
ಹೊಸ ಇನ್ನಿಂಗ್ಸ್ ಆರಂಭಿಸಿದ 'ಗಬ್ಬರ್': ಗೆಳತಿ ಸೋಫಿ ಶೈನ್ ಜೊತೆ ಶಿಖರ್ ಧವನ್ ನಿಶ್ಚಿತಾರ್ಥ!
ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಧವನ್, ತಮ್ಮ ಜೀವನದ ಈ ವಿಶೇಷ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ವೈಯಕ್ತಿಕ ಜೀವನದ ಹೊಸ ಪಯಣಕ್ಕೆ ನಾಂದಿ ಹಾಡಿದ್ದಾರೆ. ಕಳೆದ ಕೆಲವು ಸಮಯದಿಂದ ಸಾರ್ವಜನಿಕವಾಗಿ ಚರ್ಚೆಯಲ್ಲಿದ್ದ ತಮ್ಮ ಪ್ರೇಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿರುವ ಧವನ್, ಸೋಮವಾರ (ಜನವರಿ 12) ಗೆಳತಿ ಸೋಫಿ ಶೈನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಧವನ್, ತಮ್ಮ ಜೀವನದ ಈ ವಿಶೇಷ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಮವಾರ ಸಂಜೆ ಇನ್‌ಸ್ಟಾಗ್ರಾಮ್‌ನಲ್ಲಿ ಸೋಫಿ ಅವರೊಂದಿಗೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡ ಧವನ್, "ನಗುವಿನಿಂದ ಕನಸುಗಳವರೆಗೆ.. ನಮ್ಮ ನಿಶ್ಚಿತಾರ್ಥಕ್ಕೆ ಸಿಗುತ್ತಿರುವ ಪ್ರೀತಿ ಮತ್ತು ಹಾರೈಕೆಗಳಿಗೆ ನಾನು ಚಿರಋಣಿ. ನಾವು ಶಾಶ್ವತವಾಗಿ ಒಂದಾಗಿರಲು ನಿರ್ಧರಿಸಿದ್ದೇವೆ," ಎಂದು ಬರೆದುಕೊಂಡಿದ್ದಾರೆ.
ಧವನ್ ಮತ್ತು ಸೋಫಿ ಕಳೆದ ವರ್ಷ ಮೇ ರಂದು ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅಂದಿನಿಂದಲೂ ಇವರಿಬ್ಬರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು, ಈಗ ಅದಕ್ಕೆ ಅಧಿಕೃತ ತೆರೆ ಬಿದ್ದಿದೆ.
ಯಾರು ಈ ಸೋಫಿ ಶೈನ್?
ಶಿಖರ್ ಧವನ್ ಮನಗೆದ್ದ ಸೋಫಿ ಶೈನ್ ಮೂಲತಃ ಐರ್ಲೆಂಡ್ ದೇಶದವರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಸೋಫಿ ಅವರು ಅಮೆರಿಕ ಮೂಲದ ಪ್ರಸಿದ್ಧ ಹಣಕಾಸು ಸೇವಾ ಸಂಸ್ಥೆಯಾದ 'ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್'ನಲ್ಲಿ ಸೆಕೆಂಡ್ ವೈಸ್ ಪ್ರೆಸಿಡೆಂಟ್ ಹಾಗೂ ಪ್ರಾಡಕ್ಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐರ್ಲೆಂಡ್‌ನ ಲಿಮರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವಿ ಪಡೆದಿರುವ ಇವರು, ಪ್ರಸ್ತುತ ಯುಎಇ ನಲ್ಲಿ ನೆಲೆಸಿದ್ದಾರೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ವೇಳೆ ಮತ್ತು ಐಪಿಎಲ್ ಪಂದ್ಯಗಳ ವೇಳೆ ಧವನ್ ಅವರನ್ನು ಬೆಂಬಲಿಸಲು ಸೋಫಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಫೆಬ್ರವರಿಯಲ್ಲಿ ಹಸೆಮಣೆ ಏರಲಿರುವ ಜೋಡಿ
'ಹಿಂದೂಸ್ತಾನ್ ಟೈಮ್ಸ್' ವರದಿಯ ಪ್ರಕಾರ, ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿಯು ಫೆಬ್ರವರಿ ತಿಂಗಳಿನಲ್ಲಿ ವಿವಾಹವಾಗಲು ಯೋಜಿಸಿದೆ ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಧವನ್ ಹಂಚಿಕೊಳ್ಳುವ ತಮಾಷೆಯ ರೀಲ್ಸ್ ಮತ್ತು ವಿಡಿಯೋಗಳಲ್ಲಿ ಸೋಫಿ ಕೂಡ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಈ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಧವನ್ ತಮಗೆ ಮತ್ತೆ ಪ್ರೀತಿ ಸಿಕ್ಕಿರುವ ಬಗ್ಗೆ ಸುಳಿವು ನೀಡಿದ್ದರು, ಅದು ಈಗ ನಿಜವಾಗಿದೆ.
ನೋವಿನ ಹಾದಿ ದಾಟಿ ಬಂದ ಧವನ್
ಶಿಖರ್ ಧವನ್ ಅವರ ಮೊದಲ ದಾಂಪತ್ಯ ಜೀವನ ಸಾಕಷ್ಟು ಕಹಿ ನೆನಪುಗಳಿಂದ ಕೂಡಿತ್ತು. 2011ರಲ್ಲಿ ಆಯೆಶಾ ಮುಖರ್ಜಿ ಅವರನ್ನು ವಿವಾಹವಾಗಿದ್ದ ಧವನ್, 11 ವರ್ಷಗಳ ನಂತರ 2023 ರಲ್ಲಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ಸಂದರ್ಭದಲ್ಲಿ ದೆಹಲಿ ನ್ಯಾಯಾಲಯವು ಧವನ್ ಅವರು ಮಾನಸಿಕ ಕಿರುಕುಳ ಅನುಭವಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು. ಅಷ್ಟೇ ಅಲ್ಲದೆ, ತಮ್ಮ ಏಕೈಕ ಪುತ್ರ ಜೊರಾವರ್‌ನನ್ನು ಭೇಟಿಯಾಗಲು ಸಾಧ್ಯವಾಗದ ಬಗ್ಗೆ ಧವನ್ ಅನೇಕ ಬಾರಿ ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

