೊಂದು ಸಮಸ್ಯೆಗಳು ಬಯಲಾದವು.

ಲಿಂಗರಾಜಪುರಂನಲ್ಲಿ ಕಲುಷಿತ ನೀರು ಸೇರುತ್ತಿದ್ದ ಪೈಪ್‌ಲೈನ್‌ ಅನ್ನು ದುರಸ್ತಿ ಮಾಡುತ್ತಿರುವುದು

ಮಕ್ಕಳಿಗೆ ಜಲಮಂಡಳಿ ನೀರೇ ಕುಡಿಸುತ್ತಿದ್ದೆವು...

ಲಿಂಗರಾಜಪುರದ ಕೆಎಸ್‌ಎಫ್‌ಸಿ ನಿವಾಸಿ ರೋಜಾ (ಅವರ ಮೊಮ್ಮಗನಿಗೆ 1 ವರ್ಷ, ಮೊಮ್ಮಳಿಗೆ 7 ವರ್ಷ) ಮಾತನಾಡುತ್ತಾ “ಜಲಮಂಡಳಿಯವರು ಬಿಡುವ ನೀರನ್ನೇ ಮಕ್ಕಳಿಗೆ ಕುಡಿಸುತ್ತಿದ್ದೆವು. ಈಗ ನೀರು ಕಲುಷಿತವಾಗಿರುವುದರಿಂದ ಅನಾರೋಗ್ಯದ ಭೀತಿ ಎದುರಾಗಿದೆ. ಇಂದೋರ್‌ನಲ್ಲಿ ಸಂಭವಿಸಿದ ದುರಂತವೇ ಕಣ್ಣ ಮುಂದೆ ಬರುತ್ತಿದೆ. ನನಗೆ ಹೊಟ್ಟೆ ತೊಳೆಸುವುದು, ಅತಿಸಾರವಾಗುತ್ತಿತ್ತು. ನಾನು ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದೇನೆ., 15 ದಿನಗಳಿಂದ ಈ ಸಮಸ್ಯೆಯಿಂದ ಹೈರಾಣಾಗಿದ್ದೇವೆ.” ಎಂದ ಅವರು ಅವರು ಬಾಟಲಿಯಲ್ಲಿ ಕಪ್ಪು ಬಣ್ಣದ ನೀರನ್ನು ತೋರಿಸಿ ಇಂದು ಜಲಮಂಡಳಿಯ ನಲ್ಲಿಯಲ್ಲಿ ಬರುತ್ತಿರುವ ನೀರು ಎಂದರು.

ಸ್ಥಳೀಯ ನಿವಾಸಿ ಮೋಸೆಸ್ ಎಂಬುವರು ಮಾತನಾಡಿ “35 ವರ್ಷದಿಂದ ಜಲ ಮಂಡಳಿ ಹಳೆಯ ಪೈಪ್ ಬದಲಾಯಿಸಿಲ್ಲ. ಕುಡಿಯುವ ನೀರಿನ ಪೈಪ್‌ನಲ್ಲಿ ಕೊಳಚೆ ನೀರು ಬರುತ್ತಿದೆ. ನನ್ನ ಸೊಸೆ ಗರ್ಭಿಣಿ, ಅವಳಿಗೆ ನಿತ್ಯ ಅತಿಸಾರವಾಗುತ್ತಿತ್ತು. ನನ್ನ ತಾಯಿಗೆ ಹೊಟ್ಟೆನೋವು ಇತ್ತು. ಇನ್ನು ವೃತ್ತಿಯಲ್ಲಿ ವೈದ್ಯೆಯಾಗಿರುವ ನನ್ನ ಮಗಳಿಗೂ ಹೊಟ್ಟೆನೋವು ಕಾಣಿಸಿಕೊಂಡ ನಂತರ ಇದು ನೀರಿನ ಸಮಸ್ಯೆ ಎಂಬುದು ಮನವರಿಕೆಯಾಯಿತು. ಬಡಾವಣೆ ನಿವಾಸಿಗಳ ವಾಟ್ಸ್​ಆ್ಯಪ್​ ಗುಂಪಿನಲ್ಲಿ ನೀರು ಕಲುಷಿತದ ಬಗ್ಗೆ ಪ್ರಸ್ತಾವವಾದ ಮೇಲೆಯೇ ಏನಾಗಿದೆ ಎಂಬುದು ಗೊತ್ತಾಯಿತು.” ಎಂದು ಹೇಳಿದ್ದಾರೆ.

