
ಎಬಿಡಿ ಶೋನಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್; ವೃತ್ತಿ ಜೀವನದ ಕಷ್ಟ ಬಿಚ್ಚಿಟ್ಟ ಯುವ ಪ್ರತಿಭೆ
ಸದ್ಯ ಡಬ್ಲ್ಯೂಪಿಎಲ್ (WPL) ಪಂದ್ಯಾವಳಿಯಲ್ಲಿ ಅಮೊಘ ಸಾಧನೆ ಮಾಡುತ್ತಿರುವ ಶ್ರೇಯಾಂಕ ಪಾಟೀಲ್, ಈ ಸಂದರ್ಶನದಲ್ಲಿ ತಮ್ಮ ಗಾಯದ ಸಮಸ್ಯೆಯ ಬಗ್ಗೆ ಆತಂಕಕಾರಿ ವಿಷಯ ಹಂಚಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್ ಆಗಿದ್ದ ಎಬಿ ಡಿವಿಲಿಯರ್ಸ್ ಅವರ ಜನಪ್ರಿಯ "360 ಶೋ"ನಲ್ಲಿ ಈ ಬಾರಿ ಕರ್ನಾಟಕದ ಪ್ರತಿಭಾನ್ವಿತ ಸ್ಪಿನ್ನರ್ ಹಾಗೂ ಡಬ್ಲ್ಹುಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚುತ್ತಿರುವ ಶ್ರೇಯಾಂಕ ಪಾಟೀಲ್ ಕಾಣಿಸಿಕೊಂಡಿದ್ದಾರೆ. 21ರ ಹರೆಯದಲ್ಲೇ ಮಹಿಳಾ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ಶ್ರೇಯಾಂಕ, ಎಬಿಡಿ ಜೊತೆಗಿನ ವಿಡಿಯೋ ಸಂವಾದದಲ್ಲಿ ತಮ್ಮ ಕ್ರಿಕೆಟ್ ಬದುಕಿನ ನೋವು ಮತ್ತು ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಕ್ರಿಕೆಟ್ ಬಿಡುವ ಯೋಚನೆ ಮಾಡಿದ್ದ ಶ್ರೇಯಾಂಕ
ಸದ್ಯ ಡಬ್ಲ್ಯೂಪಿಎಲ್ (WPL) ಪಂದ್ಯಾವಳಿಯಲ್ಲಿ ಅಮೊಘ ಸಾಧನೆ ಮಾಡುತ್ತಿರುವ ಶ್ರೇಯಾಂಕ ಪಾಟೀಲ್, ಈ ಸಂದರ್ಶನದಲ್ಲಿ ತಮ್ಮ ಗಾಯದ ಸಮಸ್ಯೆಯ ಬಗ್ಗೆ ಆತಂಕಕಾರಿ ವಿಷಯ ಹಂಚಿಕೊಂಡಿದ್ದಾರೆ. ಸತತ 14 ತಿಂಗಳುಗಳ ಕಾಲ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾಗ, ಒಂದು ಹಂತದಲ್ಲಿ ಕ್ರಿಕೆಟ್‌ನಿಂದ ದೂರ ಸರಿಯುವ ಅಥವಾ ಆಟ ಬಿಟ್ಟುಬಿಡುವ ಆಲೋಚನೆ ಬಂದಿತ್ತು ಎಂದು ಅವರು ಹೇಳಿದ್ದಾರೆ. ಗಾಯದ ಕಾರಣದಿಂದ ಅನುಭವಿಸಿದ ಮಾನಸಿಕ ಒತ್ತಡ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು ಎಂದು ಶ್ರೇಯಾಂಕ ಹೇಳಿಕೊಂಡಿದ್ದಾರೆ.
ಎಬಿಡಿ ಕಥೆಗೂ ಶ್ರೇಯಾಂಕ ಅನುಭವಕ್ಕೂ ಸಾಮ್ಯತೆ
ಶ್ರೇಯಾಂಕ ಅವರ ಮಾತುಗಳನ್ನು ಆಲಿಸಿದ ಎಬಿ ಡಿವಿಲಿಯರ್ಸ್, ತಾವೂ ಕೂಡ ತಮ್ಮ ವೃತ್ತಿಜೀವನದಲ್ಲಿ ಇಂತಹದ್ದೇ ಕಷ್ಟದ ದಿನಗಳನ್ನು ಕಳೆದಿರುವುದಾಗಿ ನೆನಪಿಸಿಕೊಂಡರು. ಗಾಯದಿಂದ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳುವುದು ಕೇವಲ ದೈಹಿಕ ಶಕ್ತಿಯಲ್ಲ, ಬದಲಾಗಿ ಅದೊಂದು ಸುದೀರ್ಘ ಮಾನಸಿಕ ಹೋರಾಟ ಎಂದು ಅವರು ಶ್ರೇಯಾಂಕ ಅವರಿಗೆ ಧೈರ್ಯ ತುಂಬಿದರು. ಎಬಿಡಿ ಅವರ ಕ್ರಿಕೆಟಿಂಗ್ ಆಕಾಂಕ್ಷೆ ಮತ್ತು ಚುರುಕುತನಕ್ಕೆ ನಾನು ದೊಡ್ಡ ಅಭಿಮಾನಿ ಎಂದು ಶ್ರೇಯಾಂಕ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳಾ ಕ್ರಿಕೆಟ್‌ನಲ್ಲಿ 'ಮಾನಸಿಕ ಸ್ಥೈರ್ಯ'ದ ಮಹತ್ವ
ಡಬ್ಲ್ಯೂಪಿಎಲ್ ಟೂರ್ನಿಯ ಕಳೆಗಟ್ಟುತ್ತಿರುವ ನಡುವೆಯೆ ಶ್ರೇಯಾಂಕ ಅವರ ಈ ವಿಡಿಯೋ ತುಣುಕು, ಕ್ರೀಡಾಪಟುಗಳ ಮಾನಸಿಕ ಆರೋಗ್ಯದ ಚರ್ಚೆಗೆ ಕಾರಣವಾಗಿದೆ. ಹಿನ್ನಡೆಗಳು ಎದುರಾದಾಗ ಅದಕ್ಕೆ ಕುಗ್ಗದೆ, ಅವುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಹೇಗೆ ಮರಳಿ ಬರಬೇಕು ಎಂಬುದಕ್ಕೆ ಶ್ರೇಯಾಂಕ ಪಾಟೀಲ್ ಅವರ ಈ ಮಾತುಗಳು ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ.