ಹಳೆಯ ಪೈಪ್‌ಲೈನ್‌ಗಳು: ಮುಖ್ಯ ಕಾರಣ

ಸ್ಥಳೀಯರ ಪ್ರಕಾರ, ಲಿಂಗರಾಜಪುರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು 30-35 ವರ್ಷಗಳ ಹಳೆಯದ್ದು. ಒಳಚರಂಡಿ ಪಕ್ಕದಲ್ಲೇ ಕಾವೇರಿ ನೀರಿನ ಪೈಪ್ ಹಾಕಿರುವುದರಿಂದ ಪದೇಪದೆ ಒಳಚರಂಡಿ ನೀರು ಮಿಶ್ರಣವಾಗುತ್ತದೆ. ಅನ್ನಪೂರ್ಣ ಎಂಬುವರು ಸಮಸ್ಯೆಯನ್ನು ವಿವರಿಸುತ್ತಾ “ಮನೆಯ ಸಂಪ್‌ಗೆ ಬರುವ ನೀರು ಸ್ವಲ್ಪ ವಾಸನೆ ಇದ್ದ ಕಾರಣ ಕೊಳಾಯಿ ಪರಿಶೀಲಿಸಿದೆ. ಕಪ್ಪು ನೀರು ಬರುತ್ತಿತ್ತು. ಕೂಡಲೇ ಕೊಳಾಯಿ ಬಂದ್ ಮಾಡಿದ್ದು, ಅಂಗಡಿಯಿಂದ ಕ್ಯಾನ್​ ನೀರು ತರಿಸಿಕೊಳ್ಳುತ್ತಿದ್ದೇವೆ. ಕುಡಿಯುವ ನೀರಿನ ಪೈಪ್ ಹಾಕಿ 30 ವರ್ಷಗಳಾಗಿದೆ. ಅದರಲ್ಲಿ ಕಸ ತುಂಬಿಕೊಂಡಿದೆ. ಹೊಸ ಪೈಪ್‌ಗಳನ್ನು ಹಾಕಬೇಕು. ಇಂತಹ ನೀರನ್ನು ಬಳಸುವುದು ಹೇಗೆ? ಅಡುಗೆ ಮಾಡುವುದಕ್ಕೂ ಆಗುವುದಿಲ್ಲ. ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?” ಎಂದು ಪ್ರಶ್ನಿಸಿದರು.

ಗರ್ಭಿಣಿಯರು, ಒಂದು ವರ್ಷದ ಮಕ್ಕಳು, ವಯಸ್ಸಾದವರು ಇರುವ ಬಡಾವಣೆಯಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. “ಹೊಟ್ಟೆನೋವು ಮೊದಲ ಎರಡು ದಿನಗಳು ಕಾಣಿಸಿಕೊಂಡಾಗ ಊಟದಲ್ಲಿ ಏನೋ ವ್ಯತ್ಯಾಸವಾಗಿರಬೇಕು ಎಂದುಕೊಂಡಿದ್ದೆ. ಕೊಳಾಯಿಯಲ್ಲಿ ಕಪ್ಪುಬಣ್ಣದ ನೀರು ಬಂದ ಬಳಿಕ ಅದು ಕಲುಷಿತ ನೀರು ಕುಡಿದಿರುವ ಸಮಸ್ಯೆ ಎಂಬುದು ಬೆಳಕಿಗೆ ಬಂತು,” ಎಂದು ರೋಜಾ ತಮ್ಮ ಕಷ್ಟವನ್ನು ವಿವರಿಸಿದ್ದಾರೆ.

ವಾಟ್ಸ್‌ಆಪ್ ಗುಂಪು ಎಚ್ಚರಿಕೆ: ತಪ್ಪಿದ ದುರಂತ

15 ದಿನಗಳ ಹಿಂದೆ ಕಲುಷಿತ ನೀರು ಬರುತ್ತಿರುವುದನ್ನು ಗಮನಿಸಿದ ಕೂಡಲೇ ಬಡಾವಣೆಯ ವಾಟ್ಸ್​​ಆ್ಯಪ್​ ಮೂಲಕ ಸ್ಥಳೀಯರು ಪರಸ್ಪರ ಮಾಹಿತಿ ಹಂಚಿಕೊಂಡರು. ಜಲಮಂಡಳಿ ನೀರಿನ ಬಳಕೆ ಸಂಪೂರ್ಣ ನಿಲ್ಲಿಸಿ, ಖಾಸಗಿ ಟ್ಯಾಂಕರ್‌ಗಳಿಂದ ನೀರು ತರಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಸಮಯ ಪ್ರಜ್ಞೆಯಿಂದಲೇ ಇಂದೋರ್‌ ಮಾದರಿಯ ದುರಂತವೊಂದು ತಪ್ಪಿದೆ. “ಸ್ವಲ್ಪ ಎಚ್ಚರ ತಪ್ಪಿದ್ದರೂ ಮಕ್ಕಳು, ಗರ್ಭಿಣಿಯರು ಸೇರಿದಂತೆ ಅನೇಕರ ಪ್ರಾಣಕ್ಕೆ ಕಲುಷಿತ ನೀರು ಎರವಾಗುತ್ತಿತ್ತು,” ಎಂದು ಮೋಸೆಸ್ ತಿಳಿಸಿದರು.

ದುಬಾರಿ ಟ್ಯಾಂಕರ್‌ಗಳಿಗೆ ಹಣ ಕೊಡುತ್ತಿರುವ ನಿವಾಸಿಗಳು

ಕಲುಷಿತ ನೀರನ್ನು ತಪ್ಪಿಸಲು ಸ್ಥಳೀಯರು ಖಾಸಗಿ ಟ್ಯಾಂಕರ್‌ಗಳಿಂದ ನೀರು ತರಿಸಿಕೊಂಡು ಕಾಯಿಸಿ ಕುಡಿಯುತ್ತಿದ್ದಾರೆ. ಆದರೆ ಪರಿಸ್ಥಿತಿಯ ಲಾಭ ಪಡೆದು ಟ್ಯಾಂಕರ್‌ಗಳು ದುಬಾರಿ ದರಗಳಲ್ಲಿ ನೀರು ಪೂರೈಸುತ್ತಿವೆ. ಬೇರೆ ಮಾರ್ಗವಿಲ್ಲದೆ ಬಾಟಲಿ ನೀರು, ಟ್ಯಾಂಕರ್ ನೀರಿಗೆ ಹಣ ತೆರುವಂತಾಗಿದೆ. “ಈಗ ಜಲಮಂಡಳಿಯವರು ಪರಿಶೀಲನೆ ನಡೆಸಿದ್ದು, ಶುಕ್ರವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ,” ಎಂದು ರೋಜಾ ತಿಳಿಸಿದರು.

ರೋಬೋಟಿಕ್ ಪರಿಶೀಲನೆ

ಕಲುಷಿತ ನೀರಿನ ವರದಿ ಬಂದ ತಕ್ಷಣ ಬೆಂಗಳೂರು ಜಲಮಂಡಳಿ ಕಾರ್ಯಪ್ರವೃತ್ತವಾಗಿದೆ. ಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಿ, ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನ ಬಳಸಿ ಕಲುಷಿತ ನೀರು ಮಿಶ್ರಣವಾಗಿರುವ ಸ್ಥಳ ಪತ್ತೆ ಮಾಡಲಾಗಿದೆ. ಪೈಪ್‌ಲೈನ್ ದುರಸ್ತಿ ಕಾರ್ಯ ನಡೆಯುತ್ತಿದ್ದು, ನೀರಿನ ಅಭಾವ ಎದುರಾಗದಂತೆ ‘ಸಂಚಾರಿ ಕಾವೇರಿ’ ಮೊಬೈಲ್ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.


ಲಿಂಗರಾಜಪುರಂನಲ್ಲಿ ಕಲುಷಿತ ನೀರಿನ ಸಮಸ್ಯೆ ಕುರಿತ ವಿಡಿಯೊ ಸ್ಟೋರಿಗೆ ಇಲ್ಲಿ ಕ್ಲಿಕ್‌ ಮಾಡಿ

Read More
Next Story